ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಬರಪೀಡಿತದ ವರದಿ ಅವೈಜ್ಞಾನಿಕವಾಗಿದೆ, ಮಲೆನಾಡಿನ ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ (Rain) ಬಾರದಿದ್ದು, ಇದರಿಂದ ರೈತರು (Farmers) ತಮ್ಮ ಸಂಪೂರ್ಣ ಬೆಳೆಯನ್ನು (Crop) ಕಳೆದುಕೊಂಡಿದ್ದು ಸರ್ಕಾರ ನೆಪಕ್ಕೆ ಮಾತ್ರ ಅಧಿಕಾರಿಗಳಿಂದ ವರದಿ ತರಿಸಿ ಶಿವಮೊಗ್ಗ ಜಿಲ್ಲೆಗೆ ಅನ್ಯಾಯ ಮಾಡಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್ ಆರೋಪಿಸಿದರು.
ರಿಪ್ಪನ್‌ಪೇಟೆ ಪಟ್ಟಣದ ನಾಡಕಚೇರಿಯ ಮುಂಭಾಗ ರಾಜ್ಯ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ನಾಡಕಛೇರಿಯ ಉಪ ತಹಸೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಿ, ಬಳಿಕ ಮಾತನಾಡಿ, ವಿಶೇಷವಾಗಿ ಹೊಸನಗರ ತಾಲೂಕಿನಲ್ಲೂ ಸುಮಾರು 15 ಸಾವಿರ ಹೆಕ್ಟೇರ್ ಭತ್ತದ ಬೆಳೆ, 800 ಹೆಕ್ಟರ್ ಜೋಳದ ಬೆಳೆ ನಾಶವಾಗಿದ್ದು, ಅಧಿಕಾರಿಗಳು ನೀಡಿರುವ ವರದಿ ಕೇವಲ ಅರ್ಧದಷ್ಟಿರುತ್ತದೆ.
ಹೀಗೆಯೇ ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಸಹ ಭತ್ತದ ಬೆಳೆ, ಜೋಳದ ಬೆಳೆ ಸರ್ವನಾಶವಾಗಿದೆ. ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರ ತರಿಸಿಕೊಂಡಿರುವ ವರದಿಯನ್ನು ತಿರಸ್ಕರಿಸಿ, ಸಮಗ್ರ ವರದಿಯನ್ನು ತರಿಸಿಕೊಂಡು ರೈತರಿಗೆ ಪರಿಹಾರ ನೀಡುವಲ್ಲಿ ಮಧ್ಯಪ್ರವೇಶ ಮಾಡಲು ಆಗ್ರಹಿಸಿದರು.
ಇದನ್ನೂ ಓದಿ: ಕಿರಿಕಿರಿಯುಂಟು ಮಾಡುವ ಎಸ್ಸೆಮ್ಮೆಸ್, ಧ್ವನಿ ಕರೆಗಳಿಗೆ ಟ್ರಾಯ್ ಬ್ರೇಕ್!
ಜೆಡಿಎಸ್ ಜಿಲ್ಲಾ ಮುಖಂಡ ಆರ್.ಎನ್. ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ರೈತರು ಬಿತ್ತಿದ ಭತ್ತ, ಜೋಳ ಸಕಾಲಕ್ಕೆ ಮಳೆ ಬಾರದಿದ್ದರಿಂದ ನೆಲಕಚ್ಚಿ ಹೋಗಿರುತ್ತದೆ. ಜಾನುವಾರುಗಳಿಗೆ ಮೇವಿನ ಕೊರತೆ ಸಹ ಇದೆ, ಕುಡಿಯುವ ನೀರಿನ ಬವಣೆ ಜಾಸ್ತಿ ಆಗಿದೆ. ಈಗಾಗಲೇ ಹೊಸನಗರ ತಾಲೂಕಿನಲ್ಲಿ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಹೊಸನಗರ 5343 ಹೆಕ್ಟೇರ್ ಭತ್ತ, 265 ಹೆಕ್ಟೇರ್ ಜೋಳ, ತೀರ್ಥಹಳ್ಳಿಯಲ್ಲಿ 7156 ಹೆಕ್ಟೇರ್ ಭತ್ತ, ಸಾಗರ 8913 ಹೆಕ್ಟೇರ್ ಮಳೆಯಾಧಾರಿತ ಜಮೀನು, 1598 ಹೆಕ್ಟೇರ್ ನೀರಾವರಿ ಬೆಳೆ, 1723 ಹೆಕ್ಟೇರ್ ಜೋಳದ ಬೆಳೆ ಹಾಗೂ ಜಿಲ್ಲೆಯಾದ್ಯಂತ ಶೇ 33% ಕ್ಕಿಂತ ಅತಿಹೆಚ್ಚು ಬರಗಾಲವಿದ್ದು, ಬೆಳೆಗಳು ಶೇಕಡವಾರು ನಾಶವಾಗಿದೆ,
ಆದರೆ ಸಮರ್ಪಕವಾಗಿ ಆಯಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ವರದಿ ತಯಾರು ಮಾಡುವ ಪ್ರಕ್ರಿಯೆ ನಡೆದಿಲ್ಲ ಎಂದು ಆರೋಪಿಸಿದ ಅವರು, ಇದೊಂದು ಕಣ್ಣು ಒರೆಸುವ ತಂತ್ರವಾಗಿದೆ, ಜಿಲ್ಲೆಯಾದ್ಯಂತ ಅಡಿಕೆ ಮತ್ತು ಇತರೆ ಸಾಂಬಾರು ಬೆಳೆಗಳು ನೀರಿಲ್ಲದೆ ಬೆಳೆ ಶೇ 40೦ ಕ್ಕೆ ಇಳಿಕೆಯಾಗಿದೆ. ಅದರ ಪೂರ್ಣವರದಿ ನೀಡಿಲ್ಲ ಹಾಗೂ ರೈತರು ಬೆಳೆದಿರುವ ಸಾಂಬಾರು ಬೆಳೆ, ಇತರೆ ಬೆಳೆಗಳು ಬರದಿಂದ ನಾಶವಾಗಿವೆ.
ಈ ಹಿನ್ನಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ, ಮಲೆನಾಡಿನ ಮುಖ್ಯಭಾಗವಾದ ಶಿವಮೊಗ್ಗ ಜಿಲ್ಲೆಯ ಸಮಗ್ರ ವರದಿಯನ್ನು ತರಿಸಲು ಜಂಟಿ ನೇತೃತ್ವದಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ವರದಿ ತರಿಸಿಕೊಂಡು ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಕ್ತ ಆದೇಶ ನೀಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Deepavali 2023: ದೀಪಾವಳಿಯ ಹಿಂದೆ ಎಷ್ಟೊಂದು ಆಸಕ್ತಿದಾಯಕ ಕಥೆಗಳು! ತಪ್ಪದೇ ಓದಿ
ಪ್ರತಿಭಟನೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಜಿಲ್ಲಾ ಜೆಡಿಎಸ್ ಮುಖಂಡ ದೂನ ರಾಜು, ಮಲ್ಲೇಶ್ ಅಲುವಳ್ಳಿ, ಹೊಳೆಯಪ್ಪಗೌಡ, ಕುಕ್ಕಳಲೇ ಯೋಗೇಂದ್ರ, ಆಣ್ಣಪ್ಪ, ನಾಗರಾಜ, ಮಸರೂರು ಈಶ್ವರಪ್ಪ, ಗಣೇಶ ಹೊಸಮನೆ, ಮೇಲೋಜಿರಾವ್, ರೇಣುಕಪ್ಪ ನೆವಟೂರು ಇನ್ನಿತರರು ಪಾಲ್ಗೊಂಡಿದ್ದರು.