ಶಿವಮೊಗ್ಗ: ಗಾಂಧಿ ಪ್ರತಿಮೆಯನ್ನು ದೂಡಿ ಹಾನಿ ಮಾಡಿದ್ದ ದುಷ್ಟರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇಲ್ಲಿನ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ (Mahatma gandhi) ವೃತ್ತದಲ್ಲಿದ್ದ ಗಾಂಧಿ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಎಸಗಿದ್ದರು. ಇಬ್ಬರು ಕಿಡಿಗೇಡಿಗಳಿಂದ ಕೃತ್ಯ ನಡೆದಿರುವುದು ಸಿಸಿಟಿವಿ ಪರಿಶೀಲಿಸಿದಾಗ ಕಂಡುಬಂದಿತ್ತು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ಗಣೇಶ್ (24), ವಿನಯ್ (25) ಬಂಧಿತರು.
ಆ.21ರಂದು ಮಧ್ಯರಾತ್ರಿ 2.05ಕ್ಕೆ ಈ ಕೃತ್ಯ ನಡೆದಿತ್ತು. ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದರು. ಬೈಕ್‌ನಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಇಬ್ಬರಿಂದ ಕೃತ್ಯ ನಡೆದಿತ್ತು. ಹಿಂಬದಿ ಸವಾರ ಬೈಕ್‌ನಿಂದ ಇಳಿದು ಪ್ರತಿಮೆ ದೂಡಿ ಹಾನಿ ಮಾಡಿದ್ದು, ನಂತರ ಅದೇ ಬೈಕ್‌ನಲ್ಲಿ ಇಬ್ಬರೂ ಪರಾರಿಯಾಗಿದ್ದರು.
ಪ್ರತ್ಯೇಕ ಮೂರು ತಂಡ ರಚನೆ
ಹೊಳೆಹೊನ್ನೂರು ಠಾಣೆಯಲ್ಲಿ ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಕೃತ್ಯದ ಮಾಹಿತಿ ನೀಡಿದರು. ಆಗಸ್ಟ್ 21ರ ರಾತ್ರಿಯಂದು ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಅಧಿಕಾರಿಗಳು- ಸಿಬ್ಬಂದಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡಿದ್ದಾರೆ.
ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ಗಣೇಶ್ (24), ವಿನಯ್ (25) ಎಂಬುವವರನ್ನು ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗದಿಂದ ಜೋಗಕ್ಕೆ ಹೋಗುವ ಮಾರ್ಗಮಧ್ಯೆ ಈ ಕೃತ್ಯ ಮಾಡಿದ್ದಾರೆ. ಪ್ರತಿಮೆ ಧ್ವಂಸಗೊಳಿಸಿ, ಶಿವಮೊಗ್ಗಕ್ಕೆ ಹೋಗಿ ಮರಳಿ ಮತ್ತೆ ಚಿತ್ರದುರ್ಗಕ್ಕೆ ಹೋಗಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆಯನ್ನು ಮುಂದುವರಿದಿದೆ ಎಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ