ಧಾರವಾಡ: ಮೊಮ್ಮಕ್ಕಳನ್ನ ಆಡಿಸುತ್ತ ಮನೆಯಲ್ಲಿ ಕೂರಲಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಸವರಾಜ ಹೊರಟ್ಟಿ ಮಾತಿನ ತಿರುಗೇಟು ನೀಡಿದ್ದಾರೆ. ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ನನಗಿಂತ ಸಿದ್ದರಾಮಯ್ಯ ಒಂದು ವರ್ಷ ಹತ್ತು ತಿಂಗಳು ದೊಡ್ಡವನು. ಅವನ್ಯಾಕೆ ಕೂಡಬಾರದು? ಅವನಿಗೆ ಮೂವರು ಮೊಮ್ಮಕ್ಕಳು ಇದ್ದಾರೆ. ಒಬ್ಬರ ಕಣ್ಣಲ್ಲಿ ಬೊಟ್ಟು ಹಾಕಲು ಹೋದವರು ತಮ್ಮ ಕಣ್ಣು ನೋಡಿಕೊಳ್ಳಬೇಕು ಎಂದು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಹೊರಟ್ಟಿ ಬಿಜೆಪಿ ಸೇರ್ಪಡೆ ಕುರಿತು, ರಾತ್ರಿ ಕಂಡ ಬಾವಿಗೆ ಹೊರಟ್ಟಿ ಹಗಲು ಬಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಕುರಿತು ಖಡಕ್ ಆಗಿ ಉತ್ತರಿಸಿದ ಹೊರಟ್ಟಿ, ಒಬ್ಬೊಬ್ಬರು ಒಂದೊಂದು ಕಡೆ ಬೀಳ್ತಾರೆ. ನಾನು 16 ಸಿಎಂಗಳನ್ನು ನೋಡಿದ್ದೇನೆ, 182 ಮಾಜಿ ಮಂತ್ರಿಗಳನ್ನು ನೋಡಿದ್ದೇನೆ, 12 ಶಾಸಕರನ್ನು ನೋಡಿದ್ದೇನೆ. ನನಗಿರುವ ಮಾಹಿತಿ ಪ್ರಕಾರ ಈ ರಾಜ್ಯದಲ್ಲಿ ಯಾರಿಗೂ ಇಷ್ಟು ಅನುಭವ ಇಲ್ಲ. ವಿಧಾನಸೌಧದಲ್ಲಿ ಎಲ್ಲಿ ಯಾವ ಕಲ್ಲಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.
ಇದನ್ನು ಓದಿ| ಸಿದ್ದರಾಮಯ್ಯ ಸೀಳು ನಾಲಿಗೆ ಸರಿಪಡಿಸಿಕೊಳ್ಳಲಿ : ಸಚಿವ ಶ್ರೀರಾಮುಲು
ಪಠ್ಯ ಪುಸ್ತಕದಲ್ಲಿ ಬಸವಣ್ಣ ಬಗ್ಗೆ ಅಪಪ್ರಚಾರ ವಿಚಾರದ ಬಗ್ಗೆ ಮಾತನಾಡಿದ ಹೊರಟ್ಟಿ, ಯಾವುದೇ ಒಂದು ಪುಸ್ತಕ ಮಾಡಬೇಕಾದರೆ ಡಿಎಸ್‌ಆರ್‌ಟಿ ಒಳಗೆ ವಿಂಗ್ ಇದೆ. ಬಳಿಕ ಅದನ್ನ ಸರ್ಕಾರಕ್ಕೆ ಕೊಡುತ್ತಾರೆ. ಸುಮ್ಮ ಸುಮ್ಮನೆ ಯಾವ್ಯಾವುದಕ್ಕೂ ರಾಜಕಾರಣ ಮಾಡುವುದು ಸರಿಯಲ್ಲ. ಅದನ್ನು ಶಿಕ್ಷಣ ಇಲಾಖೆಗೆ ಬಿಡಬೇಕು ಎಂದರು.
ಕರ್ನಾಟಕ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಕಣಕ್ಕೆ ಇಳಿದಿದ್ದಾರೆ. ಈ ಹಿನ್ನಲೆ ಹಿಂದುಳಿದ ಮತಗಳ ವಿಚಾರದ ಬಗ್ಗೆಯೂ ಮಾತನಾಡಿರುವ ಹೊರಟ್ಟಿ, ಹಿಂದುಳಿದ ಮತಗಳಿಗೆ ಕತ್ತರಿ ಬಿದ್ದರೆ ಬೀಳಲಿ ಬಿಡಿ, ನೋಡೋಣ. ಬಿಜೆಪಿಗೆ ಹೋಗುವ ಸಂದರ್ಭದಲ್ಲಿ ನಾನು ಹುಬ್ಬಳ್ಳಿ ಅಂಜುಮನ್ ಜತೆ ಮಾತನಾಡಿದ್ದೇನೆ. ಅವರನ್ನು ನಾನು ಈ ಹಿಂದಿನಿಂದಲೂ ಸಂರಕ್ಷಣೆ ಮಾಡುತ್ತಾ ಬಂದಿದ್ದೇನೆ. ಅನುದಾನ ಕೊಟ್ಟಿದ್ದೇನೆ, ಅವರು ಯಾವ ಪಕ್ಷಕ್ಕೆ ಮತ ಕೊಡದೇ ಇದ್ದರೂ ನಿಮಗೆ ಮತ ಕೊಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.
ಇದನ್ನು ಓದಿ | ಇಡೀ ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸಿದ್ದೇನೆ : ಬಸವರಾಜ ಹೊರಟ್ಟಿ
ಅಲ್ಪಸಂಖ್ಯಾತರು ನನ್ನ ವಿರುದ್ದ ಮತ ಹಾಕಲ್ಲ, ಬಹುಸಂಖ್ಯಾತರೇ ನನ್ನ ವಿರುದ್ದ ಮತ ಹಾಕುತ್ತಾರೆ. ಒಳ್ಳೆಯ ಕೆಲಸ ಮಾಡುವವರಿಗೆ ನನ್ನ ಬೆಂಬಲ ಇದೆ. ಬಸವಣ್ಣನವರ ವಿಷಯ ಬಂದಾಗ ನಾನು ಸಂಪೂರ್ಣವಾಗಿ ನೂರರಷ್ಟು ಅಪಪ್ರಚಾರ ಆಗಬಾರದು ಎಂದು ಹೇಳುತ್ತೇನೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಿಕ್ಷಕರ ಮತವೇ ಇಲ್ಲ. ಮೈಸೂರು, ಬೆಂಗಳೂರು ಕಡೆ ಮಾತ್ರ ಇದ್ದಾರೆ. ನಾನು ಎಲ್ಲಿರುತ್ತೇನೆ ಅಲ್ಲಿ ಮತ ಇವೆ. ಕುಮಾರಸ್ವಾಮಿ ಒಬ್ಬರಿಗೆ ಕರೆ ಮಾಡಿ ಮತ ಕೇಳಿದ್ದಾರೆ. ಅವರು ಕೂಡ ಹೊರಟ್ಟಿ ಎಲ್ಲಿರುತ್ತಾರೊ ಅಲ್ಲಿ ಮತ ಹಾಕ್ತೇನೆ ಎಂದು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.