Site icon Vistara News

Shivamogga News: ಅಶಕ್ತರಿಗೆ ಉಚಿತ ಕಾನೂನು ಸಲಹೆಗೆ ಕ್ರಮ: ನ್ಯಾಯಮೂರ್ತಿ ವೀರಪ್ಪ

#image_title

ಶಿವಮೊಗ್ಗ: ಕ್ಷುಲ್ಲಕ ಕಾರಣಗಳಿಂದಾಗಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಾಗೂ ಕಾನೂನು ಸಲಹೆ ತೆಗೆದುಕೊಳ್ಳಲು ಅಶಕ್ತರಾಗಿರುವವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಕಾನೂನು ಸಲಹೆಯನ್ನು ನೀಡಲಾಗುವುದು. ಅರ್ಹರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ (Shivamogga News) ಹೇಳಿದರು.

ಅವರು ಶುಕ್ರವಾರ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಿ, ಕೈದಿಗಳಿಗೆ ನೀಡುತ್ತಿರುವ ಆಹಾರ, ಮೂಲಭೂತ ಸೌಕರ್ಯಗಳು, ಮತ್ತಿತರ ವಿಷಯಗಳ ಕುರಿತು ಸಜಾಬಂಧಿಗಳಿಂದ ಮಾಹಿತಿ ಪಡೆದರು.

ಇದನ್ನೂ ಓದಿ: Karnataka BJP: ಮುಸಲ್ಮಾನರಂತೆ, ಸುನ್ನತ್‌ ಆದವರಂತೆ ಮಾತಾಡುತ್ತಿದ್ದಾರೆ: ಆಯನೂರು ಮಂಜುನಾಥ್‌ ವಿರುದ್ಧ ಶಿವಮೊಗ್ಗ ಬಿಜೆಪಿ ದೂರು

ಬಂಧಿತರಿಗೆ ಉಚಿತ ಕಾನೂನು ಸಲಹೆ ನೀಡಲು ರಾಜ್ಯ ಮಟ್ಟದಲ್ಲಿ ಕಾನೂನು ಸಲಹಾ ಕೇಂದ್ರವನ್ನು ಆರಂಭಿಸಲಾಗಿದೆ. ಬಹುದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಮೊಕದ್ದಮೆಗಳನ್ನು ನ್ಯಾಯವಾದಿಗಳು ಹಾಗೂ ವಿಚಾರಣಾಧೀನ ವ್ಯಕ್ತಿಗಳ ಸಹಕಾರದಿಂದ ತ್ವರಿತವಾಗಿ ಇತ್ಯರ್ಥ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಬಂಧಿಖಾನೆಯಲ್ಲಿ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ಖುದ್ದು ತಾವೇ ಪರಿಶೀಲನೆ ನಡೆಸಿ ಖಚಿತ ಪಡಿಸಿಕೊಂಡರಲ್ಲದೆ ಗ್ರಂಥಾಲಯ, ಶೌಚಾಲಯ, ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅನೇಕ ವರ್ಷಗಳಿಂದ ಸಜಾಬಂಧಿಗಳಾಗಿರುವವರಿಗೆ ಚಿಕ್ಕ ಮಕ್ಕಳು ಇದ್ದಲ್ಲಿ ಅಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸೌಲಭ್ಯ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಜೈ ಶಂಕರ್, ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣವರ, ಬಂಧೀಖಾನೆ ಅಧೀಕ್ಷಕಿ ದಾ.ಆರ್. ಅನಿತಾ ಮುಂತಾದವರು ಉಪಸ್ಥಿತರಿದ್ದರು.

Exit mobile version