Site icon Vistara News

Shivamogga News : ಮೂತ್ರ ವಿಸರ್ಜನೆ ಮಾಡುವಾಗ ತುಂಡಾದ ಸ್ಲ್ಯಾಬ್‌; ಚರಂಡಿಗೆ ಬಿದ್ದು ವ್ಯಕ್ತಿ ಸಾವು

Man dies after slab collapses In Shivamogga

ಶಿವಮೊಗ್ಗ: ಕಳಪೆ ಕಾಮಗಾರಿಯಿಂದಾಗಿ ಅದೆಷ್ಟೋ ಅಮಾಯಕರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ಭಾನುವಾರವಷ್ಟೇ 6 ವರ್ಷದ ಬಾಲಕಿ ಮೇಲೆ ಸಿಮೆಂಟ್‌ ಜಿಂಕೆ ಮುರಿದು ಬಿದ್ದು ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಇದೀಗ ಚರಂಡಿಗೆ ಮುಚ್ಚಿದ್ದ ಸ್ಲ್ಯಾಬ್ ಕುಸಿದು ಬಿದ್ದು ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ಶಿವಮೊಗ್ಗ ನಗರದ ವಿನೋಬನಗರ ರೈಲ್ವೆ ಬ್ಯಾರಲಲ್ ರಸ್ತೆಯಲ್ಲಿ ಈ ದುರ್ಘಟನೆ (Shivamogga News) ನಡೆದಿದೆ. ಶಿವಮೊಗ್ಗ ನಗರದ ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ (45) ಮೃತ ದುರ್ದೈವಿ. ಗುಜರಿ ವ್ಯಾಪಾರ ಮಾಡುತ್ತಿದ್ದ ಮುತ್ತಪ್ಪ, ಮೂತ್ರ ವಿಸರ್ಜನೆಗೆಂದು ಹೋದಾಗ ಏಕಾಏಕಿ ಚರಂಡಿಯ ಸ್ಲ್ಯಾಬ್ ಕುಸಿದು ಬಿದ್ದಿದೆ. ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಮುತ್ತಪ್ಪ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದಿದೆ. ಕಲ್ಲುಗಳು ಬಿದ್ದ ರಭಸಕ್ಕೆ ಮುತ್ತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಳಪೆ ಕಾಮಗಾರಿಯಿಂದಲೇ ಮತ್ತಪ್ಪ ಮೃತಪಟ್ಟಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜತೆಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Fraud Case : ಈ ಖದೀಮರಿಗೆ ಕೈಗೆ ಸಿಕ್ಕ ಚಿನ್ನ ಜೇಬಿಗೆ ಬರಲಿಲ್ಲ; ಏನಿದು ಮಹಾ ಎಡವಟ್ಟು

ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಸಾವು

ಶಿವಮೊಗ್ಗ: ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗುವೊಂದು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್‌ನಲ್ಲಿ ನಡೆದಿತ್ತು. ಸಮೀಕ್ಷಾ (6) ಮೃತ ದುರ್ದೈವಿ.

ಭಾನುವಾರವಾಗಿದ್ದರಿಂದ (ಜ.28) ಸಮೀಕ್ಷಾಳ ಪೋಷಕರು ಆಟವಾಡಲು ಪಾರ್ಕ್‌ಗೆ ಕರೆತಂದಿದ್ದರು. ಈ ವೇಳೆ ಅಲ್ಲಿದ್ದ ಸಿಮೆಂಟ್‌ ಜಿಂಕೆ ಮೇಲೆ ಕುಳಿತಾಗ, ಏಕಾಏಕಿ ಮುರಿದು ಬಿದ್ದಿದೆ. ಸಮೀಕ್ಷಾಳ ಮೇಲೆ ಸಿಮೆಂಟ್‌ ಕಲ್ಲುಗಳು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸಮೀಕ್ಷಾಳನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಮೀಕ್ಷಾ ಮೃತಪಟ್ಟಿದ್ದಾಳೆ. ಅವೈಜ್ಞಾನಿಕ ಕಾಮಗಾರಿ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version