Site icon Vistara News

Shivamogga News: ಮುಂಬರುವ ಶೈಕ್ಷಣಿಕ ಸಾಲಿನಿಂದ ಪ್ರತಿ ತಾಲೂಕಿನಲ್ಲಿ ಎರಡು ಹೊಸ ಪಬ್ಲಿಕ್ ಶಾಲೆ

District level best teachers and retired teachers were felicitated at soraba

ಸೊರಬ: ಸರ್ಕಾರಿ ಶಾಲಾ (Government Schools) ಶಿಕ್ಷಣ ವ್ಯವಸ್ಥೆಯನ್ನು (Education System) ಸದೃಢಗೊಳಿಸುವ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಪ್ರತಿ ತಾಲೂಕಿನಲ್ಲಿ ಎರಡು ಹೊಸ ಪಬ್ಲಿಕ್ ಶಾಲೆಗಳನ್ನು (New Public Schools) ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಡಾ. ರಾಜ್ ಕಲಾಕ್ಷೇತ್ರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಬುಧವಾರ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಿಗೂ ಸಹ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಯಬೇಕು ಉದ್ದೇಶದಿಂದ ಕೆಪಿಎಸ್ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿಯೂ ಎಲ್‍ಕೆಜಿ ಮತ್ತು ಯುಕೆಜಿಗೆ ಬೇಡಿಕೆ ಇದ್ದು, ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿಯೂ ಬಡ ಮಕ್ಕಳು ಶಿಕ್ಷಣ ಕಲಿಯಲಿ ಎಂಬ ಸದುದ್ದೇಶದಿಂದ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು.

ಇದನ್ನೂ ಓದಿ: Hampi Utsava: ಹಂಪಿ ಉತ್ಸವ ಈ ವರ್ಷ ಇಲ್ಲ; ಇದು ಬರದ ಎಫೆಕ್ಟ್‌!

ಕ್ಷೇತ್ರವು ಸೇರಿದಂತೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ 43 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಖಾಯಂ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗುವುದು. ಇತಿಹಾಸದಲ್ಲಿ ಮೊದಲ ಬಾರಿಗೆ 32 ಸಾವಿರ ಶಿಕ್ಷಕರ ವರ್ಗಾವಣೆಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಮಸ್ಯೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಶಿಕ್ಷಕರ ನೇಮಕಾತಿ ಪೂರ್ಣಗೊಂಡರೆ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ ಎಂದರು.

ಎಸ್. ಬಂಗಾರಪ್ಪ ಅವರು ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟಿ, ಶಾಲೆಯಡೆಗೆ ಸೆಳೆಯಲು ಅಕ್ಷಯ ಯೋಜನೆ ಜಾರಿಗೆ ತಂದಿದ್ದರು. ಗ್ರಾಮೀಣ ಭಾಗದಲ್ಲಿ ಅನೇಕ ಕಡೆ ಸರ್ಕಾರಿ ಶಾಲೆಗಳ ಕಟ್ಟಡಗಳ ಕೊರತೆ ಇರುವ ಬಗ್ಗೆ ಗಮನದಲ್ಲಿದ್ದು, ಇವುಗಳನ್ನು ನೀಗಿಸಲು ಸರ್ಕಾರದ ಅನುದಾನದ ಜತೆಗೆ ಇತರೆ ಖಾಸಗಿ ಸಂಸ್ಥೆಗಳ ಸಹಕಾರ ಪಡೆಯಲಾಗುವುದು.

ಈ ನಿಟ್ಟಿನಲ್ಲಿ ಸುಮಾರು 1500 ಕೋಟಿ. ರೂ., ಅನುದಾನ ಕ್ರೂಢೀಕರಣವಾಗುವ ನಿರೀಕ್ಷೆ ಇದೆ. ಸಮಾಜದ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ತಮ್ಮ ಇಲಾಖೆಯ ವ್ಯಾಪ್ತಿಯ ವಿಸ್ತೀರ್ಣ ದೊಡ್ಡದಿದೆ. ಸರ್ಕಾರ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ಹಾಗೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದರು.

ಇದನ್ನೂ ಓದಿ: Terracotta Figurines : ದಕ್ಷಿಣ ಕನ್ನಡದಲ್ಲಿ ಸಿಕ್ಕಿವೆ ಕ್ರಿ.ಪೂ 700ರ ಟೆರಾಕೋಟಾ ಪುಟ್ಟ ಬೊಂಬೆಗಳು!

ವಿಧಾನಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಮಾತನಾಡಿ, ವಿದ್ಯಾದಾನ ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಮಕ್ಕಳಿಗೆ ಗುರಿ ತೋರಿಸುವಾತ ಗುರುವಾಗಿದ್ದು, ಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯವನ್ನು ಬೋಧಿಸುವುದು ಮಾತ್ರವಲ್ಲ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಬಗ್ಗೆಯೂ ತಿಳಿಸಿಕೊಡುವವರಾಗಿದ್ದಾರೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಸುತ್ತಲಿನ ಪರಿಸರ ಮತ್ತು ಸಮಾಜದ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ಮಾಡಿದಾಗ ಮುಂದಿನ ಭವಿಷ್ಯದ ಸತ್ಪ್ರಜೆಗಳಾಗಿ ರೂಪುಗೊಳ್ಳಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಚಿಂತಕ ಭಾರ್ಗವ ನಾಡಿಗ ಉಪನ್ಯಾಸ ನೀಡಿದರು.

ಇದನ್ನೂ ಓದಿ: Viral Video: ರೋಹಿತ್​ ಅವರನ್ನು ಮಗುವಿನಂತೆ ತಬ್ಬಿಕೊಂಡು ಸಂಭ್ರಮಿಸಿದ ಕೊಹ್ಲಿ

ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಬಿ.ಆರ್. ಬಸವರಾಜಪ್ಪ, ತಹಶೀಲ್ದಾರ್ ಹುಸೇನ್ ಸರಕಾವಸ್, ತಾಪಂ ಇಒ ಡಾ.ಎನ್.ಆರ್. ಪ್ರದೀಪ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ಸತ್ಯನಾರಾಯಣ, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಮಡ್ಲೂರು, ತಾಲೂಕು ಅಧ್ಯಕ್ಷ ಎನ್. ಗಣಪತಿ, ವಿವಿಧ ಶಿಕ್ಷಕ ಸಂಘಟನೆಗಳ ಪ್ರಮುಖರಾದ ಕೆ.ಸಿ. ನಾರಾಯಣ, ಶಫೀ ಆಹ್ಮದ್, ಬಿ.ಆರ್. ಗಿರಿಧರ್, ಬಿ. ಓಂಕಾರಪ್ಪ, ಕೆ. ಮೋಹನ್ ದಾಸ್, ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ಶ್ರೀರಂಜನಿ ಪ್ರವೀಣ್ ಕುಮಾರ್, ಆಫ್ರೀನಾಬಾನು, ಸುಲ್ತಾನಬೇಗಂ, ಪ್ರೇಮಾ, ಜಯಲಕ್ಷ್ಮಿ, ಅನ್ಸರ್ ಆಹ್ಮದ್, ಮುಖಂಡರಾದ ಎಚ್. ಗಣಪತಿ, ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ ಸೇರಿದಂತೆ ಇತರರಿದ್ದರು.

Exit mobile version