Site icon Vistara News

Shivamogga News: ಸಾಹಿತ್ಯಕ್ಕಿದೆ ವ್ಯಕ್ತಿತ್ವ ರೂಪಿಸುವ ಶಕ್ತಿ: ವೈಷ್ಣವಿ. ಆರ್

Makkala kannada sahitya sammelana inauguration at soraba

ಸೊರಬ: ಮಕ್ಕಳ ಮನಸ್ಸು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಗಳೊಂದಿಗೆ ಭಾವನೆಗಳನ್ನು ಪ್ರಚೋದಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕೆ ಇದೆ, ನೈತಿಕತೆಯೊಂದಿಗೆ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಾಹಿತ್ಯದ (Literature) ಅಭಿರುಚಿ ಹೊಂದಲು ಮಕ್ಕಳಿಗೆ ಪ್ರೇರೇಪಿಸಬೇಕಿದೆ ಎಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವೈಷ್ಣವಿ ಆರ್. ತಿಳಿಸಿದರು.

ತಾಲೂಕಿನ ಕೋಟಿಪುರ ಗ್ರಾಮದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲಾ ಆವರಣದಲ್ಲಿ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಅಜ್ಜಿ ಹೇಳುವ ಲಾಲಿ ಪದಗಳು, ಪ್ರಾಸಬದ್ಧ ಆಟದ ಪದಗಳು, ಒಗಟುಗಳು, ಕಥೆಗಳು ಮುಂತಾದ ಪಂಚತಂತ್ರದ ಕಥೆಗಳು ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದವು ಚೇತೋಹಾರಿ ಕವಿತೆಗಳು ಮಕ್ಕಳಲ್ಲಿ ಪ್ರಕೃತಿ ಪ್ರೇಮ ಮತ್ತು ಕಾಲ್ಪನಿಕ ಶಕ್ತಿಯನ್ನು ಬೆಳೆಸುವುದರ ಜತೆಗೆ ಸ್ಪರ್ಧಾ ಜಗತ್ತಿನಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಮಾಡುತ್ತಿದ್ದವು ಎಂದ ಅವರು, ನಿರಂತರವಾಗಿ ಕನ್ನಡ ಭಾಷೆಯನ್ನು ಬಳಸಿ, ಸಾಹಿತ್ಯದ ಬೆಳವಣಿಗೆಗೆ ಎಲ್ಲರೂ ಒಂದಾಗುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳೋಣ ಎಂದರು.

ಇದನ್ನೂ ಓದಿ: KPTCL ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ: ವರದಿ ಸಲ್ಲಿಕೆಗೆ ಸಮಿತಿ ರಚನೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, 2000 ವರ್ಷ ಇತಿಹಾಸವಿರುವ ಕನ್ನಡದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಶಿಕ್ಷಣದಲ್ಲಿ ಮಕ್ಕಳಿಗೆ ಕಥೆ, ಪ್ರಬಂಧ, ಕವನಗಳ ಬಗ್ಗೆ ತಿಳಿಸುವುದರ ಜತೆಗೆ ಬರವಣಿಗೆ ಕಡೆ ಒಲವು ತೋರುವಂತೆ ಮಾಡಬೇಕಿದೆ. ಮಕ್ಕಳಿಗೆ ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವ ರೀತಿ ಪಾಠ ಪ್ರವಚನಗಳು ನಡೆದಾಗ ಮಾತ್ರ ನೈತಿಕತೆಯ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಿದೆ ಎಂದರು. ಕಾರ್ಯಕ್ರಮವನ್ನು ಕು.ಸಂಧ್ಯಾ ಉದ್ಘಾಟಿಸಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Plane grounded : 303 ಭಾರತೀಯರಿದ್ದ ವಿಮಾನ ಫ್ರಾನ್ಸ್​ನಲ್ಲಿ ತುರ್ತು ಭೂಸ್ಪರ್ಶ

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ, ಕಾರ್ತಿಕ್ ಸಾಹುಕಾರ್, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಡಿ.ಎಸ್., ಕಸಾಪ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಪಾಣಿ, ಉಮೇಶ್ ಭದ್ರಾಪುರ, ಬಸವನಗೌಡ ಮಲ್ಲಾಪುರ, ಕದಂದರ ಸಾಬ್, ನಾಗರಾಜ್ ಗುತ್ತಿ, ಚರಿತ ಕಾರ್ತಿಕ್, ರೇಣುಕಮ್ಮ ಗೌಳಿ, ಸುನಿತಾ ವಿಜಯಪ್ರಸಾದ್, ಮಾಲತೇಶ್ ಹೆಗಡಿ ಕಟ್ಟಿ ಸಂಪತ್ ಕುಮಾರ್ ಎಚ್.ಸಿ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ಇತರರು ಉಪಸ್ಥಿತರಿದ್ದರು.

Exit mobile version