ವಿಜಯಪುರ: ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ಭೇಟಿ ನೀಡಿ, ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ (Siddheshwar Swamiji) ದರ್ಶನ ಪಡೆದು ಆರೋಗ್ಯ ವಿಚಾರಿಸಿದರು.
ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ಪ್ರಧಾನಿ ವಿಚಾರಿಸಿದರು. ಶ್ರೀಗಳಿಗೆ ನಮಿಸುವ ಮೂಲಕ ಪ್ರಧಾನಿ ಮಾತು ಆರಂಭಿಸಿದಾಗ, ಅದಕ್ಕೆ ಪ್ರತಿಯಾಗಿ ಶ್ರೀಗಳು ಸಹ ಎರಡು ಶಬ್ದ ಮಾತನಾಡಿ ಕೈ ಸನ್ನೆಯ ಮೂಲಕ ನಮಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೋದಿ ಅವರು ವಿನಂತಿಸಿಕೊಂಡಾಗ ಕೈ ಮುಗಿದು ಧನ್ಯವಾದ ಅರ್ಪಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶ್ರೀಗಳ ಆರೋಗ್ಯದ ಬಗ್ಗೆ ಕ್ಷಣ ಕ್ಷಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಇನ್ನು ಮುಂದೆಯೂ ಸಹ ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿರುವೆ. ಪ್ರಧಾನಿಗಳಿಗೆ ಶ್ರೀಗಳು ಕೈ ಮುಗಿದು ಸನ್ನೆ ಮಾಡಿ ಮಾತನಾಡಿದ್ದಾರೆ. ಪ್ರಧಾನಿ ಕೂಡ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಶ್ರೀಗಳ ಹೃದಯಬಡಿತ, ರಕ್ತದೊತ್ತಡ ಸರಿಯಾಗಿದ್ದು, ಕಿಡ್ನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಔಷಧ ಹಾಗೂ ಆಹಾರ ಸೇವನೆ ನಿರಾಕರಿಸುತ್ತಿರುವುದರಿಂದ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದರು.
ಇದನ್ನೂ ಓದಿ | Amit Shah | ಬಿಜೆಪಿಯವರು ಭಾರತ್ ಮಾತಾಕಿ ಜೈ ಅಂದ್ರೆ, ಕಾಂಗ್ರೆಸ್‌ನವರು ಸೋನಿಯಾ ಮಾತಾಕಿ ಜೈ ಅಂತಾರೆ: ಸಿಎಂ ಬೊಮ್ಮಾಯಿ
ಆಧುನಿಕ ಕಾಲದಲ್ಲಿ ನೈಜವಾದ ವೈರಾಗ್ಯ ನೋಡುವ ಸೌಭಾಗ್ಯ ಅವರಿಂದ ನಮಗೆ ದೊರಕಿದೆ. ಅವರ ಮಾತು, ಬೋಧನೆ ನಮಗೆ ದಾರಿದೀಪ. ಇಡೀ ಕರ್ನಾಟಕದಲ್ಲೇ ಮನಃಪರಿವರ್ತನೆ ಮಾಡುವ ಏಕೈಕ ಶಕ್ತಿ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಲ್ಲಿದೆ. ಪರಿಶುದ್ಧ ಆತ್ಮ, ಪರಿಶುದ್ಧ ಚಿಂತನೆ, ಪರಿಶುದ್ಧ ಆಚರಣೆಯನ್ನು ಹೊಂದಿರುವ ಶ್ರೀಗಳು ಅಪರೂಪದ ಒಂದು ತತ್ವಜ್ಞಾನಿಯಾಗಿದ್ದಾರೆ. ಬದುಕಿನ ಸೂಕ್ಷ್ಮತೆಯನ್ನು ಅತ್ಯಂತ ನಿಖರವಾಗಿ ಅರ್ಥೈಸಿ, ಜಟಿಲ ಸಮಸ್ಯೆಗಳಿಗೆ ಸರಳ ಪರಿಹಾರ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ನನ್ನ ಜತೆ ಹಲವಾರು ವಿಷಯಗಳನ್ನು ಶ್ರೀಗಳು ಚರ್ಚಿಸಿದ್ದಾರೆ. ರೈತಾಪಿ ಜನತೆ, ನೀರಾವರಿ, ತತ್ವಜ್ಞಾನ, ಆಧ್ಯಾತ್ಮ ಹೀಗೆ ಎರಡೂ ಮೂರು ತಾಸು ಚರ್ಚೆ ಮಾಡಿದ್ದೇವೆ. ಅವರ ಆಶೀರ್ವಾದ ಸದಾ ನನ್ನ ಮೇಲಿದೆ, ನನ್ನ ಮತಕ್ಷೇತ್ರದ ಶಿಶುನಾಳ ಶರೀಫರ ಜನ್ಮಭೂಮಿ ಅತ್ತಿಗೇರಿಯಲ್ಲಿ ಒಂದು ತಿಂಗಳು ಸ್ವಾಮೀಜಿ ಇದ್ದರು ಎಂದು ಸ್ಮರಿಸಿದರು.
ರಾಜಕಾರಣದಿಂದ ದೂರ ಇದ್ದರೂ ನಾನು ಸಿಎಂ ಆದ ಸಂದರ್ಭದಲ್ಲಿ ನಾಡಿಗೆ ನಿನ್ನಿಂದ ಒಳ್ಳೆಯದಾಗಲಿ ಎಂದು ಸ್ವಾಮೀಜಿ ಹಾರೈಸಿದ್ದರು. ಅವರು ನಾನು ಪಾವಿತ್ರ್ಯತೆಯಿಂದ ಒಪ್ಪಿಕೊಂಡಿರುವ ಏಕೈಕ ಗುರುವಾಗಿದ್ದಾರೆ. ಸ್ವಾಮೀಜಿ ಇದ್ದರೆ ಅದೊಂದು ಪ್ರೇರಣಾ ಶಕ್ತಿ, ಭಗವಂತ ಅವರಿಗೆ ಆರೋಗ್ಯ ಕಲ್ಪಿಸಲಿ ಎಂದು ಪ್ರಾರ್ಥಿಸುವೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಾರ್ವಜನಿಕ ಬದುಕಿನ ಹೈ ವ್ಯಾಲ್ಯೂ ಕಲಿಸಿಕೊಟ್ಟ ಸ್ವಾಮೀಜಿಗಳು, ಅಕ್ಷರಶಃ ತಾವು ನಡೆದು ಇನ್ನೊಬ್ಬರು ನಡೆಯುವಂತೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಸಹ ಶ್ರೀಗಳ ಆರೋಗ್ಯದ ಬಗ್ಗೆ ತೀವ್ರ ಕಳಕಳಿ ಹೊಂದಿದ್ದು, ಅವರ ಜತೆ ಮಾತನಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸಚಿವ ಗೋವಿಂದ ಕಾರಜೋಳ, ಶಾಸಕ ಅರವಿಂದ ಬೆಲ್ಲದ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ , ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಅವರೊಡನೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ | Karnataka Election | ಕುಟುಂಬ ರಾಜಕಾರಣ ಎಂದರೇ ಭ್ರಷ್ಟಾಚಾರ; ದೇಶ-ಕರ್ನಾಟಕದಲ್ಲಿ ಇದಕ್ಕಿಲ್ಲ ಅವಕಾಶ: ಪ್ರಲ್ಹಾದ್ ಜೋಶಿ