Site icon Vistara News

Siddheshwar Swamiji | ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ? ಚೇತರಿಕೆಗೆ ಕೋಟ್ಯಂತರ ಭಕ್ತರ ಪ್ರಾರ್ಥನೆ

siddeshwara seer

ವಿಜಯಪುರ: ನಡೆದಾಡುವ ದೇವರು, ಸರಳ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddheshwar Swamiji) ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಜ್ಞಾನಯೋಗಾಶ್ರಮಕ್ಕೆ ಹರಿದು ಬರುತ್ತಿದೆ.

ಶ್ರೀಗಳಿಗೆ ವೆಂಟಿಲೇಟರ್‌ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ವೈದ್ಯರು, ಚಿಕಿತ್ಸೆ ಮುಂದುವರಿದಿದೆ. ಸದ್ಯಕ್ಕೆ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿಗಳಿಗೆ ಶನಿವಾರದಿಂದಲೂ ಚಿಕಿತ್ಸೆ ಮುಂದುವರಿದಿದ್ದು, ಆಶ್ರಮದ ಆವರಣದಲ್ಲಿರುವ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ಎಸ್.ಬಿ. ಪಾಟೀಲ್, ಡಾ. ಅರವಿಂದ್ ಪಾಟೀಲ್, ಡಾ.‌ ಮಲ್ಲಣ್ಣ ಮೂಲಿಮನಿ ವೈದ್ಯರ ತಂಡದ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | WhatsApp error | ವಿರೂಪಗೊಳಿಸಿದ ಭಾರತದ ಭೂಪಟ ಪ್ರಕಟಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದ ವಾಟ್ಸ್‌ ಆ್ಯಪ್

ಸ್ವಾಮೀಜಿಗಳ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಶ್ರಮಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ವಾಪಸ್‌ ತೆರಳುವಂತೆ ಸೂಚಿಸಲಾಗುತ್ತಿದ್ದರೂ ಭಕ್ತರ ದಂಡು ಆಶ್ರಮಕ್ಕೆ ಆಗಮಿಸುತ್ತಿದ್ದು, ಬಿಸಿಲಿನಲ್ಲಿಯೇ ಆವರಣದಲ್ಲಿ ಕುಳಿತುಕೊಂಡು ಕಾಯುತ್ತಿದ್ದಾರೆ.

ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀ
ಮೈಸೂರಿನ ಸುತ್ತೂರು ಮಹಾಸಂಸ್ಥಾನದ ಜಗದ್ಗರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅವರು ಭಾನುವಾರ (ಜ.೧) ಮುಂಜಾನೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

ಸಿದ್ದೇಶ್ವರ ಶ್ರೀಗಳಿಂದಲೇ ಪುಸ್ತಕ ಬಿಡುಗಡೆ
ಸಿದ್ದೇಶ್ವರ ಶ್ರೀಗಳು ತಮ್ಮ ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳ ಕುರಿತಾಗಿ ಬರೆದಿರುವ “ಜ್ಞಾನ ಸಂಪುಟ” ಎಂಬ ಪುಸ್ತಕವನ್ನು ಶ್ರೀಗಳು ಹಾಸಿಗೆ ಮೇಲೆ ಮಲಗಿಕೊಂಡೇ ಭಾನುವಾರ ಮುಂಜಾನೆ ಬಿಡುಗಡೆ ಮಾಡಿದರು. ಈ ವೇಳೆ ಸುತ್ತೂರು ಶ್ರೀಗಳು ಹಾಜರಿದ್ದರು. ಬಳಿಕ ಮಾತನಾಡಿದ ಸುತ್ತೂರು ಶ್ರೀಗಳು, ಅಪರೂಪದ ಕೃತಿಗಳನ್ನು ಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ. ಇಂದು‌ ನಾವೆಲ್ಲ ಜ್ಞಾನ ಯೋಗ ಸಂಪುಟ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಶ್ರೀಗಳು ಆರೋಗ್ಯವಾಗಿದ್ದಾರೆ, ವಿಶ್ರಾಂತಿ ಪಡೆಯುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Dowry harassment | ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ; ಆತ್ಮಹತ್ಯೆ ಅಲ್ಲ, ಕೊಲೆಯೆಂದು ಪೋಷಕರ ಆರೋಪ

ಮಾಹಿತಿ ಪಡೆಯುತ್ತಿರುವ ಸಿಎಂ
ಶನಿವಾರ (ಡಿ. 31) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಪ್ರಧಾನಿ‌ ನರೇಂದ್ರ ಮೋದಿ ಅವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ಪ್ರಧಾನಿ ವಿಚಾರಿಸಿದ್ದರು. ಶ್ರೀಗಳಿಗೆ ನಮಿಸುವ ಮೂಲಕ‌ ಪ್ರಧಾನಿ ಮಾತು ಆರಂಭಿಸಿದಾಗ, ಅದಕ್ಕೆ ಪ್ರತಿಯಾಗಿ ಶ್ರೀಗಳು ಸಹ ಎರಡು ಶಬ್ದ ಮಾತನಾಡಿ ಕೈಸನ್ನೆ ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ‌ ಮೋದಿ ಅವರು ವಿನಂತಿಸಿಕೊಂಡಾಗ ಕೈ ಮುಗಿದು ಧನ್ಯವಾದ ಅರ್ಪಿಸಿದ್ದರು.

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶ್ರೀಗಳ ಆರೋಗ್ಯದ ಬಗ್ಗೆ ಕ್ಷಣ ಕ್ಷಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಇನ್ನು ಮುಂದೆಯೂ ಸಹ ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿರುವೆ. ಪ್ರಧಾನಿಗಳಿಗೆ ಶ್ರೀಗಳು ಕೈ ಮುಗಿದು ಸನ್ನೆ ಮಾಡಿ ಮಾತನಾಡಿದ್ದಾರೆ. ಪ್ರಧಾನಿ ಕೂಡ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಶ್ರೀಗಳ ಹೃದಯಬಡಿತ, ರಕ್ತದೊತ್ತಡ ಸರಿಯಾಗಿದ್ದು, ಕಿಡ್ನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಔಷಧ ಹಾಗೂ ಆಹಾರ ಸೇವನೆ ನಿರಾಕರಿಸುತ್ತಿರುವುದರಿಂದ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಹೇಳಿದ್ದರು.

ಭಕ್ತರಿಗೆ ದರ್ಶನ ನೀಡುತ್ತಿದ್ದರು
ಕಳೆದ ಮೂರ್ನಾಲ್ಕು ದಿನಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಶ್ರೀಗಳು ನಿತ್ಯ ಭಕ್ತರಿಗೆ ದರ್ಶನ ನೀಡಲು ಆರಂಭಿಸಿದ್ದರು. ಸಾವಿರಾರು ಭಕ್ತರು ಆಶ್ರಮಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆಯುತ್ತಿದ್ದರು. ಭಾನುವಾರ ಸಹ ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಆಶ್ರಮಕ್ಕೆ ಭೇಟಿ ನೀಡಿದ್ದು, ಶ್ರೀಗಳ ದರ್ಶನಕ್ಕೆ ಕಾಯುತ್ತಿದ್ದರು.
ಶನಿವಾರ (ಡಿ.31) ಕೂಡ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸುಮಾರು ಅರ್ಧ ಗಂಟೆಗಳ ಕಾಲ ಭಕ್ತರಿಗೆ ದರ್ಶನ ನೀಡಿದ್ದರು. ಬೆಳಗ್ಗೆ 6 ಗಂಟೆಯಿಂದಲೇ ಆಗಮಿಸಿ, ದರ್ಶನಕ್ಕಾಗಿ ಭಕ್ತರು ಕಾದು ಕುಳಿತಿದ್ದರಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಶ್ರೀಗಳು ದರ್ಶನ ನೀಡಿದ್ದರು.

ಇದನ್ನೂ ಓದಿ | Vinay Rajkumar | ವಿಭಿನ್ನ ಲುಕ್‌ನೊಂದಿಗೆ ಕಾಣಿಸಿಕೊಂಡ ವಿನಯ್ ರಾಜ್ ಕುಮಾರ್

ಆನ್‌ಲೈನ್‌ನಲ್ಲಿ ದರ್ಶನ ರದ್ದು
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಚೇತರಿಸಿಕೊಂಡಿದ್ದರಿಂದ ಭಾನುವಾರದಿಂದ (ಜ.1) ಶ್ರೀಗಳ ನೇರ ದರ್ಶನವನ್ನು ರದ್ದುಪಡಿಸಿ, ಕೇವಲ ವರ್ಚುವಲ್‌ (ಆನ್‌ಲೈನ್‌) ದರ್ಶನ ನೀಡಿಸಲಾಗುತ್ತದೆ ಎಂದು ಜ್ಞಾನಯೋಗಾಶ್ರಮವು ಪ್ರಕಟಿಸಿತ್ತು. ಇನ್ನು ಮುಂದೆ ನಿಗದಿತ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಫೇಸ್‌ಬುಕ್‌, ಯೂಟ್ಯೂಬ್‌ ಲೈವ್‌ನಲ್ಲಿ ಶ್ರೀಗಳ ದರ್ಶನ ಪ್ರಸಾರವನ್ನು ಮಾಡಲಾಗುವುದು, ಯಾರೂ ಅವರನ್ನು ನೇರವಾಗಿ ನೋಡಬೇಕೆಂದು ಆಶ್ರಮದ ಬಳಿ ಬರಬೇಡಿ ಎಂದು ಜ್ಞಾನಯೋಗಾಶ್ರಮವು ಭಕ್ತರಲ್ಲಿ ಮನವಿ ಮಾಡಿತ್ತು.

“ನಿಮ್ಮ ಭಕ್ತಿ, ಪ್ರೀತಿ ಅರ್ಥವಾಗುತ್ತದೆ. ಆದರೆ, ಇದು ದೇವರಿಗೆ ಇನ್ನಷ್ಟು ತ್ರಾಸವನ್ನುಂಟು ಮಾಡುತ್ತಿದೆ. ಭಕ್ತರು ಸೇರಿದ್ದಾರೆ ಎಂದಾದರೆ, ಅವರು ವಿಶ್ರಾಂತಿ ಪಡೆಯದೇ ದರ್ಶನ ನೀಡಲು ಹೋಗೋಣ ಎಂದು ಹಟ ಹಿಡಿಯುತ್ತಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ವಿಶ್ರಾಂತಿ ದೊರೆಯುವಂತೆ ಮಾಡೋಣ. ತಂತ್ರಜ್ಞಾನದ ಈ ಯುಗದಲ್ಲಿ ನಾವು ಅದನ್ನು ಬಳಸಿಕೊಳ್ಳೋಣ. ನಾಳೆಯಿಂದ ಅವರ ವರ್ಚುವಲ್‌ ದರ್ಶನ ಪಡೆಯೋಣʼʼ ಎಂದು ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಭಕ್ತರಲ್ಲಿ ಶನಿವಾರ ಮನವಿ ಮಾಡಿದ್ದರು. ಆದರೆ, ಭಾನುವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ದರ್ಶನ ಭಾಗ್ಯವನ್ನು ಕರುಣಿಸಲಾಗಿಲ್ಲ. ಹೀಗಾಗಿ ಭಾನುವಾರ ಆನ್‌ಲೈನ್‌ ದರ್ಶನ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಕ್ತರು ಆಶ್ರಮದ ಆವರಣದಲ್ಲಿ ದರ್ಶನಕ್ಕಾಗಿ ಕಾಯುತ್ತಿದ್ದಾರೆ.

83 ವರ್ಷದ ಶ್ರೀ ಸಿದ್ದೇಶ್ವರ ಶ್ರೀಗಳು ನಿತ್ಯ ಎಂದಿನಂತೆ ಸ್ನಾನ ಪೂಜೆ ಮಾಡುವುದರ ಜತೆಗೆ ಶುಕ್ರವಾರ ಸಂಜೆ ವ್ಹೀಲ್ ಚೇರ್‌ನಲ್ಲಿ ಕುಳಿತೇ ಆಶ್ರಮದಲ್ಲಿ ಅಡ್ಡಾಡಿದ್ದರು. ಹಿರಿಯ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಬಳಿ 15 ನಿಮಿಷ ಧ್ಯಾನಾಸಕ್ತರಾಗಿ ಕುಳಿತಿದ್ದರು. ಎರಡು ಬಾರಿ ಭಕ್ತರಿಗೆ ದರ್ಶನ ಕೂಡ ನೀಡಿದ್ದರು. ಶನಿವಾರವೂ ಅವರು 1 ಗಂಟೆ ಕಾಲ ದರ್ಶನವನ್ನು ನೀಡಿದ್ದರು.

ಇದನ್ನೂ ಓದಿ | Junior NTR | ಹೊಸ ವರ್ಷಕ್ಕೆ ಸಂತಸ ಸುದ್ದಿ ಹಂಚಿಕೊಂಡ ಜೂ. ಎನ್‌ಟಿಆರ್‌!

Exit mobile version