Site icon Vistara News

Siddapura News | ಸಿದ್ದಾಪುರ ತಲುಪಿತು ಈಡಿಗ, ಬಿಲ್ಲವ, ನಾಮಧಾರಿ ಸಮಾಜದವರ ಪಾದಯಾತ್ರೆ

Pranavananda Swamiji

ಸಿದ್ದಾಪುರ: ನಮ್ಮ ಒಳಿತಿಗಾಗಿ ಹೋರಾಟ ಮಾಡಲು ಹೊರಟರೆ ಅದಕ್ಕೆ ಕೆಲವರು ಸಹಕಾರ ನೀಡಿದರೆ ಕೆಲವರು ಅಡ್ಡಗಾಲು ಹಾಕುತ್ತಾರೆ. ಹಾಗಾಗಿ ಸಣ್ಣ ಸಮುದಾಯದವರಾದ ನಾವು ರಾಜಕೀಯವಾಗಿ ತುಂಬಾ ಹಿಂದುಳಿದಿದ್ದೇವೆ ಎಂದು ಕಲಬುರಗಿ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿ ಹೇಳಿದರು. ಈಡಿಗ, ಬಿಲ್ಲವ, ನಾಮಧಾರಿ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಏಳಿಗೆಗಾಗಿ ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನತನಕ ಹಮ್ಮಿಕೊಂಡಿದ್ದ ಪಾದಯಾತ್ರೆಯು ಸಿದ್ದಾಪುರ (Siddapura News ) ತಲುಪಿದ ಸಂದರ್ಭದಲ್ಲಿ ತಾಲೂಕಿನ ಕೊಂಡ್ಲಿಯ ಮಾರಿಕಾಂಬಾ ಮೈದಾನದಲ್ಲಿ ಸಮಾಜ ಬಾಂಧವರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರದಲ್ಲಿ ಜಾತಿ ಆಧಾರದ ಮೇಲೆ ಹಾಗೂ ಸಂಘಟನೆಯ ಆಧಾರದ ಮೇಲೆ ನಿಗಮ ಮಂಡಳಿ ರಚನೆ ಮಾಡುತ್ತಾರೆ. ಆದರೆ ನಮ್ಮ ಸಮುದಾಯದ ಸಂಘಟನೆಯಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ವಂಚಿತರಾಗುತ್ತಿದ್ದೇವೆ.
ನಮ್ಮ ರಾಜ್ಯದಲ್ಲಿ 26 ಉಪ ಪಂಗಡಗಳು ಸೇರಿ ಸುಮಾರು 70 ಲಕ್ಷ ಜನಸಂಖ್ಯೆ ಇರುವ ನಮಗೆ ಕೆಲವು ಸಂದರ್ಭದಲ್ಲಿ ಕ್ಯಾಬಿನೆಟ್ ಮತ್ತು ನಿಗಮ ಮಂಡಳಿಗಳ ವಿಚಾರದಲ್ಲೂ ಅನ್ಯಾಯವಾಗುತ್ತಿದೆ.
ಸರ್ಕಾರ ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುತ್ತಿರುವ ಸಿಗಂದೂರು ದೇವಾಲಯ ಮೇಲ್ವರ್ಗದವರ ಕೈಗೆ ನೀಡಲು ಹುನ್ನಾರ ನಡೆಸಿದೆ.

ನಾವು ಎಚ್ಚೆತ್ತುಕೊಳ್ಳದಿದ್ದರೆ ಇಂದು ಸಿಗಂದೂರು ದೇವಾಲಯಕ್ಕೆ ನೋಟಿಸ್ ನೀಡಿದಂತೆ ನಾಳೆ ಬಿಲ್ಲವ ಸಮುದಾಯದ ಎರಡು ಕಣ್ಣುಗಳಾದ ಮಂಗಳೂರಿನ ಕುದ್ರೋಳಿ ಮತ್ತು ಉಡುಪಿ ಕಟಪಾಡಿ ದೇವಾಲಯಕ್ಕೂ ನೋಟಿಸ್ ನೀಡುತ್ತಾರೆ. ನಿಮ್ಮ ರಾಜಕೀಯ ಲಾಭಕ್ಕೋಸ್ಕರ, ಅಧಿಕಾರಕ್ಕೋಸ್ಕರ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮುದಾಯದ ಧಾರ್ಮಿಕ ಕೇಂದ್ರಗಳನ್ನು ಬಲಿ ಕೊಡುತ್ತಿದ್ದೀರಿ. ನೀವು ಹಾಕಿರುವ ಕೇಸುಗಳನ್ನು ವಾಪಸ್ ಪಡೆದು ಕ್ಷಮೆ ಕೇಳದಿದ್ದಲ್ಲಿ ಪರಿಣಾಮ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.

ಇದನ್ನೂ ಓದಿ | Karnataka Election | ಅಭ್ಯರ್ಥಿ ಆಯ್ಕೆಗೆ ಸರ್ವೆ; ಹೆಚ್ಚು ಒಲವಿರುವವರಿಗೆ ಟಿಕೆಟ್‌ ಎಂದ ಮಾಜಿ ಸಿಎಂ ಯಡಿಯೂರಪ್ಪ

ʻʻಸೇಂದಿ ಬಂದ್ ಮಾಡಿ ನಾಮಧಾರಿಗಳು, ಬಿಲ್ಲವರು, ದೀವರು ಎಲ್ಲಾ ಸಮುದಾಯ ಒಗ್ಗಟ್ಟಾಗದಂತೆ ಮಾಡಿದ್ದಾರೆ. ಇಂದು ಧಾರ್ಮಿಕ ಕೇಂದ್ರಗಳ ಮೇಲೆ ಕಣ್ಣು ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ. ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ನಮ್ಮ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮೂರು ಪಕ್ಷದವರು ನಮಗೆ ಟಿಕೆಟ್ ಕೊಡಬೇಕು ಎಂದು ಅವರು ಒತ್ತಾಯಿಸಿದರು. ವಿವಿಧ ಹಿಂದುಳಿದ ಸಮುದಾಯಗಳಿಗೆ ಹಲವು ಸೌಲಭ್ಯಗಳನ್ನು ನೀಡಿದ್ದಕ್ಕೆ ನಮ್ಮ ಸ್ವಾಗತವಿದೆ ಆದರೆ ನಿಮಗೆ ಏಕೆ ಬಿಲ್ಲವರು, ನಾಮಧಾರಿಗಳು, ಈಡಿಗರು ಕಾಣುವುದಿಲ್ಲವೇʼʼ ಎಂದು ಪ್ರಶ್ನಿಸಿದರು.

ʻʻಉ.ಕ ಜಿಲ್ಲೆಯಲ್ಲಿ ಅತಿಕ್ರಮಣ ಸಮಸ್ಯೆ ಬಂದಾಗ ಶೇ. 99 ನಾಮಧಾರಿ, ದೀವರ ಭೂಮಿಗಳಿವೆ. ಶಿವಮೊಗ್ಗದಲ್ಲಿ ಶರಾವತಿ ಮುಳುಗಡೆಯಲ್ಲಿ ದೀವರು 12 ಸಾವಿರ ಎಕರೆ ಕಳೆದುಕೊಂಡಿದ್ದಾರೆ. ಅವರಿಗೆ ಭೂಮಿ ಕೊಟ್ಟರೆ ರಾಜಕೀಯವಾಗಿ ಮುಂದೆ ಬಂದು ಬಿಡುತ್ತಾರೆ ಎಂದು ಕುತಂತ್ರ ಮಾಡುತ್ತಿದ್ದೀರಿʼʼ ಎಂದು ಸರ್ಕಾರದ ವಿರುದ್ಧ ಗುಡುಗಿದರು‌. ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠ ಕಲಬುರಗಿ ಜಿಲ್ಲೆಯಲ್ಲಿದೆ. ನಮ್ಮ ನಾಮಧಾರಿ ಸಮುದಾಯ ಯಾವ ಯಾವ ಜಿಲ್ಲೆಯಲ್ಲಿ ಇದೆಯೋ ಅಲ್ಲಿ ನಮ್ಮ ಶಕ್ತಿಪೀಠದ ಶಾಖಾ ಮಠ ಸ್ಥಾಪಿಸಲು ತೀರ್ಮಾನಿಸಿದ್ದೇನೆ. ಸಿದ್ದಾಪುರದಲ್ಲಿ ಕೂಡ ಒಂದು ಶಾಖೆ ಸ್ಥಾಪಿಸುವ ಗುರಿ ಇದೆ ಎಂದರು.

ಇದನ್ನೂ ಓದಿ | Rishabh Pant | ಆಡದಿದ್ದರೂ ಪರ್ವಾಗಿಲ್ಲ, ಐಪಿಎಲ್​ ವೇಳೆ ಪಂತ್​ ನನ್ನ ಜತೆಗಿರಬೇಕು ಎಂದು ಹೇಳಿದ ಡೆಲ್ಲಿ ಕ್ಯಾಪಿಟಲ್ಸ್​ ಕೋಚ್​​ ರಿಕಿ ಪಾಂಟಿಂಗ್​

ʻʻರಾಜ್ಯ ಕಂಡ ಒಬ್ಬ ಧೀಮಂತ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬುದು ಈ ಸಭೆಯ ಒತ್ತಾಯ. ಯಡಿಯೂರಪ್ಪ ಅವರ ಹೆಸರಿಡಲು ಯೋಜಿಸಿದ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಬಡವರಿಗಾಗಿ ಹಲವಾರು ಯೋಜನೆ ತಂದ ಬಂಗಾರಪ್ಪನವರ ಹೆಸರಿಡಿʼʼ ಎಂದು ಆಗ್ರಹಿಸುತ್ತೇವೆ ಎಂದರು.

ನಾಮಧಾರಿ ಸಮಾಜದ ತಾಲೂಕು ಅಧ್ಯಕ್ಷ ಕೆ.ಜಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದೇ ರಾಜಕೀಯವಾಗಿ ನಾವು ಹಿಂದುಳಿಯಲು ಕಾರಣವಾಗಿದೆ. ಗುರುಗಳ ನೇತೃತ್ವದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯುವಂತಾಗಬೇಕು ಎಂದರು.

ಪಾದಯಾತ್ರೆ ಸಮಿತಿಯ ಗೌರವಾಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ, ಲಿಂಗಾಯತ ಸಮಾಜವನ್ನು 2 ಎ ಗೆ ಸೇರಿಸಿದರೆ ನಮ್ಮ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡಬೇಕು. ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಬಹು ಸಂಖ್ಯಾತ ನಾಮಧಾರಿ ಅಭ್ಯರ್ಥಿಗಳಿಗೆ ಪ್ರತಿಯೊಂದು ಪಕ್ಷದಿಂದ ಟಿಕೆಟ್ ಸಿಗುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದರು.

ಇದನ್ನೂ ಓದಿ | Punjab National Bank : ಎಫ್‌ಡಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸಿದ ಮೊದಲ ಸಾರ್ವಜನಿಕ ಬ್ಯಾಂಕ್‌ ಪಿಎನ್‌ಬಿ

ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಪುನೀತ್ ರಾಜಕುಮಾರ್‌ ಅವರ ಆಶ್ರಮಧಾಮದ ಮುಖ್ಯಸ್ಥರಾದ ನಾಗರಾಜ ನಾಯ್ಕ, ರಾಷ್ಟ್ರ ಪ್ರಶಸ್ತಿ ವಿಜೇತ ಈಶ್ವರ ನಾಯ್ಕ ಹಸವಂತೆ, ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಎಂ. ಬಿ. ನಾಯ್ಕ ಕಡಕೇರಿ, ಕಲಾವಿದೆ ಅರ್ಚನಾ ಸುರೇಶ ನಾಯ್ಕ ತೆಂಗಿನಮನೆ, ಕಲಾವಿದ ನಾಗರಾಜ ನಾಯ್ಕ ಬರಬರ, ರಂಗಭೂಮಿ ಸಂಗೀತ ನಿರ್ದೇಶಕ ಶ್ರೀಧರ ಮಾವಿನಗುಂಡಿ, ಸಂಗೀತ ಕಲಾವಿದ ಗಣಪತಿ ನಾಯ್ಕ ಕೊಂಡ್ಲಿ, ಪ್ರಗತಿಪರ ಕೃಷಿಕ ಹನುಮಂತ ಪರಶುರಾಮ ಕುಣಜಿ, ಯಕ್ಷಗಾನ ಕಲಾವಿದ ನಂದನ ನಾಯ್ಕ ಅಕಿಶಿನಗೋಡು ಇವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | Sarfaraz Khan | ತೆಳ್ಳಗಿನವರು ತಂಡಕ್ಕೆ ಬೇಕಾದರೆ ಆಯ್ಕೆ ಮಾಡಲು ಫ್ಯಾಶನ್​ ಶೋಗೆ ಹೋಗಿ; ಆಯ್ಕೆ ಮಂಡಳಿಗೆ ಗವಾಸ್ಕರ್​ ತರಾಟೆ

ಹೊನ್ನಗೋಡ ರತ್ನಾಕರ, ಸಿ ಎಫ್ ನಾಯ್ಕ, ರವೀಂದ್ರ ನಾಯ್ಕ, ಡಾ. ವೆಂಕಟೇಶ ನಾಯ್ಕ, ಕೆ ಜಿ ನಾಗರಾಜ, ವಿ ಎನ್ ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ಉಲ್ಲಾಸ ನಾಯ್ಕ ಅಂಕೋಲಾ, ನಾಗರಾಜ ನಾಯ್ಕ ಬೇಡ್ಕಣಿ, ಎಂ ಎಚ್ ನಾಯ್ಕ, ಈಶ್ವರ ನಾಯ್ಕ ಮನ್ಮನೆ, ಶ್ರೀಮತಿ ಚಂದ್ರಕಲಾ ನಾಯ್ಕ, ದಿವಾಕರ ನಾಯ್ಕ ಹೆಮ್ಮನಬೈಲ್, ರವಿಕುಮಾರ್ ನಾಯ್ಕ, ಸುಧೀರ ನಾಯ್ಕ ಕೊಂಡ್ಲಿ, ಬಿಜಿ ನಾಯ್ಕ ಹಲಗೇರಿ,ಎನ್ ಜಿ ಕುಮಾರ್, ಪಿ ವಿ ನಾಯ್ಕ ಬೇಡ್ಕಣಿ, ಹಿತೇಂದ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಕರಮನೆ, ಎಸ್ ಎಮ್ ನಾಯ್ಕ, ಕೆ ಆರ್ ವಿನಾಯಕ, ಮೋಹನ ನಾಯ್ಕ ಕೊಂಡ್ಲಿ ಉಪಸ್ಥಿತರಿದ್ದರು. ಪಾದಯಾತ್ರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಾಯಕ ಕೊಂಡ್ಲಿ ಕಾರ್ಯಕ್ರಮ ನಿರೂಪಿಸಿದರು.

ʻʻಸಿದ್ದಾಪುರ ತಾಲೂಕಿನಲ್ಲಿ ನಾಮಧಾರಿ ಸಮುದಾಯದವರು 48 ಸಾವಿರ ಜನ ಇದ್ದೀರಾ? ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಈಗಲೇ ಎಚ್ಚೆತ್ತುಕೊಳ್ಳಿ ಮೇಲ್ವರ್ಗದ ನಾಯಕರು ನಮ್ಮ ನಮ್ಮಲ್ಲೇ ಒಳ ಜಗಳಗಳನ್ನು ಹಚ್ಚಿ ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆʼʼ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ | Man Dragged By Car | ಕಾರಿನ ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ.ವರೆಗೆ ಎಳೆದೊಯ್ದ ಮಹಿಳೆ

Exit mobile version