ವಿಜಯಪುರ/ಚಿಕ್ಕೋಡಿ: ನಡೆದಾಡುವ ದೇವರು, ಜಗತ್ತಿನ ಶ್ರೇಷ್ಠ ಸಂತ, ಪ್ರವಚನದ ಮೂಲಕ ವಿಶ್ವಾದ್ಯಂತ ಭಕ್ತರನ್ನು ಹೊಂದಿದ್ದ ದಣಿವರಿಯದ ಮಹಾನ್ ದಾರ್ಶನಿಕ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddheshwar Swamiji) ಆರೋಗ್ಯ ಚೇತರಿಕೆ ಆಗಲಿ ಎಂದು ಜಾತ್ಯತೀತವಾಗಿ ಎಲ್ಲ ಪವಿತ್ರ ಪೂಜನೀಯ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಜ್ಞಾನಯೋಗಾಶ್ರಮದಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಶೀಘ್ರ ಗುಣಮುಖರಾಗಲಿ ಎಂದು ವಿವಿಧೆಡೆ ದೇವರ ಮೊರೆ ಹೋಗಲಾಗುತ್ತಿದೆ.
ಈ ಮಧ್ಯೆ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿರುವ ಮಾಣಿಕೇಶ್ವರ ಶಾಲೆಯಿಂದ ಅಲ್ಲಿನ ಗ್ರಾಮದೇವತೆ ದೇವಸ್ಥಾನದವರೆಗೆ ಮಾಣಿಕೇಶ್ವರ ಶಾಲೆ ಮುಖ್ಯಸ್ಥ ಸಿ.ಎಸ್. ಅವಟಿ ಅವರಿಂದ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಸಿದ್ದೇಶ್ವರ ಶ್ರೀಗಳ ಆರೋಗ್ಯಕ್ಕಾಗಿ ದೀರ್ಘದಂಡ ನಮಸ್ಕಾರ ಹಾಕಿದರು. ಈ ವೇಳೆ ಶಾಲೆಯ ವಿದ್ಯಾರ್ಥಿಗಳು ಅವರ ಜತೆಗೆ ಮೆರವಣಿಗೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಿರೇಮಠದಲ್ಲಿ ಮಹಾಮೃತ್ಯಂಜಯ ಹೋಮ
ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ ಮಹಾಮೃತ್ಯಂಜಯ ಹೋಮವನ್ನು ನೆರವೇರಿಸಲಾಯಿತು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಹೋಮ ಕಾರ್ಯಗಳು ನಡೆದಿವೆ. 20ಕ್ಕೂ ಹೆಚ್ಚು ಯತಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ | ನನ್ನ ಬಗ್ಗೆ ಮಾತಾಡಿದರೆ ನಿಮ್ಮದೆಲ್ಲ ಬಿಚ್ಚಿಡಬೇಕಾಗುತ್ತದೆ: ಬಿ.ಕೆ. ಹರಿಪ್ರಸಾದ್‌ಗೆ ಸಿ.ಟಿ. ರವಿ ಎಚ್ಚರಿಕೆ
ಆಶ್ರಮದ ಮಲ್ಲಿಕಾರ್ಜುನ ಗುರುಗಳ ಗದ್ದುಗೆಯಲ್ಲಿ ಪೂಜೆ
ಶ್ರೀಗಳು ಬೇಗ ಚೇತರಿಸಿಕೊಳ್ಳಲಿ ಎಂದು ಆಶ್ರಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ಗುರುಗಳ ಗದ್ದುಗೆಯ ಮಂಟಪದಲ್ಲಿ ಬೆಳಗಿನ ಜಾವ ಐದು ಗಂಟೆಯಿಂದಲೇ ಪೂಜೆ, ಪ್ರಾರ್ಥನೆ ನಡೆಸಲಾಗಿದೆ. ಆಶ್ರಮದ ಸ್ವಾಮೀಜಿಗಳು ಹಾಗೂ ಭಕ್ತರು ಸೇರಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿದ್ದರು.
ಶ್ರೀಗಳ ಆರೋಗ್ಯದ ಬಗ್ಗೆ ತೀವ್ರ ಚಿಂತಿತರಾಗಿರುವ ಭಕ್ತರು, ಸಾವಿರಾರು ಸಂಖ್ಯೆಯಲ್ಲಿ ಆಶ್ರಮದ ಎದುರು ಜಮಾಯಿಸಿದ್ದಾರೆ. ಎಲ್ಲರೂ ಒಂದೆಡೆ ಜಮಾಯಿಸುವುದರಿಂದ ಸಮಸ್ಯೆ ಆಗಬಾರದು ಎಂದು ಬೆಳಗ್ಗೆ ಕೆಲಕಾಲ ಭಕ್ತರನ್ನು ಮುಖ್ಯ ಗೇಟ್ ಹೊರಭಾಗದಲ್ಲೇ ನಿಲ್ಲಿಸಲಾಗಿತ್ತು. ಬಳಿಕ ಸಿದ್ದೇಶ್ವರ ಶ್ರೀಗಳ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಗುರುಗಳ ಗದ್ದುಗೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.
ಜಾತ್ಯತೀತ ಪ್ರಾರ್ಥನೆ
ವಿಜಯಪುರ ನಗರದ ಅಬ್ದುಲ್ ರಜಾಕ್ ದರ್ಗಾದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ಬೆಂಬಲಿಗರು ಸ್ವಾಮೀಜಿಗಳ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ | Indian Cricket Team | ರಾಹುಲ್ಗೆ ಒಡಿಐ ವಿಶ್ವ ಕಪ್ನಲ್ಲಿ ಅವಕಾಶ ಸಿಗದು ಎಂದು ಭವಿಷ್ಯ ನುಡಿದ ಮಾಜಿ ಕೋಚ್