ಸೊರಬ: ಭವಿಷ್ಯದ ಪ್ರಜೆಗಳ ರೂಪಿಸುವಲ್ಲಿ ಶಿಕ್ಷಕರ (Teachers) ಪಾತ್ರ ಮಹತ್ವದ್ದಾಗಿದ್ದು, ವಿಶೇಷಚೇತನ ಮಕ್ಕಳಿಗೆ ಶಿಕ್ಷಣ (Education) ನೀಡುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದು ಆರ್‌ಎಲ್‍ಡಿಎವಿ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್. ಕುಮಾರ್ ಹೇಳಿದರು.
ಮಂಗಳವಾರ ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಆರ್‍ಎಲ್‍ಡಿಎವಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಳಿಕೆಯ ಆದಾಯದಲ್ಲಿ ಕೊಂಚ ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅಶಕ್ತರು, ನಿರ್ಗತಿಕರಿಗೆ ಸೇವೆ ಮಾಡಿದರೆ ಅದು ಭಗವಂತನ ಸೇವೆ ಮಾಡಿದ ಪುಣ್ಯ ಲಭಿಸುತ್ತದೆ. ವಿಶೇಷಚೇತನ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಅವರ ಸೇವೆ ಮಾಡುವ ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು, ತಮ್ಮ ಪುತ್ರ ದಿ. ವಿಷ್ಣುವಿನ ಜನ್ಮವನ್ನು ಪ್ರತಿವರ್ಷ ವಿಶೇಷಚೇತನ ಮಕ್ಕಳೊಂದಿಗೆ ಆಚರಿಸುತ್ತಾ ಬಂದಿರುವುದಾಗಿ ತಿಳಿಸಿದರು.
ಇದನ್ನೂ ಓದಿ: SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ. ಪ್ರಜ್ಞಾವಂತ ಮತ್ತು ಸುಶಿಕ್ಷಿತರ ತಂದೆ-ತಾಯಿಗಳು ಇಂದು ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಕಷ್ಟ-ಸುಖಗಳ ನಡುವೆ ಬಡವನಾದರೂ ಸಹ ಪೋಷಕರೊಂದಿಗೆ ಜೀವನ ಸಾಗಿಸುತ್ತಾನೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಕೆಲಸ ಮತ್ತು ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಆರ್‍ಎಲ್‍ಡಿಎವಿ ಸೇವಾ ಟ್ರಸ್ಟ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಅವರು ನೋಟ್ ಬುಕ್ ಮತ್ತು ಪೆನ್‍ಗಳನ್ನು ವಿತರಿಸಿದರು. ಮಲೆನಾಡು ಸಿರಿ ಸೇವಾ ಟ್ರಸ್ಟ್ ಪ್ರಮುಖರಾದ ರಾಜು ಹಿರಿಯಾವಲಿ ಅವರು ಶಿಕ್ಷಕರನ್ನು ಅಭಿನಂದಿಸಿದರು.
ಇದನ್ನೂ ಓದಿ: National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್ ಎಫೆಕ್ಟ್ ಇದೆಯಾ?
ಈ ಸಂದರ್ಭದಲ್ಲಿ ನವಚೇತನ ಬುದ್ದಿಮಾಂದ್ಯ ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಜಿ.ಬಿ. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ಪ್ರಮುಖರಾದ ಗಣಪತಿ, ತುಳಜಪ್ಪ, ಶ್ರೀಧರ್ ಶೇಟ್, ಆರ್. ಕುಮಾರ್, ಪುನೀತ್, ಶಿಕ್ಷಕರಾದ ಕೆ.ಬಿ. ಪುಟ್ಟರಾಜು, ಎಸ್. ರವೀಂದ್ರ, ಎಚ್.ಆರ್. ಸುವರ್ಣ, ಮಂಗಳಾ ಎಸ್. ಸುರೇಶ್, ಪಲ್ಲವಿ ಸೇರಿದಂತೆ ಆರ್‍ಎಲ್‍ಡಿಎವಿ ಸೇವಾ ಟ್ರಸ್ಟ್‍ನ ಪ್ರಮುಖರು ಉಪಸ್ಥಿತರಿದ್ದರು.