Site icon Vistara News

ವಿಸ್ತಾರ ವರದಿ ಫಲಶ್ರುತಿ | ಸಿದ್ದಾರ್ಥ ಫೋಟೊ ಔಟ್; ಕ್ರೀಡಾ ವಿಜೇತರಿಗೆ ಹೊಸ ಪ್ರಶಸ್ತಿ ಪತ್ರ ವಿತರಣೆ

| ಪಾಂಡುರಂಗ ಜಂತ್ಲಿ, ವಿಜಯನಗರ
ಕ್ರೀಡಾ ವಿಜೇತ ಮಕ್ಕಳಿಗೆ ನೀಡುವ ಪ್ರಶಸ್ತಿ ಪತ್ರದಲ್ಲಿ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಫೋಟೊ ಮುದ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ “ವಿಸ್ತಾರ ನ್ಯೂಸ್ʼʼ ಪ್ರಕಟಿಸಿದ ವರದಿಯಿಂದ ಎಚ್ಚೆತ್ತ ಕ್ರೀಡಾಕೂಟದ ಆಯೋಜಕರು ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಫೋಟೊ ಇಲ್ಲದ ಹೊಸ ಪ್ರಶಸ್ತಿ ಪತ್ರ ಮುದ್ರಿಸಿ ವಿತರಣೆ ಮಾಡಲಾಗಿದೆ.

ಜಿಲ್ಲೆಯ ಪಾಪಿನಾಯಕನಹಳ್ಳಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ವಿತರಿಸಿದ ಪ್ರಶಸ್ತಿ ಪತ್ರ ವಿವಾದಕ್ಕೆ ಕಾರಣವಾಗಿತ್ತು. ʼಸರ್ಕಾರಿ ಪ್ರಶಸ್ತಿ ಪತ್ರದಲ್ಲಿ ಸಚಿವರ ಪುತ್ರನ ಫೋಟೋ, ಕೈ ನಾಯಕರ ಟೀಕೆʼ ಎಂಬ ಶೀರ್ಷಿಕೆಯಲ್ಲಿ ವಿಸ್ತಾರ ನ್ಯೂಸ್ ವಿಶೇಷ ವರದಿ ಬಿತ್ತರಿಸಿತ್ತು.

ಸುದ್ದಿ ಪ್ರಕಟವಾಗುತ್ತಿದ್ದಂತೇ ಎಚ್ಚೆತ್ತುಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ಅವರು, ಘಟನೆಗೆ ಕಾರಣ ಕೇಳಿ ಸರ್ಕಾರಿ ಶಾಲೆಯ ಇಬ್ಬರು ದೈಹಿಕ ಶಿಕ್ಷಕರಿಗೆ ನೋಟೀಸ್ ನೀಡಿದ್ದು, ಸಚಿವ ಆನಂದ್ ಸಿಂಗ್ ಪುತ್ರನ ಫೋಟೊ ಮುದ್ರಿತ ಪ್ರಶಸ್ತಿ ಪತ್ರಗಳನ್ನು ವಾಪಸ್‌ ಪಡೆದು, ಹೊಸ ಪ್ರಶಸ್ತಿ ಪತ್ರ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ.

ಪಾಪಿನಾಯಕನಹಳ್ಳಿ ಕ್ರೀಡಾಕೂಟದಲ್ಲಿ ಈ ಹಿಂದೆ ನೀಡಲಾಗಿದ್ದ ಸಚಿವ ಆನಂದ್‌ ಸಿಂಗ್‌ ಅವರ ಪುತ್ರ ಸಿದ್ದಾರ್ಥ್‌ ಸಿಂಗ್‌ ಫೋಟೋ ಇದ್ದ ಪ್ರಶಸ್ತಿ ಪತ್ರ.

ಇದನ್ನೂ ಓದಿ | ಸರ್ಕಾರಿ ಪ್ರಶಸ್ತಿ ಪತ್ರದಲ್ಲಿ ಸಚಿವರ ಪುತ್ರನ ಫೋಟೋ, ಕೈ ನಾಯಕರ ಟೀಕೆ

ಎಸ್‌ಟಿಎಂಸಿ ಅಧ್ಯಕ್ಷನ ಯಡವಟ್ಟು
ಘಟನೆಗೆ ಸಂಬಂಧಿಸಿದಂತೆ ಶಿಕ್ಷಣಾಧಿಕಾರಿ ನೀಡಿರುವ ನೋಟಿಸ್‌ಗೆ ಕ್ರೀಡಾ ಕಾರ್ಯದರ್ಶಿ ಹಾಗೂ ಪಾಪಿನಾಯಕನಹಳ್ಳಿ ಶಾಲೆ ಸಹ ಶಿಕ್ಷಕ ಚಿದಾನಂದ್, ಸಹ ಕ್ರೀಡಾ ಕಾರ್ಯದರ್ಶಿ ಹಾಗೂ ಸಹ ಶಿಕ್ಷಕ ಅಜಿತ್ ಪ್ರತಿಕ್ರಿಯೇ ಕೊಟ್ಟಿದ್ದಾರೆ. ಅಂದು ನಡೆದ ಕ್ರೀಡಾಕೂಟದ ದಿನ ಮಳೆ ಬಂದಿತ್ತು. ಹೀಗಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿರಲಿಲ್ಲ. ಹೀಗಾಗಿ ಮಾರನೇ ದಿನ ಸಂಜೆ ಕ್ರೀಡಾಕೂಟದ ಜವಾಬ್ದಾರಿ ಹೊತ್ತಿದ್ದ ಪಾಪಿನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತಾಯಣ್ಣ ದೊಡ್ಡಮನಿಯೇ ಪ್ರಶಸ್ತಿ ಪತ್ರ ಮುದ್ರಿಸಿ ತಂದು ದೈಹಿಕ ಶಿಕ್ಷಕರ ಗಮನಕ್ಕೆ ತಾರದೇ ಮೂರನೇ ದಿನ ಮಕ್ಕಳಿಗೆ ವಿತರಣೆ ಮಾಡಿದ್ದಾರೆ. ನಮ್ಮಿಂದ ತಪ್ಪಾಗಿಲ್ಲ, ಇಂತಹ ತಪ್ಪು ಮುಂದೆ ಆಗದಂತೆ ನೋಡಿಕೊಳ್ಳಲಾಗುವುದು. ಸಚಿವ ಆನಂದ್ ಸಿಂಗ್ ಪುತ್ರನ ಫೋಟೊ ಮುದ್ರಿತ ಪ್ರಶಸ್ತಿ ಪತ್ರಗಳನ್ನು ವಾಪಸ್‌ ಪಡೆಯಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರ ಟೀಕೆ ಬೆನ್ನಲ್ಲೇ ಪ್ರಶಸ್ತಿ ಪತ್ರ ವಾಪಸ್!
ವಿಜಯನಗರ ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲೂಕು ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆ.5 ಮತ್ತು 6ರಂದು ತಾಲೂಕಿನ ಪಾಪಿನಾಯಕನಹಳ್ಳಿ 48ನೇ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಗಿತ್ತು.

ಈ ಪ್ರಶಸ್ತಿ ಪತ್ರದಲ್ಲಿ ಸಿದ್ದಾರ್ಥ ಸಿಂಗ್‌ ಕೈಮುಗಿದಿರುವ ಚಿತ್ರ ಮುದ್ರಿಸಲಾಗಿತ್ತು. ಜತೆಗೆ ಫೋಟೋ ಕೆಳಗಡೆ ಕೊಡುಗೆ : ಶ್ರೀ ಸಿದ್ದಾರ್ಥ ಸಿಂಗ್‌, ಯುವ ಮುಖಂಡರು ಹಾಗೂ ಸಮಾಜ ಸೇವಕರು, ವಿಜಯನಗರ ಕ್ಷೇತ್ರ, ಹೊಸಪೇಟೆ ಎಂದು ಬರೆಯಲಾಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು, ನಗರಸಭೆ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Exit mobile version