ಸೊರಬ: ಯಾವುದೋ ಸಿಮೆಂಟ್ ಹಾಸಿನ ನಡುವೆ ಜಲದಿನ ಆಚರಿಸುವುದಕ್ಕಿಂತಲೂ ಗ್ರಾಮಾಂತರ ಪ್ರದೇಶದ ಜಲಮೂಲದ ಸನಿಹ ಆಚರಿಸುವ ಜಲದಿನ ಹೆಚ್ಚು ಅರ್ಥಪೂರ್ಣ ಎಂದು ಹಿರಿಯ ವಕೀಲ ಎಂ.ಆರ್.ಪಾಟೀಲ್ (Shivamogga News) ಹೇಳಿದರು.
ತಾಲೂಕಿನ ಶಾಂತಗೇರಿ ಗ್ರಾಮದ ತಾವರೆಕೆರೆ ಅಂಗಳದಲ್ಲಿ ಗ್ರಾಮಸ್ಥರ ಜತೆ ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಪರ್ಯಾವರಣ ಗತಿವಿಧಿ ಸಂಘಟನೆಗಳು ವಿಶ್ವ ಜಲದಿನ ಅಂಗವಾಗಿ ಹಮ್ಮಿಕೊಂಡಿದ್ದ ಕೆರೆಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮಸ್ಥರು ಕೆರೆಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಂಡು ಕಾಪಾಡಿಕೊಂಡು ಬಂದಿದ್ದಾರೆ. ಕೆರೆಯ ರಕ್ಷಣೆಗೆ ಕಾಳಜಿ ಇದೆ. ಕೆರೆಯ ಮೌಲ್ಯ, ಉಪಯೋಗಗಳ ಬಗ್ಗೆ ಅರಿವು ಮೂಡಿಸಿ ಕಾಯ್ದುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಇದನ್ನೂ ಓದಿ: Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಖರೀದಿಸುವ ಮುನ್ನ ಇಲ್ಲಿ ದರ ಗಮನಿಸಿ
ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಆಚರಣೆಗಳು ಕೇವಲ ಆಚರಣೆಗಷ್ಟೆ ಸೀಮಿತವಾಗದೆ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಜಲಸಂರಕ್ಷಣೆ, ಜಲ ರಕ್ಷಣೆಗೆ ಪೂರಕವಾದ ಅರಣ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಮಂಜುನಾಥ ಹೆಗಡೆ ಕೆರೆಕೊಪ್ಪ, ವಕೀಲ ನಾಗಪ್ಪ ಮಾತನಾಡಿದರು. ಅರ್ಚಕ ಇಂದೂಧರಸ್ವಾಮಿ ಕೆರೆಪೂಜೆಯನ್ನು ನೆರವೇರಿಸಿದರು.
ಇದನ್ನೂ ಓದಿ: Mahua Moitra : ಟಿಎಂಸಿ ನಾಯಕಿ ಮಹುವಾ ಮನೆ ಮೇಲೆ ಸಿಬಿಐ ರೇಡ್
ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮಪ್ಪ, ಗ್ರಾಮದ ಮುಖಂಡರಾದ ಹೇಮಚಂದ್ರ, ನೇಮರಾಜ, ಉಮೇಶ್, ಕೃಷ್ಣಮೂರ್ತಿ, ಶೇಷಪ್ಪ, ಎ.ಡಿ.ಬಸವರಾಜ್, ಎಸ್.ಟಿ.ಮಹದೇವಪ್ಪ, ಕುಬೇರಪ್ಪ, ಭಾಗ್ಯಮ್ಮ ಸೊರಬ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.