ಯಲ್ಲಾಪುರ: ಹಿಂದುಗಳ ಹೊಸ ವರ್ಷ ಯುಗಾದಿ ಪ್ರಯುಕ್ತ ಪಟ್ಟಣದಲ್ಲಿ ನಡೆದ ಭವ್ಯ ಶೋಭಾ ಯಾತ್ರೆ (Shobha Yatre) ಹತ್ತು ಸಾವಿರಕ್ಕೂ ಅಧಿಕ ಜನರೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಯುಗಾದಿ ಉತ್ಸವ ಸಮಿತಿಯಿಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಕೋಟೆ ಕರಿಯವ್ವ ದೇವಸ್ಥಾನದಲ್ಲಿ ಸಂಜೆ 4.15ಕ್ಕೆ ಪೂಜೆ ಸಲ್ಲಿಸುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.
ಶೋಭಾ ಯಾತ್ರೆಯಲ್ಲಿ ವಿವಿಧ ಜಾನಪದ ತಂಡಗಳು, ಟ್ಯಾಬ್ಲೋಗಳು ಮೆರುಗನ್ನು ಹೆಚ್ಚಿಸಿದವು. ಮಹಿಳೆಯರಿಗೆ ಹಾಗೂ ಪುರುಷರಿಗೆಂದು ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಿದ್ದರಿಂದ, ಹಿಂದುತ್ವದ ಹಾಡುಗಳಿಗೆ ಹುಚ್ಚೆದ್ದು ಕುಣಿದರು. ಮೆರವಣಿಗೆಯ ದಾರಿಯುದ್ದಕ್ಕೂ ಕಿಕ್ಕಿರುದು ಸೇರಿದ್ದ ಜನಸ್ತೋಮ, ರಸ್ತೆಯ ಅಕ್ಕಪಕ್ಕದಲ್ಲಿ ಕಟ್ಟಡದ ಮೇಲ್ಭಾಗಗಳಲ್ಲಿ ನಿಂತು ಶೋಭಾ ಯಾತ್ರೆಯನ್ನು ವೀಕ್ಷಿಸಿದರು.
ಅಂಕೋಲಾದ ಝಾಂಜ್ ಹಾಗೂ ಕಲಾ ತಂಡ, ಉಡುಪಿಯ ಭಜನಾ ತಂಡ, ಮಂಗಳೂರಿನ ಚಂಡೆ ವಾದ್ಯ ಮೆರವಣಿಗೆಯ ಮೆರುಗು ನೀಡಿದವು. ಜೂನಿಯರ್ ಪುನೀತ್ ರಾಜಕುಮಾರ್ ಕಂಡು ಜನ ಖುಷಿಪಟ್ಟರು. ಮಕ್ಕಳೆಲ್ಲ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಮಕ್ಕಳ ಸಮರ ಕಲೆಯ ಪ್ರದರ್ಶನ ಜನರನ್ನು ಆಕರ್ಷಿಸಿತು. ತ್ರಿಶೂಲದ ಮೇಲೆ ಆಸೀನನಾದ ಶಿವ, ಶಬರಿಮಲೈ ದೇವಸ್ಥಾನದ ಸ್ತಬ್ದಚಿತ್ರ ಜನರನ್ನು ಆಕರ್ಷಿಸಿದವು. ಶೋಭಾ ಯಾತ್ರೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಗ್ರಾಮ ದೇವಿ ದೇವಸ್ಥಾನದ ಬಳಿ ಬಂದು ಸಂಪನ್ನಗೊಂಡಿತು.
ಮಾರ್ಗ ಮಧ್ಯೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಜನರಿಗೆ ಪಾನಕ, ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿದರು. ವಿಶೇಷವಾಗಿ ಮೊಹರಂ ಕಮಿಟಿಯ ವತಿಯಿಂದ ತಂಪಾದ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುವ ಮೂಲಕ ಹಿಂದೂ ಮುಸ್ಲಿಂ ಸಾಮರಸ್ಯವನ್ನು ತೋರಿದರು. ಪೊಲೀಸರು ಸಹ ಸಂಪೂರ್ಣ ಯಾತ್ರೆಯ ಮೇಲೆ ಹದ್ದಿನ ಕಣ್ಣಿಡುವ ಮೂಲಕ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ಮೂಲಕ ಶೋಭಾ ಯಾತ್ರೆಗೆ ತಮ್ಮ ಸಹಕಾರ ನೀಡಿದರು.
ಇದನ್ನೂ ಓದಿ: Karnataka Election: ಅಜ್ಜಂಫೀರ್ ಖಾದ್ರಿ ಬಂಡಾಯ ವಾಪಸ್; ವಿನಯ್ ಕುಲಕರ್ಣಿಗೆ ಶಿಗ್ಗಾಂವಿ ಟಿಕೆಟ್ ಕೊಟ್ಟರೆ ಬೆಂಬಲಿಸುವೆ
ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್.ಪಾಟೀಲ್ ಕೂಡ ತಮ್ಮ ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.