Site icon Vistara News

Siddheshwar Swamiji | ಸಿದ್ದೇಶ್ವರ ಶ್ರೀಗಳು ಆಹಾರ ಸ್ವೀಕರಿಸುತ್ತಿಲ್ಲ, ಆಸ್ಪತ್ರೆಗೆ ಶಿಫ್ಟ್‌ ಆಗಲು ಒಪ್ಪುತ್ತಿಲ್ಲ: ವೈದ್ಯ ಪಾಟೀಲ್‌

siddeshwara seer 2 ಜ್ಞಾನಯೋಗಾಶ್ರಮ ವಿಜಯಪುರ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ: ನಡೆದಾಡುವ ದೇವರು, ಜಗತ್ತಿನ ಶ್ರೇಷ್ಠ ಸಂತ, ಪ್ರವಚನದ ಮೂಲಕ ವಿಶ್ವಾದ್ಯಂತ ಭಕ್ತರನ್ನು ಹೊಂದಿದ್ದ ದಣಿವರಿಯದ ಮಹಾನ್ ದಾರ್ಶನಿಕ, ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಆರೋಗ್ಯ ಚೇತರಿಕೆಗಾಗಿ ಭಕ್ತರು ದೇವರಿಗೆ ಮೊರೆ ಇಟ್ಟಿದ್ದಾರೆ, ಸ್ವಾಮೀಜಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲದೆ, ರಾಜಕೀಯ ನಾಯಕರು, ವಿವಿಧ ಮಠಾಧೀಶರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಈ ಮಧ್ಯೆ ವೈದ್ಯರು ಪ್ರತಿಕ್ರಿಯೆ ನೀಡಿದ್ದು, ಶ್ರೀಗಳ ಆರೋಗ್ಯವು ಸ್ಥಿರವಾಗಿದ್ದರೂ, ಯಾವುದೇ ಆಹಾರವನ್ನು ಸ್ವೀಕರಿಸುತ್ತಿಲ್ಲ. ಅಲ್ಲದೆ, ಉನ್ನತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲೂ ಒಪ್ಪುತ್ತಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಎಸ್.ಬಿ. ಪಾಟೀಲ್‌ ಹೇಳಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸುವುದಾಗಿ ಶ್ರೀಗಳ ಬಳಿ ಕೇಳಿದರೆ, ಅವರು ಆಸ್ಪತ್ರೆಗೆ ಬೇಡವೆಂದು ಕೈ ಸನ್ನೆ ಮೂಲಕ ಹೇಳಿದ್ದಾರೆ. ಅವರ ಅಣತಿಯಂತೆ ನಾವು ನಡೆಯುತ್ತಿದ್ದೇವೆ. ಎಲ್ಲ ರೀತಿಯ ಚಿಕಿತ್ಸೆಗೆ ತಯಾರಿ ಮಾಡಿಕೊಂಡಿದ್ದೇವೆ. ಶ್ರೀಗಳು ಬೆಳಗ್ಗೆಯಿಂದ ಏನೂ ಸೇವಿಸಿಲ್ಲ. ಈ ಕಾರಣ ಸಲಾಯಿನ್ ಮೂಲಕ ಆಹಾರ ಕೊಡುತ್ತಿದ್ದೇವೆ. ಬಿಪಿ ಹಾಗೂ ನಾಡಿಬಡಿತ ಸಾವಕಾಶವಾಗಿ ಕಡಿಮೆಯಾಗುತ್ತಿದೆ. ಶ್ರೀಗಳಿಗೆ ಉಸಿರಾಟ ಸಮಸ್ಯೆ ಆಗಿದ್ದು, ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಶ್ರೀಗಳಲ್ಲಿ ಮೂಮೆಂಟ್ ಇದೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಚೇತರಿಕೆಗಾಗಿ ಭಕ್ತರು ಪ್ರಾರ್ಥನೆ ಮಾಡಿ ಎಂದು ವೈದ್ಯರು ಹೇಳಿದರು.

ಶ್ರೀಗಳ ದರ್ಶನಕ್ಕಾಗಿ ಕಾದಿರುವ ಭಕ್ತಗಣ
ಸಿದ್ದೇಶ್ವರ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಬೇಡುತ್ತಿರುವ ಭಕ್ತರು, ದೂರದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಶ್ರಮದ ಆವರಣದಲ್ಲಿ ಸೇರಿದ್ದಾರೆ. ಕಲಬುರಗಿ, ಧಾರವಾಡ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಬರುತ್ತಲೇ ಇದ್ದಾರೆ. ಬೆಳಗ್ಗೆ ಕೆಲಕಾಲ ಭಕ್ತರನ್ನು ಮುಖ್ಯ ಗೇಟ್ ಹೊರಭಾಗದಲ್ಲೇ ನಿಲ್ಲಿಸಲಾಗಿತ್ತು. ಬಳಿಕ ಸಿದ್ದೇಶ್ವರ ಶ್ರೀಗಳ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಗುರುಗಳ ಗದ್ದುಗೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಮಠದ ಆಡಳಿತ ಮಂಡಳಿಯವರು ಭಾನುವಾರ ಎಲ್‌ಇಡಿ ಸ್ಕ್ರೀನ್ ಮೂಲಕ ದರ್ಶನ ವ್ಯವಸ್ಥೆ ಮಾಡಿದ್ದರು. ಆದರೆ, ಸೋಮವಾರ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿಲ್ಲ. ಇದು ಭಕ್ತರಿಗೆ ನಿರಾಸೆ ಮೂಡಿಸಿದೆ.

ಇದನ್ನೂ ಓದಿ | Karnataka Election | ಅಮಿತ್‌ ಶಾ ದೇವೇಗೌಡರ ಉಗುರಿಗೂ ಸಮವಲ್ಲ ಎಂದ ಎಚ್‌ಡಿಕೆ, ಬಿಜೆಪಿ ಪತನ ಆರಂಭ ಎಂದು ಕಿಡಿ

ದೀಡ್‌ ನಮಸ್ಕಾರ; ಸಾಮೂಹಿಕ ಪ್ರಾರ್ಥನೆ
ವಿಜಯಪುರ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿರುವ ಮಾಣಿಕೇಶ್ವರ ಶಾಲೆ‌ಯಿಂದ ಅಲ್ಲಿನ ಗ್ರಾಮದೇವತೆ ದೇವಸ್ಥಾನದವರೆಗೆ ಮಾಣಿಕೇಶ್ವರ ಶಾಲೆ ಮುಖ್ಯಸ್ಥ ಸಿ‌.ಎಸ್. ಅವಟಿ ಅವರಿಂದ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಸಿದ್ದೇಶ್ವರ ಶ್ರೀಗಳ ಆರೋಗ್ಯಕ್ಕಾಗಿ ದೀರ್ಘದಂಡ‌ ನಮಸ್ಕಾರ ಹಾಕಿದ‌ರು. ಈ ವೇಳೆ ಶಾಲೆಯ ವಿದ್ಯಾರ್ಥಿಗಳು ಅವರ ಜತೆಗೆ ಮೆರವಣಿಗೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹಿರೇಮಠದಲ್ಲಿ ಮಹಾಮೃತ್ಯಂಜಯ ಹೋಮ
ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ ಮಹಾಮೃತ್ಯಂಜಯ ಹೋಮವನ್ನು ನೆರವೇರಿಸಲಾಯಿತು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಹೋಮ ಕಾರ್ಯಗಳು ನಡೆದಿವೆ. 20ಕ್ಕೂ ಹೆಚ್ಚು ಯತಿಗಳು ಭಾಗಿಯಾಗಿದ್ದರು.

ಆಶ್ರಮದ ಮಲ್ಲಿಕಾರ್ಜುನ ಗುರುಗಳ ಗದ್ದುಗೆಯಲ್ಲಿ ಪೂಜೆ
ಶ್ರೀಗಳು ಬೇಗ ಚೇತರಿಸಿಕೊಳ್ಳಲಿ ಎಂದು ಆಶ್ರಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ಗುರುಗಳ ಗದ್ದುಗೆಯ ಮಂಟಪದಲ್ಲಿ ಬೆಳಗಿನ ಜಾವ ಐದು ಗಂಟೆಯಿಂದಲೇ ಪೂಜೆ, ಪ್ರಾರ್ಥನೆ ನಡೆಸಲಾಗಿದೆ. ಆಶ್ರಮದ ಸ್ವಾಮೀಜಿಗಳು ಹಾಗೂ ಭಕ್ತರು ಸೇರಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Bomb Found | ಪಂಜಾಬ್‌, ಹರಿಯಾಣ ಸಿಎಂ ನಿವಾಸಗಳ ಬಳಿ ಬಾಂಬ್‌ ಪತ್ತೆ, ಹೈ ಅಲರ್ಟ್

ಜಾತ್ಯತೀತ ಪ್ರಾರ್ಥನೆ
ವಿಜಯಪುರ ನಗರದ ಅಬ್ದುಲ್ ರಜಾಕ್ ದರ್ಗಾದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ಬೆಂಬಲಿಗರು ಸ್ವಾಮೀಜಿಗಳ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಸಿದ್ದರಾಮಯ್ಯ ಸೇರಿ ಗಣ್ಯರ ಭೇಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಸ್ಲಿಂ ಧರ್ಮಗುರು ಮೌಲಾನಾ ತನ್ವೀರ್ ಪೀರಾ ಹಾಸ್ಮೀ, ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಮತ್ತಿತರ ಪ್ರಮುಖರು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ | Accident In Delhi | ಮೈತುಂಬ ಬಟ್ಟೆ ತೊಟ್ಟು ಹೋದ ನನ್ನ ಮಗಳು ಸಿಕ್ಕಿದ್ದು ನಗ್ನವಾಗಿ, ಇದೆಂಥಾ ಅಪಘಾತ?-ದೆಹಲಿ ಯುವತಿ ತಾಯಿಯ ಪ್ರಶ್ನೆ

Exit mobile version