ಬಳ್ಳಾರಿ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ “ಸಿದ್ದರಾಮಯ್ಯ ೭೫” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬ್ರಾಹ್ಮಣ ಸಮುದಾಯದ (Brahmin community) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ. ವಿನಾಕಾರಣ ಬ್ರಾಹ್ಮಣರನ್ನು ಗುರಿಯಾಗಿಸಿ ಮಾತನಾಡಲಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ, ಪುಸ್ತಕದ ಲೇಖಕ ಮಲ್ಲೇಶ್ ವಿರುದ್ಧ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸಿದ್ದರಾಮಯ್ಯ ಕ್ಷಮೆಗೆ ಒತ್ತಾಯಿಸಲಾಗಿದೆ.
ಪ್ರತಿಭಟನೆ ವೇಳೆ ಮಾತನಾಡಿದ ಸಚ್ಚಿದಾನಂದ ಮೂರ್ತಿ, ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ, ಇವರಿಂದ ದೇಶ ನಾಶವಾಗುತ್ತಿದೆ ಎಂಬಿತ್ಯಾದಿ ವಿಚಾರಗಳನ್ನು ಈ ವೇಳೆ ಲೇಖಕ ಮಲ್ಲೇಶ್ ಪ್ರಸ್ತಾಪ ಮಾಡಿದ್ದಾರೆ. ಯಾರ ತಂಟೆಗೂ ಹೋಗದ ಬ್ರಾಹ್ಮಣರನ್ನು ವಿನಾಕಾರಣ ಕೆಣಕಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದರೂ ಅವರು ಆಕ್ಷೇಪ ವ್ಯಕ್ತಪಡಿಸಿಲ್ಲ. ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದಲೇ ಅವರು ಈ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗಾಗಿ ಕೂಡಲೇ ಮಲ್ಲೇಶ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಕ್ಷಮೆ ಕೇಳಲಿ
ಈ ಕಾರ್ಯಕ್ರಮದಲ್ಲಿ ವಿನಾಕಾರಣ ಬ್ರಾಹ್ಮಣರ ಬಗ್ಗೆ ಮಾತನಾಡಿರುವುದು ಇಡೀ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಇಂತಹ ಹೇಳಿಕೆಯನ್ನು ಪುರಸ್ಕರಿಸಬಾರದಿತ್ತು. ಆದರೆ, ಅವರ ಕುಮ್ಮಕ್ಕಿನಿಂದಲೇ ಮಲ್ಲೇಶ್ ಮಾತನಾಡಿದ್ದಾರೆಂಬುದು ಎಲ್ಲರಿಗೂ ತಿಳಿಯುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಸಚ್ಚಿದಾನಂದ ಮೂರ್ತಿ ಒತ್ತಾಯ ಮಾಡಿದರು.
ಇದನ್ನೂ ಓದಿ | Brahmin community | ‘ಸಿದ್ದರಾಮಯ್ಯ 75’ ಕಾರ್ಯಕ್ರಮದಲ್ಲಿ ಬ್ರಾಹ್ಮಣರಿಗೆ ಅವಹೇಳನ; ವ್ಯಾಪಕ ಖಂಡನೆ
ಸಿದ್ದರಾಮಯ್ಯ ಅವರು ಯಾರ ತಂಟೆಗೂ ಹೋಗದ ಬ್ರಾಹ್ಮಣರನ್ನು ವಿನಾಕಾರಣ ಕೆಣಕುತ್ತಿದ್ದಾರೆ. ಅಂದು ಅವರು ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದರು. ಟಿಪ್ಪು ಜಯಂತಿ ಮಾಡಿ ಧರ್ಮಗಳ ನಡುವೆ ಕಂದಕ ಸೃಷ್ಟಿಸಿದರು. ಈಗ ಬ್ರಾಹ್ಮಣರ ತಂಟೆಗೆ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿಡಿಕಾರಿದರು.
ಖಂಡಿಸಿದ್ದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ
ಲೇಖಕ ಮಲ್ಲೇಶ ಹೇಳಿಕೆ ಬಗ್ಗೆ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಮಾಧ್ಯಮ ಪ್ರಕಟಣೆ ಮೂಲಕ ತೀವ್ರವಾಗಿ ಖಂಡಿಸಿತ್ತು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯವನ್ನು ನೇರವಾಗಿ ಗುರಿ ಮಾಡಿ ಮಾತನಾಡಲಾಗಿದೆ. ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ, ಇವರಿಂದ ದೇಶ ನಾಶವಾಗುತ್ತಿದೆ ಎಂದು ಹೇಳಲಾಗಿದೆ. ಇಂತಹ ಹೇಳಿಕೆಯನ್ನು ಅಖಿಲ ಕರ್ನಾಟಕ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದು ಮಹಾಸಭಾದ ಅಧ್ಯಕ್ಷ ಡಾ. ಮುರಳೀಧರ ಪ್ರಕಟಣೆಯಲ್ಲಿ ತಿಳಿಸಿದ್ದರು.
ಆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರೂ ಮಲ್ಲೇಶ ಅವರ ಹೇಳಿಕೆಯನ್ನು ವಿರೋಧಿಸಿಲ್ಲ, ಇದು ಶೋಚನೀಯ. ಸರ್ಕಾರ ಈ ಕೂಡಲೇ ಆ ವ್ಯಕ್ತಿಯ ಮೇಲೆ ಮತ್ತು ಆ ಕಾರ್ಯಕ್ರಮದ ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ | Election 2023 | ಸಿದ್ದರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ಡಿಕೆಶಿ ಸಜ್ಜು; ಒಂದೇ ಕ್ಷೇತ್ರ ನೀತಿಗೆ ಒತ್ತು