Site icon Vistara News

Karnataka election: ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬ್ಯಾಲಹಳ್ಳಿ ಗೋವಿಂದ ಗೌಡ: ಶಾಸಕ ವಿ. ಮುನಿಯಪ್ಪ ಘೋಷಣೆ

Karnataka election

#image_title

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ (Karnataka election) ಹಾಲಿ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪ ಕ್ಷೇತ್ರ ತ್ಯಾಗ ಮಾಡಿದ್ದಾರೆ. ತಮಗೆ ಟಿಕೆಟ್ ಕೈ ತಪ್ಪುತ್ತದೆ ಎಂಬುದನ್ನು ಅರಿತ ಅವರು, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡರೇ ಈ ಬಾರಿಯ ಕಾಂಗ್ರೆಸ್‌ ಅಭ್ಯರ್ಥಿ ಎಂದು ಸಾರ್ವಜನಿಕವಾಗಿ ಘೋಷಿಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಸಮಾಜ ಸೇವಕರಾದ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಕಾಂಗ್ರೆಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಇವರ ಜತೆ ಶಾಸಕ ವಿ. ಮುನಿಯಪ್ಪ ಭಿನ್ನಾಭಿಪ್ರಾಯ ಹೊಂದಿರುವ ಹಿನ್ನೆಲೆಯಲ್ಲಿ ತಮಗೆ ಆಪ್ತರಾದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರೇ ಈ ಬಾರಿಯ ಅಭ್ಯರ್ಥಿ ಎಂದು ಹೇಳುವ ಮೂಲಕ ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ ನೀಡಿದ್ದಾರೆ.

ಇದನ್ನೂ ಓದಿ | Karnataka Election: ಇಲ್ಲಿ ಗೆದ್ದರೆ ಬೆಂಗಳೂರನ್ನೇ ಕಂಟ್ರೋಲ್ ಮಾಡಬಹುದು; ಇಳಕಲ್‌ನಲ್ಲಿ ರೆಡ್ಡಿ ಹೇಳಿಕೆ ವಿಡಿಯೊ ವೈರಲ್

ಈ ಹಿಂದೆ ತಾವು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ತಮ್ಮ ಪುತ್ರ ಸ್ಪರ್ಧಿಸುತ್ತಾರೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಟಿಕೆಟ್‌ಗಾಗಿ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದಾದ ನಂತರ ಕ್ಷೇತ್ರದಲ್ಲಿ ಶಾಸಕ‌ ಸ್ಥಾನ ಕೈ ಬಿಡುವಂತೆ ಕಾಂಗ್ರೆಸ್ ಪಕ್ಷ ಮುಖಂಡ ರಾಜೀವ್ ಗೌಡ ನನಗೆ 30 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ಹಾಗೆಯೇ ಪುಟ್ಟು ಆಂಜಿನಪ್ಪ ಕೂಡ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ವಿ.ಮುನಿಯಪ್ಪ ಆರೋಪಿಸಿದ್ದರು. ಹೀಗಾಗಿ ಇಬ್ಬರು ಟಿಕೆಟ್‌ ಆಕ್ಷಾಂಕ್ಷಿಗಳು ಹಾಗೂ ಶಾಸಕರ ನಡುವೆ ಅಂತರ ಏರ್ಪಟ್ಟಿತ್ತು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅಲ್ಲಿ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದರು. ಇದೀಗ ಅವರಿಗೆ ಟಿಕೆಟ್‌ ನೀಡಲು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಒಲವು ತೋರಿಸಿ, ಬಹಿರಂಗವಾಗಿ ಸುದ್ದಿಗೋಷ್ಠಿಯಲ್ಲಿ ಹೆಸರು ಘೋಷಣೆ ಮಾಡಿದ್ದಾರೆ.

Exit mobile version