ರಿಪ್ಪನ್‌ಪೇಟೆ: ಮಣ್ಣಿನ ಸಂರಕ್ಷಣೆ (Soil Conservation) ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಗಣಪತಿ ಹೇಳಿದರು.
ಪಟ್ಟಣ ಸಮೀಪದ ಗವಟೂರು ಗ್ರಾಮದ ಕೃಷಿಕ ರಾಮಚಂದ್ರ ಎಂಬುವವರ ತೋಟದಲ್ಲಿ ರೋಟರಿ ಕ್ಲಬ್ ರಿಪ್ಪನ್‌ಪೇಟೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮಣ್ಣೇ ಹೊನ್ನು” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆ ನೈಸರ್ಗಿಕವಾದುದು, ಇತ್ತೀಚೆಗೆ ಅಧಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯ ಜೊತೆಗೆ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದೆ ಎಂದ ಅವರು, ಇತ್ತೀಚೆಗೆ ಮಣ್ಣಿನಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ಕೃಷಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಇದನ್ನೂ ಓದಿ: Tumkur News: ಪಾವಗಡದಲ್ಲಿ ವಿಷಕಾರಿ ಸೊಪ್ಪು ಸೇವಿಸಿ 42 ಕುರಿಗಳ ಸಾವು
ಡಾ. ಕೆ.ಎಸ್. ನಿರಂಜನ್ ಮಾತನಾಡಿ , ಮಣ್ಣು ಪರೀಕ್ಷೆ ಏಕೆ ಮಾಡಬೇಕು, ಮಣ್ಣು ಮಾದರಿಯನ್ನು ವೈಜ್ಞಾನಿಕ ರೀತಿಯಲ್ಲಿ ಹೇಗೆ ತೆಗೆಯುವುದು , ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಯುವ ಬಗೆ ಹಾಗೂ ಅಡಿಕೆ ಸಿಪ್ಪೆಯಿಂದ ಗೊಬ್ಬರ ಮಾಡುವ ವಿಧಾನದ ಮಾಹಿತಿ ನೀಡಿ, ಕೃಷಿ ಮತ್ತು ತೋಟಗಾರಿಕೆಗೆ ಸಂಭಂದಪಟ್ಟ ಯಾವುದೇ ಸಮಸ್ಯೆಯಿದ್ದಲ್ಲಿ ರೈತರು ನೇರವಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರ ಜತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಮಾದರಿ ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ದೇವದಾಸ್ ಆರ್.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಎಂ.ಪರಮೇಶ್, ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಶಾಂತಮೂರ್ತಿ, ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಎಚ್.ಎಸ್. , ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಎಸ್. ಜಿ. ಶಶಿಕಲಾ ಹಾಗೂ ರೋಟರಿ ಸಂಸ್ಥೆಯ ಎಂ.ಬಿ ಲಕ್ಷ್ಮಣಗೌಡ, ಡಾ. ಬಿ.ಕೆ.ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Job Alert: ಪದವಿ ಪೂರೈಸಿದವರಿಗೆ ಉದ್ಯೋಗಾವಕಾಶ; ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ದೇವದಾಸ್ ಆರ್.ಎಚ್. ಸ್ವಾಗತಿಸಿದರು. ಕು. ನವ್ಯ ನಿರೂಪಿಸಿದರು. ರೋಟರಿ ಸಂಸ್ಥೆ ಕಾರ್ಯದರ್ಶಿ ಎಂ.ರಾಮಚಂದ್ರ ವಂದಿಸಿದರು.