ಸೊರಬ: ತಮ್ಮ ಜೀವನದಲ್ಲಿ (Life) ಸಾವಿರಾರು ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಿ ಬದುಕಿನಲ್ಲಿ ಶಾಶ್ವತವಾದ ಆನಂದವನ್ನು (Happiness) ಪಡೆದವರು ನಮ್ಮ ಶರಣರಾಗಿದ್ದರು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದಿಂದ ಆಯೋಜಿಸಿದ್ದ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶರಣರ ಜೀವನದ ಮೌಲ್ಯಗಳನ್ನು ಕೇವಲ ವೇದಿಕೆಯಲ್ಲಿ ಮಾತಾಡದೆ ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಲಿಂಗನಿಷ್ಟೆಯನ್ನು ಹೊಂದಬೇಕು. ಅರಿವು – ಆಚಾರವನ್ನು ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Shivamogga News: ಸಮಾಜದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರಿಗೆ ಪೋಷಕರ ಸಹಕಾರ ಅಗತ್ಯ: ಡಾ. ಮಹಾಂತ ಸ್ವಾಮೀಜಿ
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಜಡೆ ಸಂಸ್ಥಾನ ಮಠದ ಮಹಾಂತ ಮಹಾಸ್ವಾಮಿಗಳು ಶ್ರಾವಣ ಮಾಸ ಒಳ್ಳೆಯದನ್ನು ಕೇಳುವ ಮಾಸವಾಗಿದೆ. ಅಕ್ಕನ ಬಳಗದ ತಾಯಂದಿರು ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ. ನಮ್ಮ ಮಾತು ಸ್ಮರಣಿಯವಾಗಿರಬೇಕು. ಮಾತು ಮನಸ್ಸಿನ ಭಾವನೆಗಳನ್ನು ಪ್ರಕಟಪಡಿಸುತ್ತದೆ. ಮಾತೆಂಬುದು ಜ್ಯೋತಿರ್ಲಿಂಗ. ನಾವು ಹೇಗೆ ಮಾತನಾಡಬೇಕು ಎಂಬುದನ್ನು ಶರಣರ ಜೀವನದ ಮೂಲಕ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಬಾರಂಗಿ, ಕಾರ್ಯದರ್ಶಿ ಗುರುಕುಮಾರ ಪಾಟೀಲ್, ವೀರಶೈವ ಸಮಾಜದ ಹಿರಿಯ ಚೌಟಿ ಚಂದ್ರಶೇಖರ ಗೌಡ, ವೀರಶೈವ ಬ್ಯಾಂಕಿನ ಅಧ್ಯಕ್ಷೆ ಎಚ್.ಎಂ. ಪ್ರೇಮಾ ಹಾಗೂ ಗೀತಾ ಮಲ್ಲಿಕಾರ್ಜುನ ಮಾತನಾಡಿದರು.
ಇದನ್ನೂ ಓದಿ: Asia Cup 2023 : ಏಷ್ಯಾ ಕಪ್ ಫೈನಲ್ ಪಂದ್ಯ ಪಲ್ಲೆಕೆಲೆಗೆ ಶಿಫ್ಟ್
ಈ ಸಂದರ್ಭದಲ್ಲಿ ಆನವಟ್ಟಿ ಮಹಿಳಾ ಬಳಗದ ಮಮತಾ ಪಾಟೀಲ್, ಸುಧಾಶಿವಪ್ರಸಾದ ಹಾಗೂ ಇತರರು ಪಾಲ್ಗೊಂಡಿದ್ದರು.