Site icon Vistara News

Shivamogga News: ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು: ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ

Former Speaker Kagodu Thimmappa inaugurated the 11th Foundation Day program of the University of Agriculture and Horticulture Sciences

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿಶ್ವವಿದ್ಯಾಲಯವಾಗಿ (Farmers University) ಬೆಳೆಯಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಜಿಲ್ಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಇರುವಕ್ಕಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತಾಡಿದರು.

ಯಾವ ಭೂಮಿಯಲ್ಲಿ ಎಂತಹ ಬೆಳೆಯನ್ನು ಬೆಳೆಯಬೇಕೆಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಲು ಪಂಚಾಯಿತಿವಾರು ಕನಿಷ್ಟ 50 ಜನರಿಗೆ ಕಾರ್ಯಾಗಾರಗಳನ್ನು ವಿಶ್ವವಿದ್ಯಾಲಯ ಕೈಗೊಳ್ಳಬೇಕು. ರೈತರ ಇಳುವರಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನೆ, ಪ್ರಯೋಗಗಳನ್ನು ಕೈಗೊಂಡಲ್ಲಿ ರೈತರು ಸಹ ಕೈ ಜೋಡಿಸುತ್ತಾರೆ.

ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳ ಶ್ರಮದಿಂದ ಇನ್ನೂ ಚೆನ್ನಾಗಿ ವಿವಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಬೋಧಕ ಬೋಧಕೇತರ ವರ್ಗದವರು ಇಲ್ಲಿಯೇ ವಾಸಿಸುವಂತಾದರೆ ವಿವಿ ಕುರಿತಾದ ಆಸಕ್ತಿ , ಒಲವು ಹೆಚ್ಚುತ್ತದೆ. ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು, ಕೃಷಿ ಸಚಿವರನ್ನು ಭೇಟಿಯಾಗಿ ವಸತಿ ಗೃಹಗಳನ್ನು ನೀಡಲು ಮನವಿ ಮಾಡುತ್ತೇನೆ. ಭವಿಷ್ಯದಲ್ಲಿ ಉತ್ಕೃಷ್ಟವಾದ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು. ಈ ನೆಲ, ಮಣ್ಣು ನೋಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಬೇಕು ಎಂದರು.

ಇದನ್ನೂ ಓದಿ: ind vs aus : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ ಸಾಧಿಸುವುದೇ ಭಾರತ?

ಪ್ರಗತಿಪರ ರೈತ ದೊಡ್ಡಗೌಡ ಸಿ ಪಾಟೀಲ್ ಮಾತನಾಡಿ, 7 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ವಿಶ್ವವಿದ್ಯಾಲಯ ವೈವಿಧ್ಯತೆ ಹೊಂದಿದೆ. ವಿವಿ ಗೆ ಮೊದಲ ಹಂತದಲ್ಲಿ ರೂ. 150 ಮತ್ತು ನಂತರ ರೂ.38 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ವಿವಿ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ . ಇತ್ತೀಚೆಗೆ 108 ಪ್ರೊಫೆಸರ್‌ಗಳ ನೇಮಕ ಆಗಿದೆ. ವಿವಿಯಲ್ಲಿ ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಇದೆ. ಎಂಜಿನಿಯರಿಂಗ್ ಗಿಂತ ಕೃಷಿ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಬೆಳೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6 ಹೊಸದಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ವಿವಿಯಲ್ಲಿ ಆರಂಭಿಸಲಾಗುವುದು ಹಾಗೂ ವಿಶ್ವವಿದ್ಯಾಲಯದ ಸಾಧನೆಗಳ ಬಗ್ಗೆ ತಿಳಿಸಿ, ಮುಂಬರುವ ದಿನಗಳಲ್ಲಿ ಈ ಆವರಣ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಇದನ್ನೂ ಓದಿ: Weather Report : 20 ಜಿಲ್ಲೆಗಳಲ್ಲಿ ಮಳೆರಾಯನಿಗೆ ಬಿಡುವೇ ಇಲ್ಲ!

ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅತ್ಯುತ್ತಮ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ನಿವೃತ್ತರಾದ ಶಿಕ್ಷಕ, ಸಿಬ್ಬಂದಿ ವರ್ಗವನ್ನು ಗೌರವಿಸಲಾಯಿತು.

ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಪ್ರಗತಿಪರ ರೈತರಾದ ವೀರಭದ್ರಪ್ಪ ಪೂಜಾರಿ, ಶಿಕ್ಷಣ ತಜ್ಞ ಪಿ ಕೆ.ಬಸವರಾಜ ಮಾತನಾಡಿದರು. ಪ್ರಗತಿಪರ ರೈತ ನಾಗರಾಜ್, ಕೃಷಿ ಉದ್ದಿಮೆದಾರ ಬಿ. ಕೆ. ಕುಮಾರಸ್ವಾಮಿ, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್ ಸ್ವಾಗತಿಸಿದರು.

Exit mobile version