ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) 37ನೇ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಈ ಬಾರಿ ಐತಿಹಾಸಿಕ ನಗರ ವಿಜಯಪುರದಲ್ಲಿ ಹಮ್ಮಿಕೊಳ್ಳಲು ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ಸಮಿತಿಯು ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಆತಿಥ್ಯವನ್ನು ಪ್ರಥಮ ಬಾರಿ ವಿಜಯಪುರ ಜಿಲ್ಲೆಗೆ ವಹಿಸಿಕೊಟ್ಟಿರುವುದು ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ತುಂಬಾ ಹರ್ಷ ಹಾಗೂ ಸಂಭ್ರಮ ತಂದಿದ್ದು, ಪೂರ್ವಭಾವಿ ಸಭೆ ನಡೆಯುವ ಮೂಲಕ ಸಮ್ಮೇಳನದ ಸಿದ್ಧತೆಗೆ ಚಾಲನೆ ಸಿಕ್ಕಂತಾಗಿದೆ.
ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಈ ಜಿಲ್ಲೆಯ ಹಲವಾರು ಪತ್ರಕರ್ತರು ಹಾಗೂ ಸಂಘದ ಜಿಲ್ಲಾ ಪದಾಧಿಕಾರಿಗಳು ಪತ್ರಕರ್ತರ ರಾಜ್ಯ ಸಮ್ಮೇಳನ ವಿಜಯಪುರ ಜಿಲ್ಲೆಗೆ ವಹಿಸಿಕೊಡುವಂತೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಅವರ ಮನವಿಗೆ ಸ್ಪಂದಿಸಿ 37ನೇ ರಾಜ್ಯ ಸಮ್ಮೇಳನ ನಡೆಸಲು ಅನುಮತಿ ನೀಡಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಂಡು ಅವಕಾಶ ಮಾಡಿಕೊಡಲಾಗಿದೆ ಎಂದರು.
ಇದನ್ನೂ ಓದಿ | ಸಿಎಂ ಸಿದ್ದರಾಮಯ್ಯ ಬಾಸ್ ಎಂದು ಬಂಗಾರದಲ್ಲಿ ಬರೆಸಿದ ಅಭಿಮಾನಿ, ಸಿದ್ದು ಪ್ರತಿಕ್ರಿಯೆ ಏನಿತ್ತು?
ಜಿಲ್ಲಾ ಹಾಗೂ ಎಲ್ಲ ತಾಲೂಕು ಘಟಕಗಳ ಹಾಲಿ-ಮಾಜಿ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಸಮ್ಮೇಳನದ ಸಂಪೂರ್ಣ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ಪ್ರತಿಯೊಬ್ಬ ಸದಸ್ಯರೂ ಅತ್ಯಂತ ಜವಾಬ್ದಾರಿಯಿಂದ ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ. ಈಗಿನಿಂದಲೇ ಸಮ್ಮೇಳನದ ಸಿದ್ಧತೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚನೆ ನೀಡಿದರು.
ಈ ಭಾಗದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ರಚಿಸಿ ಇದರಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು, ಹಾಗೂ ಜನಪ್ರತಿನಿಧಿಗಳು ಒಳಗೊಳ್ಳುವಂತೆ ಮಾಡಬೇಕು. ಹಾಗೇಯೇ ಸಮ್ಮೇಳನದ ಯಶಸ್ವಿಗಾಗಿ ಪ್ರಚಾರ ಸಮಿತಿ, ಹಣಕಾಸು ಸಮಿತಿ, ಸ್ಮರಣ ಸಂಚಿಕೆ ಸಮಿತಿ, ವಸತಿ ಸಮಿತಿ, ಊಟದ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಬೇಕಾಗುತ್ತದೆ.
ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರವನ್ನು ಪಡೆಯಬೇಕಾಗುತ್ತದೆ. ನಮ್ಮೊಳಗೆ ಏನೇ ಸಣ್ಣಪುಟ್ಟ ಸಮಸ್ಯೆ, ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗೊತ್ತಿ ಇದು ನಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಎಲ್ಲರೂ ಸೇರಿ ದಿನದ 24 ಗಂಟೆ ಹಮ್ಮಸ್ಸಿನಿಂದ ಹಾಗೂ ಒಮ್ಮನಸ್ಸಿನಿಂದ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗುತ್ತದೆ ಎಂದವರು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ, ಕೆಯುಡಬ್ಲ್ಯುಜೆ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನರೆಡ್ಡಿ ಗೊಂದಿ, ಡಿ.ಬಿ.ವಡವಡಗಿ, ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ವಿಶೇಷ ಆಹ್ವಾನಿತರಾದ ಶ್ರೀಮತಿ ಕೌಶಲ್ಯ ಡಿ.ಪನಾಳಕರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ ಮತ್ತಿತರರು ಇದ್ದರು.
ಇದನ್ನೂ ಓದಿ | Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ನೇರ ಮಾತು