Site icon Vistara News

Toilet Cleaning: ಶಿಕ್ಷಣ ಸಚಿವರ ತವರೂರಲ್ಲೇ ಶಾಲಾ ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್‌!

School children in Shivamogga used for toilet cleaning

ಶಿವಮೊಗ್ಗ: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಅಂದ್ರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಿರುವ ಪ್ರಕರಣ ಮಾಸುವೇ ಮುನ್ನವೇ ಇದೀಗ ಶಿವಮೊಗ್ಗದಲ್ಲೂ ಮಕ್ಕಳಿಂದ ಟ್ಲಾಯೆಟ್‌ ಕ್ಲೀನಿಂಗ್‌ ಮಾಡಿಸಲಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಶಿವಮೊಗ್ಗದ ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ ಗ್ರಾ.ಪಂ ಗುಡ್ಡದ ನೇರಲೆಕೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಗೆ ಪೊರೆಕೆ ನೀಡಿ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಲಾಗಿದೆ. ಮಕ್ಕಳನ್ನು ದುರ್ಬಳಕೆ ಮಾಡಿಕೊಂಡ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸಂಘಟನೆ ಮತ್ತು ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Dog Bite : ಬಾಲಕಿ ಮೇಲೆ ಎರಗಿ ಕಿತ್ತು ತಿಂದ ಹುಚ್ಚು ನಾಯಿಗಳು

ಕೋಲಾರದಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛ; ಇಬ್ಬರ ಬಂಧನ

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಐವರು ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕವಿತಾ, ಅಭಿಷೇಕ್ ಬಂಧಿತರಾಗಿದ್ದು, ಹಾಸ್ಟೆಲ್ ವಾರ್ಡನ್ ಮಂಜುನಾಥ್ ಎಂಬುವವರು ನಿನ್ನೆ ಬುಧವಾರ ಜಾಮೀನು ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಏನಿದು ಘಟನೆ?

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲಹೊಳ್ಳಿ ಗ್ರಾಮದಲ್ಲಿರುವ ಈ ಶಾಲೆಯ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ್ದ ಶಿಕ್ಷಕರು ಸ್ವಚ್ಛತಾ ಕಾರ್ಯ ಮಾಡಿಸಿದ್ದರು. ಈ ಕುರಿತ ಚಿತ್ರ ಎಲ್ಲೆಡೆ ಹರಿದಾಡಿ ವಿರೋಧ ವ್ಯಕ್ತಗೊಂಡಿತ್ತು. ಬಳಿಕ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಿದ್ದರು.

ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿ ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದರು. ಹಲವು ದಿನಗಳಿಂದ ಮಕ್ಕಳಿಗೆ ಇದೇ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವೂ ಇತ್ತು.

ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಕೊಡಲಾಗುತ್ತಿದೆ ಎಂದು ದೂರಲಾಗಿದೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version