ರಿಪ್ಪನ್‌ಪೇಟೆ: ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ (Private Bus) ಮಗುವಿನೊಂದಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ (Treatment) ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಜರುಗಿದೆ.
ಮೃತ ವ್ಯಕ್ತಿ ಕುಮಾರ್ ಆರ್ (62) ಎಂದು ಗುರುತಿಸಲಾಗಿದೆ. ಮೂಲತಃ ಮಡಿಕೇರಿಯವನಾದ ಈತನು ಕಳೆದೊಂದು ವರ್ಷದಿಂದ ಚಿಕ್ಕಜೇನಿ ಗ್ರಾಮದ ತಮ್ಮ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು.
ಕಳೆದ ಮಂಗಳವಾರ ರಿಪ್ಪನ್‌ಪೇಟೆ ವ್ಯಾಪ್ತಿಯ ಕೋಡೂರು ಗ್ರಾಮ ಪಂಚಾಯತಿಯ ಶಾಂತಪುರದಲ್ಲಿ ಹೊಸನಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಖಾಸಗಿ ಬಸ್‌ಗೆ ಕೀಳಂಬಿ ಬಸ್ ನಿಲ್ದಾಣದಲ್ಲಿ ಮಗು (ಮೊಮ್ಮಗ) ವಿನೊಂದಿಗೆ ಬಸ್ ಏರಿದ್ದ ಈತನು, ಕೇವಲ 200 ಮೀ. ದೂರ ಸಾಗುವಷ್ಟರಲ್ಲಿ ಬಸ್‌ನಿಂದ ಕೆಳಗೆ ಬಿದಿದ್ದರು, ಈ ವೇಳೆ ತಲೆ, ಕೈ, ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ಗಾಯಾಳು ವ್ಯಕ್ತಿಗೆ ಕೂಡಲೇ ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಸಂಜೆ ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: Viral News: ಕಾರಿನಲ್ಲಿ ವೇಗವಾಗಿ ಸಾಗುವ ಮುನ್ನ ಗಮನಿಸಿ; ಈತನಿಗೆ ಬಿದ್ದ ಫೈನ್ ಬರೋಬ್ಬರಿ 11.65 ಕೋಟಿ ರೂ.!
ಬಸ್‌ನಲ್ಲಿ ಅಧಿಕ ಜನ ತುಂಬಿದ್ದು, ತಿರುವಿನಲ್ಲಿ ಚಾಲಕ ಅಜಾಗರೂಕತೆಯಿಂದ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಈ ಘಟನೆ ನಡೆದಿತ್ತು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.