ಸಿದ್ದಾಪುರ: ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸುವ ಕೂಗು ಹೆಚ್ಚುತ್ತಿದೆ. ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಶಿರಸಿಯನ್ನು ಜಿಲ್ಲಾ ಕೇಂದ್ರವಾಗಿಸುವ ಕೋರಿಕೆಯನ್ನು ತಾಲೂಕು ಬಿಜೆಪಿ ಮಂಡಲ ಸ್ವಾಗತಿಸುತ್ತದೆ ಎಂದು ಮಂಡಲಾಧ್ಯಕ್ಷ ಮಾರುತಿ ನಾಯ್ಕ ತಿಳಿಸಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ (ಡಿ.೧೩) ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಿರಸಿಯನ್ನು ಈಗಾಗಲೇ ಶೈಕ್ಷಣಿಕ ಜಿಲ್ಲೆ ಮಾಡಿರುವುದರಿಂದ ಹಾಗೂ ಪ್ರತ್ಯೇಕ ಕಂದಾಯ ಜಿಲ್ಲೆ ಮಾಡುವುದರಿಂದ ಸಮಯ ಉಳಿತಾಯದ ಜತೆಗೆ ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಲಿದೆ. ಶಿರಸಿಯನ್ನು ಜಿಲ್ಲೆ ಮಾಡುವುದರಿಂದ ಘಟ್ಟದ ಮೇಲಿನ ತಾಲೂಕಿನ ಜನತೆಗೆ ಅನುಕೂಲವಾಗಲಿದೆ. ಕಾರವಾರಕ್ಕೆ 100-150 ಕಿಲೋ ಮೀಟರ್ ಸಂಚರಿಸುವುದು ತಪ್ಪುವುದರ ಜತೆಗೆ ಆಡಳಿತಾತ್ಮಕವಾಗಿಯೂ ಸಹಾಯವಾಗಲಿದೆ.
ಪ್ರತ್ಯೇಕ ಜಿಲ್ಲೆ ಘೋಷಣೆ ಕುರಿತಂತೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಚರ್ಚಿಸಿದ್ದು, ಅವರು ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜಿಲ್ಲೆ ಕುರಿತಂತೆ ಸರ್ಕಾರ ಸಾಧಕ-ಬಾಧಕ ಚರ್ಚಿಸಿ ಶಿರಸಿ ಜಿಲ್ಲೆ ಘೋಷಣೆ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ, ಜಿಲ್ಲಾ ಬಿಜೆಪಿ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ, ನಗರ ಘಟಕದ ಅಧ್ಯಕ್ಷ ತೋಟಪ್ಪ ನಾಯ್ಕ, ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದನ ಬೋರಕರ್, ಮಂಡಲ ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ, ಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ದಯಾನಂದ ನಾಯ್ಕ ಕಡಕೇರಿ, ಎ.ಜಿ.ನಾಯ್ಕ ಕಡಕೇರಿ, ಯಶವಂತ ಬಾಲಿಕೊಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ | Border Dispute | ಬೆಳಗಾವಿಗೆ ಕಳ್ಳ ಹೆಜ್ಜೆ ಇಟ್ಟ ಶರದ್ ಪವಾರ್ ಸಹೋದರನ ಪುತ್ರ; ವಿವಿಧ ಕಡೆ ಸಂಚಾರ, ಕನ್ನಡಿಗರ ಆಕ್ರೋಶ