ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ರಂಗ ಮಂದಿರದಲ್ಲಿ ಗುರುವಾರ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಅದ್ಧೂರಿಯಾಗಿ ನೆರವೇರಿತು. ಗಿಡಕ್ಕೆ ನೀರು ಹಾಕುವ ಮೂಲಕ ಶಾಸಕ ಎಚ್. ಹಾಲಪ್ಪ ಹರತಾಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ಸಮಾಜಕ್ಕೆ ನಿಖರ ಸುದ್ದಿ ಮತ್ತು ಜ್ಞಾನವನ್ನು ಪಸರಿಸುವ ವಾಹಿನಿಗಳ ಅಗತ್ಯ ಹೆಚ್ಚಾಗಿದೆ. ಜನರು ವಾಹಿನಿಗಳ ಮೇಲೆ ಇರಿಸಿಕೊಂಡಿರುವ ನಂಬಿಕೆ ಶಾಶ್ವತವಾಗಿ ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿಸ್ತಾರ ಚಾನೆಲ್ ಕೆಲಸ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದನ್ನೂ ಓದಿ | Vistara News Launch | ಆರೋಗ್ಯಕರ ಸುದ್ದಿಯೊಂದಿಗೆ ವಿಸ್ತಾರ ನ್ಯೂಸ್ ಗಟ್ಟಿಯಾಗಿ ನಿಲ್ಲಲಿ: ನಿಜಗುಣ ಶಿವಯೋಗಿ ಸ್ವಾಮೀಜಿ
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗದ ಮೇಲೆ ಮಹತ್ತರವಾದ ಹೊಣೆಗಾರಿಕೆ ಇದೆ. ಬದಲಾದ ದಿನಮಾನಗಳಲ್ಲಿ ಎಲ್ಲವೂ ಕಲುಷಿತಗೊಂಡಿದೆ ಎನ್ನುವ ಚರ್ಚೆ ಇದೆ. ಇಂತಹ ಸವಾಲುಗಳ ನಡುವೆಯೂ ಹರಿಪ್ರಕಾಶ್ ಕೋಣೆಮನೆ ಅವರ ಸಾರಥ್ಯದಲ್ಲಿ ವಿಸ್ತಾರ ವಾಹಿನಿ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಬದಲಾದ ದಿನಮಾನಗಳಲ್ಲಿ ಹೆಚ್ಚು ವಾಹಿನಿಗಳು ನಮ್ಮ ನಡುವೆ ಇದೆ. ಯಾವ ವಾಹಿನಿ ಜನರಿಗೆ ಬೇಕಾದ ಸುದ್ದಿಗಳನ್ನು ಕೊಡುತ್ತಾ ಬರುತ್ತದೆಯೋ ಅಂತಹ ವಾಹಿನಿಗಳು ಹೆಚ್ಚು ಕಾಲ ಬದುಕುತ್ತದೆ. ವಿಸ್ತಾರ ವಾಹಿನಿ ಜನರ ನಡುವೆ ಇದ್ದು ಜನಪರವಾಗಿ ಯೋಚಿಸಲಿ ಎಂದು ಸಲಹೆ ನೀಡಿದರು.
ನ್ಯಾಯವಾದಿ ಕೆ.ದಿವಾಕರ್ ಮಾತನಾಡಿ, ಮಾಧ್ಯಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆರ್ಥಿಕ ಪ್ರಾಮುಖ್ಯತೆ ಇಲ್ಲದೆ ಹೋದಲ್ಲಿ ಚಾನೆಲ್‍ಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಅಪರಾಧವನ್ನು ವೈಭವೀಕರಿಸುವುದನ್ನು ಬಿಟ್ಟು ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹರಿಪ್ರಕಾಶ್ ಕೋಣೆಮನೆ ನೇತೃತ್ವದ ವಿಸ್ತಾರ ಚಾನೆಲ್ ಪ್ರಯತ್ನ ನಡೆಸಲಿ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಜೆಡಿಎಸ್ ನಗರ ಅಧ್ಯಕ್ಷ ಸೈಯದ್ ಜಾಕೀರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ನಾಗೇಶ್ ಮಾತನಾಡಿ ಶುಭಹಾರೈಸಿದರು.
ವಿಸ್ತಾರ ನ್ಯೂಸ್‌ನ ಶಿವಮೊಗ್ಗ ಬ್ಯೂರೊ ಮುಖಸ್ಥ ವಿವೇಕ್ ಮಹಾಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಗರ ವರದಿಗಾರ ಇಮ್ರಾನ್ ಸಾಗರ ಸ್ವಾಗತಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ನಿರೂಪಿಸಿದರು. ಈ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸಂಗೀತ ರಸಮಂಜರಿ ನೋಡುಗರ ಗಮನ ಸೆಳೆಯಿತು.
ಇದನ್ನೂ ಓದಿ | Vistara News Launch | ವಿಸ್ತಾರ ರಾಜ್ಯಾದ್ಯಂತ ವಿಸ್ತರಿಸಲಿ: ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ