ರಿಪ್ಪನ್‌ಪೇಟೆ: ಸರ್ವತ್ರ ಆಧುನಿಕ ತಂತ್ರಜ್ಞಾನದ (Technology) ಬಳಕೆಯಿಂದ ಪ್ರತಿಯೊಬ್ಬರೂ ವಿದ್ಯಾವಂತರಾಗಿ, ಸದಾ ಅಧ್ಯಯನಶೀಲರಾಗಿ, ಜ್ಞಾನಸಂಪತ್ತು ವರ್ಧಿಸುವಂತಾಗಲಿ ಎಂದು ಹೊಂಬುಜದ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದರು.
ಹೊಂಬುಜ ಜೈನ ಮಠದಲ್ಲಿ ವಿಜಯ ದಶಮಿ ಪ್ರಯುಕ್ತ ಮಂಗಳವಾರ ಆಯೋಜಿಸಲಾಗಿದ್ದ ‘ವಿಜಯಿ ಭವಿ’ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಉತ್ತಮ ಬಾಳ್ವೆಯ ಕನಸು ನನಸಾಗಿ ಆಧ್ಯಾತ್ಮಿಕ ಚಿಂತನೆಯ ಶ್ರೀಫಲ ಎಲ್ಲೆಡೆ ದುಃಖ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಹೇಳಿದರು.
ಐತಿಹಾಸಿಕ ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸಹಿತ ಚತುಃರ್ವಿಂಶತಿ ತೀರ್ಥಂಕರರಿಗೆ ಆಗಮೋಕ್ತ ಪದ್ಧತಿಯಂತೆ ಪೂಜೆ, ಪ್ರಾರ್ಥನೆ ಸಮರ್ಪಿಸಲಾಯಿತು.
ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ
ಬನ್ನಿ ಮಂಟಪದಲ್ಲಿ ಶಮಿವೃಕ್ಷ ಪೂಜೆ
ಪರಂಪರಾನುಗತವಾಗಿ ಆಚರಿಸುವ ಶಮೀ ವೃಕ್ಷ ಪೂಜೆಯನ್ನು ಶ್ರೀ ಕ್ಷೇತ್ರದ ಉತ್ಸವ ಮೂರ್ತಿಯ ಸಾನಿಧ್ಯದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಶ್ರೀಕ್ಷೇತ್ರದಿಂದ ಬನ್ನಿ ಮಂಟಪದವರೆಗೆ ಸಾಲಂಕೃತ ಮೆರವಣಿಗೆಯಲ್ಲಿ ಆನೆ, ಕುದುರೆ ಸಹಿತ ವಾದ್ಯಗೋಷ್ಠಿಯನ್ನು ಆಯೋಜಿಸಲಾಗಿತ್ತು. ಭಕ್ತರು ವಿಜಯದಶಮಿ ಪ್ರಯುಕ್ತ ಶಮೀ ಪತ್ರಿಗಳನ್ನು ಶ್ರೀಗಳಿಂದ ಸ್ವೀಕರಿಸಿದರು.