ಶಿವಮೊಗ್ಗ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಲ್ಲಹಳ್ಳಿಯ ಪಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಶೇ. 100 ಫಲಿತಾಂಶ (SSLC Result) ಪಡೆದಿದೆ. ಶಾಲೆ ಆರಂಭವಾಗಿ 12 ವರ್ಷಗಳು ಪೂರ್ಣಗೊಂಡಿದ್ದು, ಮೊದಲ ವರ್ಷದಿಂದಲೂ ಶಾಲೆಗೆ ಶೇ.100 ಫಲಿತಾಂಶ ಬರುತ್ತಿದೆ. ಈ ಬಾರಿ 11 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕವನ್ನು ಪಡೆದಿದ್ದಾರೆ.
ಈ ಶಾಲೆಯ ಶೋಭಿತ್ ಎಂಬ ವಿದ್ಯಾರ್ಥಿ 622 ಅಂಕ ಪಡೆಯುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾನೆ ಎಂದು ಸಂಸ್ಥೆ ಕಾರ್ಯದರ್ಶಿ ಎನ್.ರಮೇಶ್ ತಿಳಿಸಿದ್ದಾರೆ.
ಅತ್ಯುತ್ತಮ ಕಲಿಕಾ ವಾತಾವರಣ
ಅವರು ಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಮ್ಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಅವರಿಗೆ ಬೋಧನೆ ಹಾಗೂ ಮಾರ್ಗದರ್ಶನ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಕಲಿಯುವ ವಾತಾವರಣ ರೂಪಿಸಲಾಗುತ್ತದೆ. ಹೀಗಾಗಿ ನಮ್ಮಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ” ಎಂದು ಹೇಳಿದರು.
ನೀಟ್, ಸಿಇಟಿಗೆ ತರಬೇತಿ
“ಹೆಚ್ಚಿನ ಅಂಕ ಪಡೆದ ನಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೇರೆ ಕಾಲೇಜುಗಳಲ್ಲಿ ಶುಲ್ಕ ರಿಯಾಯಿತಿಯೊಂದಿಗೆ ಪ್ರವೇಶ ಸಿಗುತ್ತಿದೆ. ಪಿಯು ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರವನ್ನು ಬೋಧಿಸಲಾಗುತ್ತಿದ್ದು, ನೀಟ್ ಹಾಗೂ ಸಿಇಟಿಗೆ ತರಬೇತಿ ನೀಡಲಾಗುತ್ತಿದೆ” ಎಂದು ತಿಳಿಸಿದರು.
ಇದನ್ನೂ ಓದಿ: SSLC Result 2023: ವಿಜಯನಗರ ಜಿಲ್ಲೆಗೆ 10ನೇ ಸ್ಥಾನ; 625ಕ್ಕೆ 621 ಅಂಕಗಳನ್ನು ಪಡೆದ ಇಬ್ಬರು ವಿದ್ಯಾರ್ಥಿಗಳು
“ಗಣಿತದಲ್ಲಿ 14 ವಿದ್ಯಾರ್ಥಿಗಳು, ಇಂಗ್ಲಿಷ್‌ನಲ್ಲಿ 6, ಕನ್ನಡದಲ್ಲಿ 7 ಹಾಗೂ ಹಿಂದಿಯಲ್ಲಿ 9 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಿವಮೊಗ್ಗದ 9 ಶಾಲೆಗಳ ಪೈಕಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಕೂಡ ಸೇರಿದೆ” ಎಂದು ಹೇಳಿದರು.
ಪ್ರಾಚಾರ್ಯ ಸುನೀತಾ ದೇವಿ ಮಾತನಾಡಿ, “ಮಕ್ಕಳು ಹೆಚ್ಚು ಅಂಕ ಪಡೆಯಲು ಅನುಕೂಲವಾಗುವಂತೆ ವಿಶೇಷ ತರಗತಿಗಳನ್ನು ನಡೆಸುತ್ತೇವೆ. ಕೇವಲ ಪಠ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಆಟೋಟ ಚಟುವಟಿಕೆಯಲ್ಲೂ ನಮ್ಮ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕರು ದೊಡ್ಡ ಸ್ಥಾನಗಳನ್ನು ಅಲಂಕರಿಸಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಈಗಲೂ ಶಾಲೆಯೊಂದಿಗೆ ಸಂಪರ್ಕ ಇರಿಸಿಕೊಂಡಿದ್ದಾರೆ” ಎಂದು ಸಂತಸವನ್ನು ಹಂಚಿಕೊಂಡರು.
ಉಪ ಪ್ರಾಚಾರ್ಯ ಪ್ರವೀಣ್ ಹಾಗೂ 600ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಸುದ್ದಿಗೋಷ್ಠಿಯಲ್ಲಿದ್ದರು.