Site icon Vistara News

ಶಾಂತಿಗೆ ಭಂಗ ತರಲು ಯತ್ನಿಸಿದರೆ ಸತ್ಯಾಗ್ರಹ ಎಂದು ತರಳಬಾಳು ಜಗದ್ಗುರು ಎಚ್ಚರಿಕೆ

Taralabalu

ಶಿವಮೊಗ್ಗ: ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಹಿರಿಮೆ ಹೊಂದಿದ ಶಿವಮೊಗ್ಗದಲ್ಲಿ ಶಾಂತಿಯನ್ನು ಕದಡಬಾರದು. ಒಂದು ವೇಳೆ ಅಂತಹ ಪ್ರಸಂಗಗಳು ನಡೆದರೆ ಸತ್ಯಾಗ್ರಹ ಮಾಡಬೇಕಾದೀತು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಗುರುಗಳ ನೇತೃತ್ವದಲ್ಲಿ ಸಮಾನ ಮನಸ್ಕರು, ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು, ರೈತ ಮುಖಂಡರು, ಪ್ರಗತಿಪರ ಚಿಂತಕರು, ವರ್ತಕರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹಮ್ಮಿಕೊಂಡದ್ದ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಸಮಾವೇಶದಲ್ಲಿ ಮಾತನಾಡಿದರು.

ಧರ್ಮ ಗುರುಗಳ ಸಮ್ಮುಖದಲ್ಲಿ ಆರಂಭಗೊಂಡ ಈ ಶಾಂತಿ ನಡಿಗೆ ಮೊದಲ ಹಂತವಷ್ಟೇ. ನಿರಂತರ ಶಾಂತಿಗಾಗಿ ಈ ವೇದಿಕೆ ಸಂಕಲ್ಪ ಮಾಡುತ್ತದೆ. ಯಾವುದೇ ರೀತಿಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆದರೆ ಎಲ್ಲ ಧರ್ಮಗುರುಗಳು ಒಂದಾಗಿ ಸತ್ಯಾಗ್ರಹ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ ಎಂದರು.

ಸಾಮ್ಯರಸ್ಯ ಇರಲಿ

ಇದು ಅಪರೂಪ ಹಾಗೂ ಅಭೂತಪೂರ್ವ ನಡಿಗೆ, ಇದರ ಉದ್ದೇಶ ಸಮಯೋಚಿತ, ಅರ್ಥಪೂರ್ಣ. ಶಾಂತಿಯ ಕರೆ ಮೊದಲೇನಲ್ಲ, ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಲೇ ಬಂದಿದೆ. ಎಲ್ಲರೂ ಬಯಸುವುದು ಶಾಂತಿಯನ್ನು, ಎಲ್ಲ ಧರ್ಮದ ಸಾರವೂ ಶಾಂತಿಯೇ. ಶಾಂತಿಗಾಗಿ ಮಾನವೀಯ ಗುಣಗಳು ಬೇಕಾಗಿದೆ. ಆದರೆ, ನಿಮ್ಮನ್ನು ಕೈ, ಕಾಲು, ಕಣ್ಣು ಮಾಡಿಕೊಂಡು ತಿನ್ನುವವರಿಗೆ ಅವಕಾಶ ಮಾಡಿಕೊಡಬೇಡಿ. ನೀವು ತಿನ್ನಿ, ಇತರರಿಗೆ ಹಂಚಿ ತಿನ್ನಿ. ಹಬ್ಬ, ಹರಿದಿನಗಳು ಬಂದಾಗ ಎಲ್ಲರೂ ಸಾಮರಸ್ಯದಿಂದ ಬಾಳುವಂತಾಗಬೇಕು‌ ಎಂದು ಹೇಳಿದರು.

ಇವ ನಮ್ಮವ ಎಂಬ ಮನೋಭಾವ ಇರಲಿ

ಫಾದರ್ ಡಾ.ಕ್ಲಿಫರ್ಡ್‌ ರೋಷನ್‌ ಪಿಂಟೋ ಮಾತನಾಡಿ, ಶಿವಮೊಗ್ಗ ಶಾಂತಿಯ ತವರೂರು. ಎಲ್ಲರೂ ಸಾಮರಸ್ಯ, ಸೌಹಾರ್ದದಿಂದ ಬಾಳಬೇಕು. ಇವನಾರವ ಎನ್ನುವ ಬದಲು ಇವ ನಮ್ಮವ ಎಂದು ಹೇಳಬೇಕು. ರಾಷ್ಟ್ರಕವಿ ಅವರ ವಿಶ್ವ ಮಾನವ ಸಂದೇಶವನ್ನು ನಾವೆಲ್ಲರೂ ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.

ಮುಸ್ಲಿಂ ಧರ್ಮಗುರು ಮೌಲಾನಾ ಶಾವುಲ್‌ ಹಮೀದ್‌ ಮಾತನಾಡಿ, ವಿವಿಧ ಧರ್ಮ ಗುರುಗಳಿಲ್ಲದ ವಿಷ ಬೀಜ ನಮಗ್ಯಾಕೆ ಬೇಕು. ಜಿಲ್ಲೆಯು ಶಾಂತಿ ಬೀಡು. ಅಶಾಂತಿ ಬಿತ್ತುವವರಿಗೆ ಇದು ಎಚ್ಚರಿಕೆ. ಜಿಲ್ಲೆಯಲ್ಲಿ ಕೈಗಾರಿಕೆ ಉದ್ಯಮಿಗಳು ಬರುವಂತಾಗಬೇಕು. ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಇದು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿದೆ. ಈ ವೇದಿಕೆ ಸ್ವಾಹಾರ್ದತೆ ಕೇಂದ್ರವಾಗಿ ಕಂಗೊಳಿಸುತ್ತಿದೆ. ಇಲ್ಲಿ ಬೇಕಾಗಿರುವುದು ಶಾಂತಿ ಮಾತ್ರ. ಎಲ್ಲರೂ ಒಂದಾಗಿ ಸಹೋದರರಂತೆ ಬಾಳೋಣ ಎಂದು ಹೇಳಿದರು.

ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ, ಜಡೆಮಠದ ಶ್ರೀ ಮಹಾಂತ ಸ್ವಾಮೀಜಿ, ಮುಸ್ಲಿಂ ಧರ್ಮಗುರುಗಳಾದ ಮುಫ್ತಿ ಅಖೀಲ್‌‍ ರಜಾ, ಮೌಲಾನಾ ಶಾವುಲ್‌‍ ಹಮೀದ್‌ , ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್‌. ಆರ್‌.ಬಸವರಾಜಪ್ಪ ಸೇರಿ ಹಲವರು ಇದ್ದರು.

ಬೆಳಗ್ಗೆ ಸಿಮ್ಸ್ ಮುಂಭಾಗದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫ ಹುಸೇನ್‌, ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ನಡಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ “ನಮ್ಮ ನಡಿಗೆ ಶಾಂತಿ ನಡಿಗೆ” ಮುಖ್ಯ ಬಸ್‌ ನಿಲ್ದಾಣ ಮೂಲಕ ಬಿ.ಎಚ್‌.ರಸ್ತೆ ಮಾರ್ಗವಾಗಿ ಅಮೀರ್‌ ಅಹಮದ್‌ ವೃತ್ತ, ಶಿವಪ್ಪನಾಯಕ ಸರ್ಕಲ್‌‍ ಮೂಲಕ ಸೈನ್ಸ್ ಮೈದಾನ ತಲುಪಿತು.

ಇದನ್ನೂ ಓದಿ | ಶಿವಮೊಗ್ಗ ಅನಾಮಧೇಯ ಪತ್ರ ಪ್ರಕರಣಕ್ಕೆ ಟ್ವಿಸ್ಟ್ | ಪ್ರಣಯ ವಿಲಾಸಕ್ಕಾಗಿ ಫೇಕ್ ಪತ್ರ ಬರೆದ ಕೇಡಿ!

Exit mobile version