Site icon Vistara News

ವಿಧಾನಸೌಧ ರೌಂಡ್ಸ್‌ : ಸಿದ್ದರಾಮಯ್ಯ ಬೊಂಬಾಟ್‌ ಬಜೆಟ್‌, ಪ್ರದೀಪ್‌ ಈಶ್ವರ್‌ ಮಾತಿನ ಎಡವಟ್‌!

Vidhana Soudha

ಮಾರುತಿ ಪಾವಗಡ

ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಜತೆಗೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಮೀಸಲಿಟ್ಟಿದ್ದಾರೆ. ಕುಮಾರಸ್ವಾಮಿ ಪೆನ್ ಡ್ರೈವ್‌ನಲ್ಲಿ ಜಾಗ್ವಾರ್‌ ಫಿಲ್ಮ್ ಇದೆ ಅನ್ನೋದರಿಂದ ಹಿಡಿದು, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬದುಕಿರುವ ವ್ಯಕ್ತಿಯನ್ನು ಸತ್ತಿದ್ದಾನೆ ಎನ್ನುವ ತನಕ ವಿಧಾನಸೌಧ ರೌಂಡ್ಸ್‌ನಲ್ಲಿ ಹಲವು ಸುದ್ದಿಗಳು ಸದ್ದು ಮಾಡಿವೆ.

ವಿಪಕ್ಷ ಟೀಕೆಗಳಿಗೆ ಅವಕಾಶ ಕೊಟ್ಟು – ವೋಟ್ ಹಾಕಿದವರ ಬಳಿ ಭೇಷ್‌ ಎನಿಸಿಕೊಂಡ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಮಂಡಿಸಿದ 14ನೇ ಬಜೆಟ್ ಬಹುತೇಕರ ಮೆಚ್ಚುಗೆಗೆ ಕಾರಣವಾಗಿದೆ. ಪ್ರತಿ ಪುಟದಲ್ಲೂ ಬಿಜೆಪಿ ಸರ್ಕಾರದ ವೈಫಲ್ಯ ಮತ್ತು ತಮ್ಮ ಸರ್ಕಾರದ ಗುರಿಯನ್ನು ಮನಮುಟ್ಟುವಂತೆ ಮಂಡಿಸಿದ್ದಾರೆ. ಇನ್ನು ತಮ್ಮ ಪರ ನಿಂತ ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಕಲ್ಯಾಣಕ್ಕೆ ಸಾವಿರಾರು ಕೋಟಿ ರೂ. ಮೀಸಲಿಟ್ಟು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಸಿದ್ದರಾಮಯ್ಯ – ಕುಮಾರಸ್ವಾಮಿ ನಡುವೆ ಮುಗಿಯದ ಯುದ್ಧ

ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ರಾಜಕೀಯ ಜಿದ್ದಿನ ಆಟ ಮುಂದುವರಿದಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ಈ ಬಾರಿ ಜಂಟಿ ಅಧಿವೇಶನದ ಸಮಯದಲ್ಲಿ ಸರ್ಕಾರದ ವರ್ಗಾವಣೆ ವಿಚಾರದಲ್ಲಿ ಸಚಿವರ ಮಾತುಕತೆಯ ಪೆನ್ ಡ್ರೈವ್ ಇದೆ ಎಂದು ಹೇಳಿದ ಕುಮಾರಸ್ವಾಮಿ ಮಾತು ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಏನೇ ಆರೋಪ ಮಾಡಿದರೂ ಅತ್ತ ಗಮನ ಕೊಡಬಾರದು ಎಂದುಕೊಂಡಿದ್ದ ಸಿದ್ದರಾಮಯ್ಯ, ಪುತ್ರ ಯತೀಂದ್ರ ಅವರ ಹೆಸರು ಬರುತ್ತಲೇ ಕೋಪ ನೆತ್ತಿಗೇರಿತು. ಹೀಗಾಗಿ ಮಂಡ್ಯ ಡ್ರೈವರ್ ಆತ್ಮಹತ್ಯೆ ಯತ್ನ ಪ್ರಕರಣದ ಬಗ್ಗೆ ಚಲುವರಾಯಸ್ವಾಮಿ ಉತ್ತರಕ್ಕೆ ಬೇಷ್ ಎಂದರು. ಮುಂದೆ ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವೆ ಜಟಾಪಟಿ ಮುಂದುವರಿಯಿತು. ಸರ್ಕಾರಕ್ಕೆ ಕುಮಾರಸ್ವಾಮಿ ಆರು ತಿಂಗಳ ಗಡುವು ನೀಡಿದ್ದಾರೆ. ರಾಜ್ಯದಲ್ಲೂ ಅಜಿತ್‌ ಪವಾರ್ ಸೃಷ್ಟಿ ಆಗ್ತಾರೆ, ಆಗ ನಾನು ಆಡಿಸುತ್ತೇನೆ ಆಟ ಎಂದು ಹೇಳಿದ್ದಾರೆ. ಪದ್ಮನಾಭ ನಗರದ ನಿವಾಸದಿಂದಲೇ ಸದನ ವೀಕ್ಷಣೆ ಮಾಡಿರುವ ದೇವೇಗೌಡರು ಪಿಚ್ಚರ್ ಅಭಿ ಬಾಕಿ ಹೈ ಅಂದಿದ್ದಾರಂತೆ. ಹಾಗಾಗಿ ಕುತೂಹಲ ಕೆರಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಹೀರೊ, ವಿಧಾನಸಭೆಯಲ್ಲಿ ಜೀರೋ ಆದ ಪ್ರದೀಪ್ ಈಶ್ವರ್

ರಾಜ್ಯದಲ್ಲಿ ಚುನಾವಣೆ ಬಳಿಕ ಹೆಚ್ಚು ಚರ್ಚೆಯಲ್ಲಿರುವ ರಾಜಕಾರಣಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್. ಅಕ್ಕಾ, ಅಮ್ಮಾ ಎಂದು ತೆಲುಗು ನಟರ ರೀತಿಯಲ್ಲಿ ಸಿನಿಮಾ ಡೈಲಾಗ್ ಹೊಡೆದು ಫೇಮಸ್ ಆಗಿರುವ ಪ್ರದೀಪ್ ಈಶ್ವರ್ ಈ ಬಾರಿ ವಿಧಾನಸಭೆ ಒಳಗೆ ಮತ್ತು ಹೊರಗೆ ಚರ್ಚೆಗೆ ಗ್ರಾಸವಾದರು. ಶಾಸಕರು ಈಗ ಮೈಯೆಲ್ಲ ಕಣ್ಣು, ಕಿವಿಯಾಗಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ನಾಲ್ಕು ಜನರ ಮುಂದೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ.
ಮಂಡ್ಯ ಜಿಲ್ಲೆಯ ಡ್ರೈವರ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಮಾತನಾಡುವಾಗ ಅವರು ನನಗೊಂದು ನಿಮಿಷ ಟೈಮ್ ಕೊಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿ ಅವಕಾಶ ಪಡೆದುಕೊಂಡರು. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಿ ಹೊರಬರಲಿ ಎಂದು ಹೇಳಿದ ಮೇಲೂ ಪ್ರದೀಪ್ ಈಶ್ವರ್, ಒಂದು ಸಾವಿಗೆ ಜೆಡಿಎಸ್, ಬಿಜೆಪಿಯವರು ಇಷ್ಟು ಕೂಗಾಡುತ್ತಾರೆ. ಆದರೆ ಕರೊನಾ ಸಮಯದಲ್ಲಿ ಸಾಲು ಸಾಲು ಹೆಣಗಳು ಬಿದ್ದಾಗ ಇವರು ಎಲ್ಲಿ ಹೋಗಿದ್ದರು ಎಂದುಬಿಟ್ಟರು. ಈ ಮಾತು ಕೇಳಿ ಸ್ಪೀಕರ್ ಸೇರಿದಂತೆ ಇಡೀ ಸದನ ನಗೆಯಾಡಲು ಕಾರಣವಾಯಿತು.

ಇದನ್ನೂ ಓದಿ : Karnataka Budget 2023: ಕಲ್ಯಾಣ ಕರ್ನಾಟಕಕ್ಕೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್‌ ಘೋಷಣೆ

ರಾಜ್ಯ ಬಿಜೆಪಿಯ ಮುಜುಗರಕ್ಕೆ ಮೋದಿ, ಅಮಿತ್ ಶಾ ಕಾರಣ…

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಮಯದಲ್ಲಿ ವಿಪಕ್ಷ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಮುಜುಗರ ಮಾಡಿತ್ತು. ಚುನಾವಣೆ ಮುಗಿದು ನಲವತ್ತು ದಿನ ಕಳೆದರೂ ವಿಪಕ್ಷ ನಾಯಕನ ನೇಮಕ ಮಾಡಿಕೊಳ್ಳಲು ಆಗಲಿಲ್ಲ ಎಂದು ಹಂಗಿಸಿದರು. ಇದು ತಡವಾಗ್ತಿರುವುದು ದೆಹಲಿ ನಾಯಕರಿಂದ. ಪಿಎಂ ಮೋದಿ, ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರಿಗೆ ಚುನಾವಣೆ ಗೆದ್ದಷ್ಟು ಇದ್ದ ಉತ್ಸಾಹ ಹುಮ್ಮಸ್ಸು ಸೋತಾಗ ಇರಲ್ಲ. ಈಗ ರಾಜ್ಯ ಬಿಜೆಪಿಯ ಯಾವ ನಾಯಕರಿಗೂ ಮರ್ಯಾದೆ ಕೊಡುವ ಮನಸ್ಸಿನಲ್ಲಿ ಕೇಂದ್ರ ಬಿಜೆಪಿ ನಾಯಕರು ಇಲ್ಲ. ವಿಪಕ್ಷ ನಾಯಕ ಮತ್ತು ಅಧ್ಯಕ್ಷರ ನೇಮಕ ವಿಚಾರದಲ್ಲಿ ಅನಾವಶ್ಯಕವಾಗಿ ತಡ ಮಾಡಿ ಸದನದಲ್ಲಿ ಬಿಜೆಪಿ ಶಾಸಕರ ಮುಜುಗರ ಮಾಡಿಸಲು ಕೇಂದ್ರ ನಾಯಕರೇ ಕಾರಣರಾಗ್ತಿದ್ದಾರೆ ಅನ್ನೋ ಚರ್ಚೆ ವಿಧಾನಸೌಧದಲ್ಲಿ ನಡೆಯುತ್ತಿದೆ.

ವಿಧಾನಸೌಧ ಸದ್ಯಕ್ಕೆ ಸೇಫ್ ಅಲ್ಲ!

ವಿಧಾನಸೌಧ ಈಗ ಕೆ. ಆರ್ ಮಾರುಕಟ್ಟೆ ಆಗಿದೆ ಎಂದು ಈ ಅಂಕಣದಲ್ಲಿ ಹಿಂದೆ ಬರೆಯಲಾಗಿತ್ತು. ಜನಜಂಗುಳಿಯ ನಡುವೆ ಶಾಸಕರು ಯಾರು, ಸಾಮಾನ್ಯ ಜನರು ಯಾರು ಅನ್ನೋದನ್ನ ಗುರುತಿಸಲು ಪೊಲೀಸರಿಗೆ, ಮಾರ್ಷಲ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಬಜೆಟ್ ಮಂಡನೆ ವೀಕ್ಷಣೆಗೆ ಬಂದಿದ್ದ ಒಬ್ಬರು ಸೀದಾ ಹೋಗಿ ವಿಧಾನಸಭೆಯೊಳಗೆ ಶಾಸಕರ ಕುರ್ಚಿಯ ಮೇಲೆ ಕೂತು ಬಿಟ್ಟಿದ್ದರು! ಮಾರ್ಷಲ್ ಕೇಳಿದಾಗ ತಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಂದು ಹೇಳಿದ್ದರು. ಡಿ ಕೆ ಶಿವಕುಮಾರ್ ಅವರ ಕೈಯನ್ನೂ ಕುಲುಕಿದ್ದರು. ಭದ್ರತೆಗಾಗಿ ಕೋಟ್ಯಂತರ ರೂ. ಖರ್ಚು ಮಾಡುವ ವಿಧಾನಸೌಧದೊಳಗೆ ಇಂಥ ದುರ್ವವ್ಯಸ್ಥೆ ನಿರ್ಮಾಣ ಆಗಿರುವುದರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

Exit mobile version