Site icon Vistara News

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಿ : ಸ್ವರ್ಣವಲ್ಲಿ ಶ್ರೀ

ಸ್ವರ್ಣವಲ್ಲೀ ಶ್ರೀ

ಶಿರಸಿ:‌ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಎಲ್ಲರೂ ಗಮನ ನೀಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

32ನೇ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಶಿರಸಿ ಸೀಮೆಯ ತೋರಣಸಿ ಭಾಗಿಯ ಭಕ್ತರು ಸಮರ್ಪಿಸಿದ ಪಾದಪೂಜೆ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು. ಎಲ್ಲರೂ ಆರೋಗ್ಯವಂತರಾಗಿರಬೇಕು ಎಂದು ಬಯಸುತ್ತಾರೆ, ಇದು ಸರಿಯಾದದ್ದೇ. ಹೆಚ್ಚಿನವರು ದೈಹಿಕ ಆರೋಗ್ಯದ ಕುರಿತು ಮಾತ್ರ ಗಮನ ಹರಿಸುತ್ತಾರೆ. ಮಾನಸಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಮಾಡುತ್ತಾರೆ. ಆದರೆ ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯದ ಕುರಿತಾಗಿಯೇ ಹೆಚ್ಚು ಮಹತ್ವ ನೀಡಬೇಕು ಎಂದರು.

ಶರೀರದ ಆರೋಗ್ಯ ಧರ್ಮ ಸಾಧನೆಗೆ ಅತ್ಯವಶ್ಯ. ಆರೋಗ್ಯ ಚೆನ್ನಾಗಿರಬೇಕಾದರೆ ಶರೀರದೊಳಗಿನ ವಾತ, ಪಿತ್ತ, ಕಫಗಳು ಸಮಸ್ಥಿತಿಯಲ್ಲಿ ಇರಬೇಕು. ಜೀರ್ಣಶಕ್ತಿ ಸಮವಾಗಿ ಇರಬೇಕು. ಇದಲ್ಲದೇ ಮುಖ್ಯವಾಗಿ ನಮ್ಮ ಆತ್ಮ, ಮನಸ್ಸು, ಇಂದ್ರಿಯಗಳು ಪ್ರಸನ್ನವಾಗಿರಬೇಕು. ಮನಸ್ಸು ಸದೃಢವಾಗಿದ್ದರೆ ದೇಹ ದುರ್ಬಲವಾಗಿದ್ದರೂ ಸಾಧನೆ ಮಾಡಬಹುದು. ದೇಹದ ಆರೋಗ್ಯದಲ್ಲಿ ಕೊರತೆಯಿದ್ದರೂ ಗಟ್ಟಿಯಾದ ಮನಸ್ಸು ಇದ್ದರೆ ಅನಾರೋಗ್ಯದ ಪರಿಣಾಮ ವಿಪರೀತವಾಗುವುದಿಲ್ಲ. ಆದರೆ ದೇಹ ಸಬಲವಾಗಿದ್ದು ಮನಸ್ಸು ಸರಿಯಿಲ್ಲವೆಂದರೆ ಯಾವ ಸಾಧನೆಯೂ ಆಗುವುದಿಲ್ಲ. ಅಂಗವಿಕಲರೂ ಉತ್ತಮ ಸಾಧನೆ ಮಾಡಬಲ್ಲರು ಎಂದರು.

ಅಂಗ ವೈಕಲ್ಯ ಹೊಂದಿದವರೂ ಉತ್ತಮ ಅಧ್ಯಯನ, ದೇವರ ಭಜನೆ ಮಾಡುವುದನ್ನು ನೋಡಿದ್ದೇವೆ. ಅದಕ್ಕೆ ದೃಢವಾದ ಮನಸ್ಸೇ ಕಾರಣ. ಆದ್ದರಿಂದ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನಹರಿಸಬೇಕು. ಮನಸ್ಸಿನಲ್ಲಿ ಬರುವ ಅತಿಯಾದ ಸಿಟ್ಟು, ಉದ್ವೇಗಗಳು ನಮ್ಮ ಶರೀರದ ಆರೋಗ್ಯ ಕೆಡಿಸುತ್ತವೆ. ಹೀಗೆ ಅನೇಕ ವ್ಯಾಧಿಗಳ ಮೂಲ ಬೀಜಗಳು ಮನಸ್ಸಿನಲ್ಲಿ ಇರುತ್ತವೆ, ಆದ್ದರಿಂದ ಮನಸ್ಸಿನ ಸ್ವಾಸ್ಥ್ಯ ದೈಹಿಕ ಆರೋಗ್ಯಕ್ಕಿಂತಲೂ ಹೆಚ್ಚು ಗಮನಹರಿಸಬೇಕಾದ ವಿಷಯ ಎಂದರು.

ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಧಾರ್ಮಿಕ ಜೀವನವೇ ಸೂಕ್ತವಾದ ಪರಿಹಾರ. ಇದರೊಂದಿಗೆ ಯೋಗವನ್ನು ಜೋಡಿಸಿಕೊಳ್ಳಬೇಕು. ಪ್ರತಿನಿತ್ಯವೂ ನಿಯತವಾಗಿ ದೇವರ ಧ್ಯಾನ, ಜಪ ಮಾಡುವುದರಿಂದ ನಮ್ಮ ಪ್ರಾರಬ್ಧ ಕರ್ಮಗಳು ಕ್ಷೀಣಿಸಿ, ಮನಸ್ಸು ಶಾಂತವಾಗುತ್ತದೆ. ಶಾಂತವಾದ ಮನಸ್ಸಿನಲ್ಲಿ ಸಿಟ್ಟು ಉದ್ವೇಗಗಳು ಕಡಿಮೆಯಾಗುತ್ತವೆ ಎಂದು ವಿವರಿಸಿದರು. ತೋರಣಸಿ ಭಾಗಿ‌ ಗುರುಪಾದ ರಾ. ಹೆಗಡೆ ಹಲಸಿನಳ್ಳಿ, ಗಣೇಶ ನರಸಿಂಹ ಹೆಗಡೆ ಯಡಹಳ್ಳಿ, ಮಾತೃ ಮಂಡಳಿ ಅಧ್ಯಕ್ಷರು ಮತ್ತಿರರರು ಇದ್ದರು.

ಇದನ್ನೂ ಓದಿ | Chaturmasya 2022 | ಕಲಿಯುಗದ ಯುಗ ಗುರುಗಳು ಶಂಕರಾಚಾರ್ಯರು; ಸ್ವರ್ಣವಲ್ಲೀ ಶ್ರೀ

Exit mobile version