ಸಾಗರ: “ಶರಾವತಿ ಹಿನ್ನೀರ ಮುಳುಗಡೆ (Sharavati Backwater) ಸಂತ್ರಸ್ತ 305 ರೈತರನ್ನು ಒಕ್ಕಲೆಬ್ಬಿಸದಂತೆ ರಾಜ್ಯ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ” ಎಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಸಿಗಂದೂರು (Shivamogga News) ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಸರ್ಕಾರ ಡಿನೋಟಿಫಿಕೇಶನ್ ಮಾಡಿರುವುದನ್ನು ಪ್ರಶ್ನಿಸಿ ಮೊದಲ ಹಂತದಲ್ಲಿ 305 ರೈತರು ನ್ಯಾಯಾಲಯಕ್ಕೆ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಸರ್ಕಾರ ಅರ್ಜಿದಾರ ರೈತರಿಗೆ ತೊಂದರೆ ಕೊಡದಂತೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿದೆ” ಎಂದು ಹೇಳಿದರು.
“1957ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಸುಮಾರು 180 ಹಳ್ಳಿಗಳ 15549 ಎಕರೆ ಕೃಷಿಭೂಮಿ ಮುಳುಗಡೆಯಾಗಿತ್ತು. ಇದರಿಂದ ಸುಮಾರು ಏಳು ಸಾವಿರಕ್ಕೂ ಹೆಚ್ಚಿನ ಕುಟುಂಬ ಅತಂತ್ರವಾಗಿತ್ತು. ಅಂದು ನಿರಾಶ್ರಿತವಾಗಿರುವ ಕುಟುಂಬ ಇಂದು 21 ಸಾವಿರವನ್ನು ದಾಟಿದೆ. ಮುಳುಗಡೆ ಸಂತ್ರಸ್ತರನ್ನು ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಸಂತ್ರಸ್ತರಿಗೆ ನೀಡಿದ ಭೂಮಿಹಕ್ಕನ್ನು ಅವರ ಹೆಸರಿಗೆ ಮಾಡಿರಲಿಲ್ಲ. ಇದರಿಂದ ಆಳುವ ಸರ್ಕಾರಗಳು ಮುಳುಗಡೆ ಸಂತ್ರಸ್ತರನ್ನು ಪದೇಪದೆ ಒಕ್ಕಲೆಬ್ಬಿಸುವ ಮಾತು ಹೇಳಿಕೊಂಡು ಬರುತ್ತಿತ್ತು” ಎಂದರು.
ಇದನ್ನೂ ಓದಿ: Karnataka Election 2023 : ಬೆಂಗಳೂರಿನಲ್ಲಿ ವರಿಷ್ಠರ ಟಾರ್ಗೆಟ್ ಮುಟ್ಟದ ಬಿಜೆಪಿ; ಅಮಿತ್ ಶಾ ಗರಂ
“ಇತ್ತೀಚೆಗೆ ಶರಾವತಿ ಸಂತ್ರಸ್ತ ರೈತರಿಗೆ ನೀಡಿದ ಭೂಮಿಯ ಡಿನೋಟಿಫಿಕೇಶನ್ ಆದೇಶವನ್ನು ರದ್ದುಗೊಳಿಸಿ ಸರ್ಕಾರ ರಾಜ್ಯಪತ್ರ ಹೊರಡಿಸಿತ್ತು. ರಾಜ್ಯಪತ್ರದಲ್ಲಿ ಸಂತ್ರಸ್ತರಿಗೆ ಮಂಜೂರು ಮಾಡಲಾದ ಪ್ರಕ್ರಿಯೆ ಕಾನೂನುಬಾಹಿರವಾಗಿದೆ ಎಂದು ಬಿಂಬಿಸಿ ಮಂಜೂರಾತಿ ರದ್ದುಪಡಿಸಿತ್ತು. ಇದರಿಂದ ಶರಾವತಿ ಮುಳುಗಡೆ ಸಾವಿರಾರು ಸಂತ್ರಸ್ತ ಕುಟುಂಬ ಒಕ್ಕಲೆಬ್ಬಿಸುವ ಭೀತಿಯನ್ನು ಎದುರಿಸುತಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 18ರಂದು ನನ್ನ ನೇತೃತ್ವದಲ್ಲಿ 305 ರೈತರು ಸರ್ಕಾರದ ಆದೇಶ ತಡೆಕೋರಿ ಮೇಲ್ಮನವಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ” ಎಂದರು.
“ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಗಳಿವೆ. ಎಲ್ಲಿಂದಲೋ ಬಂದ ಟಿಬೇಟಿಯನ್ನರಿಗೆ ನಮ್ಮ ಸರ್ಕಾರ ಆಶ್ರಯ ನೀಡಿದೆ. ಆದರೆ ನಾಡಿಗೆ ಬೆಳಕು ನೀಡಲು ಸಾವಿರಾರು ಎಕರೆ ಜಮೀನು ನೀಡಿ ಮನೆಮಠ ಕಳೆದುಕೊಂಡವರ ಬಗ್ಗೆ ಸರ್ಕಾರ ಹಲವು ವರ್ಷಗಳಿಂದ ನಿರ್ಲಕ್ಷ್ಯ ವಹಿಸುತ್ತಿದೆ. ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ನೀಡುವಂತೆ ಅನೇಕ ಹೋರಾಟ ನಡೆದಿದೆ. ಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಶಾಸಕರಿಗೆ ಮನವಿ ನೀಡಲಾಗಿದೆ. ಆದರೆ ಎಲ್ಲರೂ ಸುಳ್ಳು ಭರವಸೆ ನೀಡಿದ್ದಾರೆಯೇ ವಿನಃ ಸಮಸ್ಯೆ ಬಗೆಹರಿಸಿಲ್ಲ. ಹಿಂದಿನ ಸರ್ಕಾರ ಡಿನೋಟಿಫಿಕೇಶನ್ ಆದೇಶ ಮಾಡಿತ್ತು. ಈಗಿನ ಸರ್ಕಾರ ಅದನ್ನು ರದ್ದುಗೊಳಿಸಿತ್ತು. ಸರ್ಕಾರ ತಕ್ಷಣ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಎನ್.ಪಿ.ಧರ್ಮರಾಜ್, ಕೆ.ಎಲ್.ಭೋಜರಾಜ್, ನಾಗರಾಜ ಗುಡ್ಡೆಮನೆ, ರಾಜಪ್ಪ ಶೆಟ್ಟಿಕೆರೆ, ರಘುಪತಿ ಕಟ್ಟಿಗೆಹಳ್ಳ, ಕೃಷ್ಣಮೂರ್ತಿ, ಲಕ್ಷ್ಮಣಪ್ಪ, ಶೇಖರಪ್ಪ ಆರ್.ಕೆ., ಮಂಜಪ್ಪ, ರಾಮಚಂದ್ರಪ್ಪ, ಬ್ಯಾಡನಾಳ ಮಂಜಪ್ಪ, ಸುರೇಶ್, ರೋಹಿತ್ ಇನ್ನಿತರರು ಹಾಜರಿದ್ದರು.