Site icon Vistara News

Shivamogga News: ಸೊರಬದಲ್ಲಿ ಮುಂದಿನ 1 ತಿಂಗಳಲ್ಲಿ 140 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಮಧು ಬಂಗಾರಪ್ಪ

Minister Madhu S Bangarappa pressmeet in soraba

ಸೊರಬ: ಮುಂದಿನ ಒಂದು ತಿಂಗಳಲ್ಲಿ ಸೊರಬ ತಾಲೂಕಿನಲ್ಲಿ 140 ಕೋಟಿ ರೂ. ವೆಚ್ಚಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ (Shivamogga News) ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ವರದಾ ನದಿಗೆ ಬ್ಯಾರೇಜ್ ಹಾಗೂ ತಡೆಗೋಡೆ ನಿರ್ಮಾಣಕ್ಕೆ 62 ಕೋಟಿ ರೂಪಾಯಿ ಮಂಜೂರಾಗಿದ್ದು ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.

ತಾಲೂಕಿನಲ್ಲಿ ಕೊರತೆ ಇರುವ ಶಿಕ್ಷಕರ ಶೇ. 95 ರಷ್ಟು ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ ಎಂದ ಅವರು, ಶಾಲಾ ಮಕ್ಕಳಿಗೆ ವಾರದ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು ಅಜೀಮ್ ಪ್ರೇಮ್‍ಜಿ ಫೌಂಡೇಶನ್‍ನ ಸಹಯೋಗದೊಂದಿಗೆ ಮುಂದಿನ ಮೂರು ವರ್ಷಗಳವರೆಗೆ ವಾರದ ಆರು ದಿನಗಳ ಕಾಲ ಮೊಟ್ಟೆ ವಿತರಿಸುವ ಕಾರ್ಯಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಸರ್ಕಾರ 1500 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ಭರಿಸಲಿದೆ.

ಇದನ್ನೂ ಓದಿ: Kasaragod News: ಕಾಸರಗೋಡು ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಧ್ವನಿಯಾಗಿದೆ: ಕೆ.ವಿ.ಪ್ರಭಾಕರ್

ಅಲ್ಲದೆ ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸರಬರಾಜು ಮಾಡಲು ಉದ್ದೇಶಿಸಿದ್ದು, ಪ್ರತಿ ದಿನ ಬೆಳಿಗ್ಗೆ 55 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ ಎಂದರು.

ಸೊರಬ-ಶಿರಾಳಕೊಪ್ಪ ಮತ್ತು ಆನವಟ್ಟಿ ಸುತ್ತಮುತ್ತಲ ಪ್ರದೇಶಗಳ 354 ಗ್ರಾಮಗಳ ನಿವಾಸಿಗಳಿಗೆ ಶರಾವತಿ ನದಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸುಮಾರು 600 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಶೀಘ್ರದಲ್ಲಿ ಕಾರ್ಯಾರಂಭಗೊಳ್ಳುವ ಆಶಯ ಹೊಂದಲಾಗಿದೆ.

ತಾಲೂಕಿನ ಜನರಿಗೆ ಯಾವುದೇ ಅಡಚಣೆಯಾಗದಂತೆ ದಂಡಾವತಿ ನದಿಯ ನೀರನ್ನು ಎರಡು ಕೆನಾಲ್‍ಗಳ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ತಾಲೂಕಿನಲ್ಲಿ ವಿವಿಧ ಕೆನಾಲುಗಳ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ ಚಾನಲ್‍ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ವಿಶೇಷ ಗಮನ ಹರಿಸಲಾಗುವುದು ಎಂದರು.

ಅರಣ್ಯದಂಚಿನಲ್ಲಿ ವಾಸಿಸುವ ವನವಾಸಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಕ್ರಮವಹಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಸರ್ಕಾರದ ವತಿಯಿಂದ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: Book Brahma Lit Fest: ಬೆಂಗಳೂರಿನಲ್ಲಿ ಆ.9ರಿಂದ 3 ದಿನಗಳ ‘ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ -2024’

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಎಚ್. ಗಣಪತಿ, ಮುಖಂಡರಾದ ಎಂ.ಡಿ. ಶೇಖರ್, ಕೆ.ಪಿ. ರುದ್ರಗೌಡ ಸೇರಿದಂತೆ ಇತರರು ಇದ್ದರು.

Exit mobile version