ರಿಪ್ಪನ್‌ಪೇಟೆ: “ಕನ್ನಡದ ಆದಿಕವಿ ಪಂಪ ತನ್ನ ಸಾಹಿತ್ಯದಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಕೊಟ್ಟಿರುವ ಏಕೈಕ ಕವಿ. ಕನ್ನಡದ ಅಗ್ರಮಾನ್ಯ ಕವಿಯಾದ ಪಂಪ ಸರ್ವಕಾಲಕ್ಕೂ ಸಲ್ಲುವ ಕವಿ” ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಬಿ.ಎಂ. ಜಯಶೀಲ (Shivamogga News) ಹೇಳಿದರು.
ಜಯಶೀಲ ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹೊಂಬುಜ ಜೈನ ಮಠ ಹುಂಚದ ದತ್ತಿದಾನದಲ್ಲಿ ಬುಧವಾರ ನಡೆದ “ಪಂಪ ಜಯಂತ್ಯುತ್ಸವ” ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಇದನ್ನೂ ಓದಿ: Shivamogga Rural Election Results: ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದೆಗೆ ಕೃಪೆ; ಮತ್ತೆ ಜೆಡಿಎಸ್ ತೆಕ್ಕೆಗೆ ಕ್ಷೇತ್ರ
“ಜೈನ ಧರ್ಮದ ಪ್ರಸ್ತುತಿ, ಪ್ರಚಾರ, ಮಾನವನ ಮಹೋನ್ನತ ಚರಿತ್ರೆಯನ್ನು ಪರಿಚಯಿಸಿದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪನ ಕೃತಿಯಲ್ಲಿ ಕಾವ್ಯ ಧರ್ಮವೂ ಇದೆ, ಧರ್ಮವೂ ಇದೆ ಹೀಗಾಗಿ ಪಂಪ ಶ್ರೇಷ್ಠ ಕವಿಯಾಗಿ ಮೆರೆದಿದ್ದಾನೆ” ಎಂದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ. ಮ. ನರಸಿಂಹ ಅವರು ಪ್ರಾಸ್ತಾವಿಕ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಟಿ. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಎನ್. ಮಂಜುನಾಥ್ ಕಾಮತ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಆರ್. ನಾಗಭೂಷಣ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರತ್ನಾಕರ ಕುನುಗೋಡು, ಹ.ಅ. ಪಾಟೀಲ್, ರತ್ನಯ್ಯ. ಡಿ. ಗಣೇಶ್, ಸತೀಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಸಭೆಯ ಮೊದಲಲ್ಲಿ ಕುಮಾರಿ ಮಾನಸ ಪ್ರಾರ್ಥನೆ ಮಾಡಿದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರತ್ನಾಕರ ಕುನುಗೋಡು ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ಮಂಜುಳಾ ನಿರೂಪಿಸಿದರು.