ಸೊರಬ: ವಿದ್ಯೆ ವಿನಯವನ್ನು ಕಲಿಸುವುದರ ಜತೆಗೆ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ರೂಪಿಸುತ್ತದೆ ಎಂದು (Shivamogga News) ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕಿನ ಶಿಗ್ಗಾ-ಇಂಡುವಳ್ಳಿ ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ವಿದ್ಯಾವರ್ಧಕ ಸಂಘದ ಮಲೆನಾಡು ಪ್ರೌಢಶಾಲೆಯ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಮಲೆನಾಡು ಪ್ರೌಢಶಾಲೆ ನೌಕರರ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Viral News: ಪುಸ್ತಕಗಳಿಗಾಗಿ 1 ಕೋಟಿ ರೂಪಾಯಿ ಖರ್ಚು ಮಾಡಿದ ಶಿಕ್ಷಕ!
ವ್ಯಕ್ತಿಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ವಿದ್ಯೆ ಮೂಲಾಧಾರ. ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ತೆರಳಬೇಕಿತ್ತು. ಇದರಿಂದ ರೈತರು, ಕೂಲಿ ಕಾರ್ಮಿಕರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಆರ್ಥಿಕ ಹೊರೆಯಾಗಿತ್ತು. ಇದನ್ನು ಮನಗಂಡು ಎಸ್. ಬಂಗಾರಪ್ಪ ಅವರು ತಮ್ಮ ಕ್ಷೇತ್ರದ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ಹಿಂದೆ ಉಳಿಯಬಾರದು ಎಂದು ಶ್ರೀ ಕಲ್ಲೇಶ್ವರ ವಿದ್ಯಾವರ್ಧಕ ಸಂಘವನ್ನು ಕಟ್ಟಿ ಅದರಡಿಯಲ್ಲಿ ಮಲೆನಾಡು ಪ್ರೌಢಶಾಲೆಯನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣದ ವ್ಯವಸ್ಥೆ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಐದು ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗಿಲ್ಲ. ಯೋಜನೆಗಳ ನೆರವು ಪಡೆದುಕೊಂಡಿರುವ ಬಡವರು, ಕೂಲಿ ಕಾರ್ಮಿಕರು, ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರ ಬದುಕು ಹಸನಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ರಾಗಿ ಮಾಲ್ಟ್ ನೀಡುವ ಯೋಜನೆ ರೂಪುಗೊಂಡಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: Shivamogga News: ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ
ಕಲ್ಲೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದಿಂದ ದೂರ ಇರುವ ಶಿಗ್ಗಾ, ಇಂಡುವಳ್ಳಿ ಭಾಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿದ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಅವರು ಕಲ್ಲೇಶ್ವರ ವಿದ್ಯಾವರ್ಧಕ ಸಂಘದ ಮೂಲಕ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಲೆನಾಡು ಪ್ರೌಢ ಶಾಲೆ ಸ್ಥಾಪಿಸಿ, ಗ್ರಾಮೀಣ ಪ್ರದೇಶದ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ ಎಂದರು.
ಇದೇ ವೇಳೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿಯಾಗಲಿರುವ ಶಿಗ್ಗಾ-ಇಂಡುವಳ್ಳಿ ಮಲೆನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ. ಮೋಹನ್ ದಾಸ್ ಅವರನ್ನು ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿದರು.
ನಂತರ ವಿದ್ಯಾರ್ಥಿನಿಯರಿಂದ ಎ.ಎಸ್. ಮಹಾಬಲಗಿರಿ ರಾವ್ ನಿರ್ದೇಶನದ ಭಕ್ತ ಸುಧನ್ವ ಮತ್ತು ಶಶಿ ಪ್ರಭಾ ಪರಿಣಯ ಯಕ್ಷಗಾನ ಬಯಲಾಟ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ; ಗಮನ ಸೆಳೆದ ವಿವಿಧ ತಳಿಗಳು
ಕಾರ್ಯಕ್ರಮದಲ್ಲಿ ಕಲ್ಲೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಎಚ್. ಗಣಪತಿ, ಜಿ.ಡಿ. ಬಸವರಾಜ್, ಇಂಡುವಳ್ಳಿ ಗ್ರಾ.ಪಂ. ಅಧ್ಯಕ್ಷ ವೇದಮೂರ್ತಿ, ಶಿಗ್ಗಾ ಗ್ರಾ.ಪಂ. ಅಧ್ಯಕ್ಷೆ ಸೋಮಮ್ಮ, ಸುಮಾ, ಗೀತಾ, ಸೋಮಶೇಖರ ಶಿಗ್ಗ, ಅನಿಲಮ್ಮ, ಮಹೇಶ್, ನಾಗಪ್ಪ, ಬಿಇಒ ಸತ್ಯನಾರಾಯಣ, ಸಿ.ಆರ್.ಪಿ. ರಾಘವೇಂದ್ರ, ಶಿಕ್ಷಕರಾದ ಎಲ್.ಐ. ನಾಯ್ಕ್, ತೇಜಪ್ಪ, ಹೇಮಂತ್, ವಂದನ, ಮಧುಕೇಶವ, ವಸಂತ್‍ಕುಮಾರ್, ಚಂದ್ರಮ್ಮ ಸೇರಿದಂತೆ ಇತರರು ಇದ್ದರು.