ಶಿವಮೊಗ್ಗ: ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳನ್ನು (Women’s Cricket Tournament) ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಬಿಸಿಸಿಐಯು ದೇಶದಲ್ಲಿ 15 ವರ್ಷ ವಯೋಮಿತಿಯ ಅಂತರ್ ರಾಜ್ಯ ಮಹಿಳಾ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ ಎಂದು ವಲಯ ಸಂಚಾಲಕ ಎಚ್‌ಎಸ್. ಸದಾನಂದ್ ಹೇಳಿದ್ದಾರೆ.
ಅವರು ಶನಿವಾರ (ಡಿ.೨೪) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರದ ವಿವಿಧ ರಾಜ್ಯಗಳ 36 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈ 36 ತಂಡಗಳನ್ನು ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ‘ಎ’ ಗುಂಪಿನ 6 ತಂಡಗಳ ಪಂದ್ಯಾವಳಿಗಳು ಶಿವಮೊಗ್ಗದ ಕೆ.ಎಸ್.ಸಿ.ಎ. ಮತ್ತು ಜೆ.ಎನ್.ಎನ್.ಸಿ.ಇ. ಟರ್ಫ್ ಅಂಕಣಗಳಲ್ಲಿ ನಡೆಯಲಿದೆ. ‘ಎ’ ಗುಂಪಿನಲ್ಲಿ ವೆಸ್ಟ್ ಬೆಂಗಾಲ್, ತಮಿಳುನಾಡು ಉತ್ತರಾಖಂಡ, ವಿಧರ್ಭ, ಹಿಮಾಚಲ ಪ್ರದೇಶ ಹಾಗೂ ತ್ರಿಪುರಾ ರಾಜ್ಯಗಳ ತಂಡಗಳನ್ನು ಒಳಗೊಂಡಿರುತ್ತದೆ ಎಂದರು.
ಇದನ್ನೂ ಓದಿ | Bigg Boss Kannada | ʻಕಳಪೆʼಯಾದ ರಾಕೇಶ್ ಅಡಿಗ: ಈ ವಾರದ ʻಬೆಸ್ಟ್ ಪರ್ಫಾರ್ಮರ್ʼ ಆರ್ಯವರ್ಧನ್ ಗುರೂಜಿ!
ಡಿ.26ರಿಂದ ಪ್ರಾರಂಭವಾಗುವ ಈ ಪಂದ್ಯಾವಳಿಗಳು ಮಾ.3ರವರೆಗೆ ನಡೆಯಲಿದೆ. ಪ್ರತಿ ದಿ 3 ಪಂದ್ಯಗಳಂತೆ ಒಟ್ಟು 15 ಪಂದ್ಯಗಳು ನಡೆಯಲಿವೆ. ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಮಧ್ಯ ಒಂದು ದಿನದ ವಿಶ್ರಾಂತಿ ಇರಲಿದೆ. ಈ ಪಂದ್ಯವು ಬಿಳಿ ಬಣ್ಣದ ಬಾಲ್‌ನಲ್ಲಿ ಆಡಲಿದ್ದು, ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 15 ಓವರ್ ಮಿತಿಯಲ್ಲಿ ಒನ್ ಡೇ ಲಿಮಿಟೆಡ್ ಒವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ ಎಂದರು.
ಪ್ರತಿ ದಿನ ಪಂದ್ಯಾವಳಿಯು ಬೆಳಗ್ಗೆ, 9 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಗಳು ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಆಗಮಿಸುತ್ತಿದ್ದು, ಪಂದ್ಯಾವಳಿಗಳನ್ನು ಆಯೋಜಿಸಲು ಶಿವಮೊಗ್ಯ ವಲಯದ ತಂಡವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಡಿ.26ರಂದು ಪ್ರಾರಂಭವಾಗುವ ಮೊದಲ ಪಂದ್ಯವನ್ನು ನವುಲೆಯ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸಲ್ವಮಣಿ ಆರ್., ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಉದ್ಘಾಟಿಸಲಿದ್ದಾರೆ. ಇದೇ ದಿನ ಜೆ.ಎನ್.ಎನ್.ಸಿ.ಇ. ಮೈದಾನದಲ್ಲಿ ಪ್ರಾರಂಭವಾಗುವ ಪಂದ್ಯವನ್ನು ಜೆ.ಎನ್.ಎನ್.ಸಿ.ಇ. ಪ್ರಾಂಶುಪಾಲ ಕೆ. ನಾಗೆಂದ್ರ ಪ್ರಸಾದ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Poor Food Supply | ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ನೀಗಲು ನೀಡುವ ಪುಷ್ಟಿ ಆಹಾರದಲ್ಲಿ ಹುಳುಗಳು ಪತ್ತೆ!
ಕೆ.ಎಸ್.ಸಿ.ಎ. ಶಿವಮೊಗ್ಗ ವಲಯದ ಅಧ್ಯಕ್ಷ, ಎಮ್ಮೆಲ್ಸಿ ಡಿ.ಎಸ್.ಅರುಣ್ ಮಾತನಾಡಿ, ಕರ್ನಾಟಕ ತಂಡವು ರಾಜಕೋಟ್ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಕರ್ನಾಟಕ ತಂಡದಲ್ಲಿ ಶಿವಮೊಗ್ಗ ವಲಯದಿಂದ 7 ಹುಡುಗಿಯರು ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಿದರು. ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ ಸದಸ್ಯ ಸುಬ್ರಹ್ಮಣ್ಯ, ತೀರ್ಪುಗಾರ ಸಂಜಯ್, ತರಬೇತುದಾರ ನಾಗರಾಜ್, ಆಟಗಾರರಾದ ನಿರ್ಮಿತಾ, ಶ್ರೀಲಕ್ಷ್ಮೀ ಇದ್ದರು.
ಇದನ್ನೂ ಓದಿ | Coronavirus | ಕೋವಿಡ್ ಪ್ರೊಟೋಕಾಲ್ ಗಾಳಿಗೆ ತೂರಿದ ರಾಹುಲ್ ಗಾಂಧಿ, ಮಾಸ್ಕ್ ಇಲ್ಲದೇ ಪಾದಯಾತ್ರೆ