Site icon Vistara News

Basavaraja Bommai | 5 ವರ್ಷ ಸಿದ್ದರಾಮಯ್ಯ ಪರಿಶಿಷ್ಟ ಸಮುದಾಯಗಳತ್ತ ತಿರುಗಿಯೂ ನೋಡಿಲ್ಲ ಎಂದ ಸಿಎಂ ಬೊಮ್ಮಾಯಿ

CM at home

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬಗ್ಗೆ ಈಗ ಭಾರಿ ಕಾಳಜಿಯ ಮಾತನಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಅವರತ್ತ ತಿರುಗಿಯೂ ನೋಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು. ಅವರು ಬುಧವಾರ ರೇಸ್ ಕೋರ್ಸ್ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ʻʻಒಳಮೀಸಲಾತಿಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರʼʼ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು, ಸಿದ್ದರಾಮಯ್ಯ ಅವರಿಗೆ ಈ ಕುರಿತ ವರದಿಯನ್ನು ತೆಗೆದು ನೋಡುವ ಧೈರ್ಯ ಇರಲಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಬರೀ ದೀಪ ಹಚ್ಚಿ ಮಾತನಾಡದೆ ಬಂದರು. ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದರು.

ʻʻನಮ್ಮ ಬದ್ಧತೆ ಏನೆಂದು ಎಲ್ಲಾ ಸಮುದಾಯಗಳಿಗೆ ತಿಳಿದಿದೆ. ಕಾನೂನು ಸ್ಥಾನಮಾನವೂ ನಮಗೆ ತಿಳಿದಿದೆ. ಇಂಥ ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕಿದೆ ಎಂದು ತೋರಿಸಿದ್ದೇವೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ಹಿಂತಿರುಗಿ ನೋಡಿದರೆ ಉತ್ತಮʼʼ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಹೇಳಿದ್ದೇನು?
ಒಳಮೀಸಲಾತಿಗೆ ಸಂಬಂಧಿಸಿ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸುತ್ತಿದ್ದ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದನ್ನು ಸಿದ್ದರಾಮಯ್ಯ ಆಕ್ಷೇಪಿಸಿದ್ದರು.
ಕೇಸರಿ ಶಾಲು ಧರಿಸಿ ದಾಂಧಲೆ ಮಾಡುವ ಪುಂಡರಿಗೆ ರಾಜ ಮರ್ಯಾದೆ ಕೊಡುವ ಸರ್ಕಾರ, ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ದಲಿತರೆಂದರೆ ಬಿಜೆಪಿಯ ಲಾಠಿಗಳಿಗೆ ಅಷ್ಟೊಂದು ತಾತ್ಸಾರವೇ ಎಂದು ಪ್ರಶ್ನಿಸಿದ್ದರು. ಜತೆಗೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ | ಸದಾಶಿವ ಆಯೋಗ ಕುರಿತು ಟ್ವೀಟ್‌ ಮಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ: ದಲಿತರಿಗೆ ವಂಚಿಸಿದ್ದು ನೀವೇ ಎಂದ ಬಿಜೆಪಿ

Exit mobile version