Site icon Vistara News

Sigandur Chowdamma Devi Jatre | ಬೇಡಿದ ವರವ ನೀಡುವ ಸಿಗಂದೂರು ಚೌಡಮ್ಮ; ಜ‌.14, 15ರಂದು ಜಾತ್ರಾ ಮಹೋತ್ಸವ

Sigandur Chowdamma Devi Jatre

ಸಿಗಂದೂರು (ಶಿವಮೊಗ್ಗ): ಅವೈದಿಕ ಪರಂಪರೆಯ ಈಡಿಗರು ಶಿವ ಮತ್ತು ಶಕ್ತಿ ಆರಾಧಕರು. ಈಡಿಗ ಸಮುದಾಯದ ಎಲ್ಲ ಉಪಪಂಗಡಗಳ ಐತಿಹ್ಯವನ್ನು ಅವಲೋಕಿಸಿದರೆ ಎಲ್ಲವೂ ಪರಿಸರದೊಂದಿಗೇ ಮಿಳಿತಗೊಂಡಿವೆ. ವನವನ್ನು ಆರಾಧಿಸಿಕೊಂಡು ಅದರ ಉತ್ಪನ್ನವನ್ನೇ ಕುಲಕಸುಬಾಗಿ ರೂಢಿಸಿಕೊಂಡ ಪರಂಪರೆ ಈ ಸಮುದಾಯಕ್ಕಿದೆ. ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ದೀವರು ಭೂಮಿ, ನೆಲ, ಜಲವನ್ನೇ ಪೂಜೆ ಮಾಡಿಕೊಂಡು ಬಂದವರು. ತಮ್ಮ ಪರಿಸರದಲ್ಲಿನ ಬನಗಳಲ್ಲಿ ಚೌಡಮ್ಮ (Sigandur Chowdamma Devi Jatre), ಮಾಸ್ತ್ಯಮ್ಮ, ದುರ್ಗಮ್ಮ, ಗುತ್ಯಮ್ಮ ಹೀಗೆ ಶಕ್ತಿ ದೇವತೆಗಳನ್ನು ಪೂಜೆ ಮಾಡಿಕೊಂಡು ಬಂದಿರುವುದು ಐತಿಹ್ಯಗಳಿಂದ ತಿಳಿದುಬರುತ್ತದೆ.

ಪ್ರಸ್ತುತ ನಾಡಿನ ಎಲ್ಲ ತಳಸಮುದಾಯದ ಭಕ್ತಿ ಮತ್ತು ಶ್ರದ್ಧಾಕೇಂದ್ರವಾದ ಸಿಗಂದೂರು ಚೌಡೇಶ್ವರಿ ಅಮ್ಮನವರು ದೀವರ ಮನೆದೇವರಾಗಿ ಪೂಜಿಸಲ್ಪಡುತ್ತಿದ್ದ ದೇವತೆ. ಸೀಗೆ ಕಣಿವೆಯ ಶೇಷನಾಯ್ಕ ಅವರ ಕುಟುಂಬ ಪರಂಪರಾಗತವಾಗಿ ಪೂಜೆ ಮಾಡಿಕೊಂಡು ಬಂದಿದ್ದ ದೇವಿ, ಇಂದು ನಾಡಿನ ಎಲ್ಲ ಸಮುದಾಯಗಳ ಕಾಯುವ ತಾಯಿಯಾಗಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ನೆಲೆಸಿದ್ದಾಳೆ.

ದೇವಿಯ ಅಗಾಧ ಶಕ್ತಿಯಿಂದ ಇಂದು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಭಕ್ತಗಣವನ್ನು ಹೊಂದಿರುವುದು, ತಾಯಿಯ ಪೂಜಾಫಲದ ದ್ಯೋತಕವಾಗಿದೆ. ಎರಡು ದಶಕಗಳ ಅವಧಿಯಲ್ಲಿ ಇಡೀ ನಾಡಿನ ಆರಾಧ್ಯ ದೇವಿಯಾಗಿರುವ ಜಗನ್ಮಾತೆ ಸಿಗಂದೂರು ಚೌಡೇಶ್ವರಿಯು ಆದಿಶಕ್ತಿ ಸ್ವರೂಪಿ ಎಂಬ ನಂಬಿಕೆ ಭಕ್ತವಲಯದಲ್ಲಿದೆ. ಶೂದ್ರ ಪರಂಪರೆಯ ಜನ ದೇವಿಗೆ ತಮ್ಮ ಮನೆದೇವತೆಯೆಂದೇ ನಡೆದುಕೊಳ್ಳುತ್ತಾರೆ. ಇಂತಹ ಪುಣ್ಯ ಕ್ಷೇತ್ರವಾದ ಸಿಗಂದೂರು ತಾಯಿ ಭಕ್ತರಿಗೆ ಬೇಡಿದ ವರ ನೀಡಿ ಕಾಯುವ ಕುಲದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ.

ಇದನ್ನೂ ಓದಿ | Makar Sankranti 2023 | ಮಕರ ಸಂಕ್ರಾಂತಿಗಿರುವ ಪೌರಾಣಿಕ ಮಹತ್ವಗಳಿವು

ವನದೇವಿಯಾಗಿದ್ದ ಚೌಡಮ್ಮ ಜನದೇವಿಯಾದಳು
ವನವಾಸ ಕಾಲದಲ್ಲಿ ಸೀತೆಯ ಬಾಯಾರಿಕೆ ನೀಗಿಸಲು ಶ್ರೀರಾಮಚಂದ್ರ ಬಿಟ್ಟ ಬಾಣದಿಂದ ಶಕ್ತಿನದಿ ಶರಾವತಿ ಉಗಮವಾದಳು ಎಂಬ ಪ್ರತೀತಿಯಿದೆ. ಜೋಗದಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತಿದ್ದ ಶರಾವತಿಯಿಂದ ಜಲವಿದ್ಯುತ್ ಉತ್ಪಾದನೆಗಾಗಿ ೧೯೪೬ರಲ್ಲಿ ಹಿರೇಭಾಸ್ಕರ ಜಲಾಶಯವನ್ನು ನಿರ್ಮಿಸಲಾಯಿತು. ೩೧.೯೪ ಚದರ ಮೈಲು ವಿಸ್ತೀರ್ಣ ವ್ಯಾಪಿಸಿದ ಹಿನ್ನೀರು ಡ್ಯಾಂ ಮೇಲ್ಬಾಗದಲ್ಲಿ ೨೦ ಮೈಲುದ್ದ ನಿಂತಿತ್ತು. ಜಲಾಶಯದಲ್ಲಿ ೭೦ ಹಳ್ಳಿಗಳ ಸುಮಾರು ೯೨೩೩ ಎಕರೆ ಕೃಷಿ ಜಮೀನು, ಸುಮಾರು ೧೦೨೪೦ ಎಕರೆ ಅರಣ್ಯ ಗಂಗೆಯ ಉದರ ಸೇರಿತು.

ಹಿರೇಭಾಸ್ಕರ ಅಣೆಕಟ್ಟೆ ನಿರ್ಮಾಣದಿಂದ ಶೇಷನಾಯ್ಕರ ಕುಟುಂಬ ವಾಸವಿದ್ದ ಸೀಗೆಕಣಿವೆ ಊರು ಮುಳುಗಡೆಯಾಯಿತು. ಆಗಿನ ಕಾಲದಲ್ಲಿ ಶೇಷನಾಯ್ಕರದ್ದು ದೊಡ್ಡ ಕುಟುಂಬವಾಗಿದ್ದು, ಎಲ್ಲ ಕೃಷಿ ಭೂಮಿ ಮುಳುಗಡೆಯಾದ ಬಳಿಕ ಸಿಗಂದೂರು ಸಮೀಪದ ಸುಳಗಳಲೆಗೆ ಇಡೀ ಊರು ಸ್ಥಳಾಂತರವಾಯಿತು. ಊರು ಮುಳುಗಿದರೂ ಸೀಗೆಕಣಿವೆಯಲ್ಲಿನ ಮನೆದೇವತೆ ಚೌಡಮ್ಮನ ಬನ ಮಾತ್ರ ಮುಳುಗಿರಲಿಲ್ಲ. ಆದ್ದರಿಂದ ಶೇಷನಾಯ್ಕರ ಕುಟುಂಬವು ಸೀಗೆಕಣಿವೆಗೆ ಹೋಗಿ ವರ್ಷಕ್ಕೆರಡು ಪೂಜೆ ಕೊಡುತ್ತಿತ್ತು.

ಎರಡನೇ ಬಾರಿ ಮುಳುಗಡೆಯಾದ ದೇವಿವನ
ವಿದ್ಯುತ್ ಉತ್ಪಾದನೆಗೆ ಜಲಾಶಯ ನಿರ್ಮಾಣ ಒಂದೇ ಮೂಲವಾಗಿದ್ದ ಆ ಕಾಲದಲ್ಲಿ ಹಿರೇಭಾಸ್ಕರ ಡ್ಯಾಂನಿಂದ ಬೇಡಿಕೆ ಪೂರೈಸಲಾಗದ ಕಾರಣ ಸರ್ಕಾರ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಯಿತು. ಶರಾವತಿ ನದಿಗೆ ಮತ್ತೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟೆ ಕಟ್ಟಿ ಬೃಹತ್ ಜಲಾಶಯ ನಿರ್ಮಿಸಿತು. ೧೯೫೦ರಿಂದಲೇ ಆರಂಭವಾದ ಈ ಯೋಜನೆಯಿಂದ ೯೬೫ ಎಕರೆ ಫಲವತ್ತಾದ ಅಡಿಕೆ ತೋಟ, ೧೨,೫೦೦ ಎಕರೆ ಭತ್ತದಬೆಳೆ ಪ್ರದೇಶ, ೧೭೫೦ ಎಕರೆ ಕೃಷಿ ಜಮೀನು ಸೇರಿ ೧೯ ಸಾವಿರ ಎಕರೆ ಭೂಮಿ ಜಲಸಮಾಧಿಯಾಯಿತು. ನೂರಾರು ಎಕರೆ ಸಮೃದ್ಧ ಅರಣ್ಯ ಭೂಮಿ ಹಳ್ಳಿಗಳು, ಅಪರೂಪದ ಸಸ್ಯ ಸಂಪತ್ತು ಜಲದೊಡಲು ಸೇರಿದವು. ಶರಾವತಿ ಕಣಿವೆಯ ವಿಶಿಷ್ಟ ಜೀವನ ಸಂಸ್ಕೃತಿ, ಅನಾದಿಕಾಲದ ದೇವಾಲಯಗಳು, ಬಸದಿಗಳು, ಪೂಜಾಸ್ಥಾನಗಳು ವಿನಾಶ ಹೊಂದಿದ್ದವು. ಶತಮಾನಗಳಿಂದ ಗುಡ್ಡ ಕಣಿವೆಗಳ ನಡುವೆ ನೆಮ್ಮದಿಯಿಂದ ಬದುಕಿದ ಕುಟುಂಬಗಳು ನೆಲ-ನೆಲೆ ಕಳೆದುಕೊಂಡವು.

ಕರೂರು ಹೋಬಳಿಯೊಂದರಲ್ಲಿಯೇ ೫೦೦೦ ಕುಟುಂಬಗಳು ಸ್ಥಳಾಂತರಗೊಂಡವು, ಅದರಂತೆ ಶೇಷನಾಯ್ಕರ ಸಿಗಂದೂರು ಹಾಗೂ ಸುಳಗಳಲೆಯಲ್ಲಿನ ಸುಮಾರು ೭೦ ಎಕರೆ ಅಡಿಕೆ ತೋಟ, ಮನೆ ಎಲ್ಲ ಮುಳುಗಡೆಯಾಯಿತು. ಮುಳುಗಡೆ ಎಂದರೆ ಅದೊಂದು ಸಂಸ್ಕೃತಿಯ ಅವಸಾನವೇ ಸರಿ. ಸ್ಥಳಾಂತರಗೊಂಡ ಜಾಗದಲ್ಲಿ ಹೇಗೋ ಜೀವನ ಮಾಡಬಹುದು. ಆದರೆ, ಧಾರ್ಮಿಕ ಅಸ್ಮಿತೆಗೆ ಘಾಸಿಯಾದರೆ ಅದನ್ನು ತುಂಬುವುದು ಕಷ್ಟ ಸಾಧ್ಯ. ಶೇಷನಾಯ್ಕರ ಕುಟುಂಬಕ್ಕೆ ಸೊರಬ ತಾಲೂಕು ಹೊಳೆಕೊಪ್ಪದಲ್ಲಿ ಪರಿಹಾರ ರೂಪದಲ್ಲಿ ಜಮೀನು ನೀಡಲಾಯಿತು. ಆದರೆ, ಕುಟುಂಬಕ್ಕೆ ತಮ್ಮ ಮನೆದೇವತೆ ಚೌಡಿಬನ ಮುಳುಗಡೆಯಾಗಿದ್ದು ಮಾತ್ರ ದೊಡ್ಡ ಕೊರಗಾಗಿ ಉಳಿಯಿತು.

ಹೊಳೆಕೊಪ್ಪದಲ್ಲಿ ನೆಲೆಸಿದ್ದರೂ ಪ್ರತೀ ವರ್ಷ ಸಂಕ್ರಾಂತಿ ಮತ್ತು ಆರಿದ್ರಾ ಮಳೆ ಹಬ್ಬದಂದು ಶೇಷನಾಯ್ಕರ ಕುಟುಂಬ ದೇವರ ಬನಕ್ಕೆ ಬಂದು ಪೂಜೆ ಮಾಡುತ್ತಿತ್ತು. ಶೀಲವಂತ ಚೌಡಮ್ಮ ಎಂಬ ನಂಬಿಕೆಯಿಂದ ಶೇಷನಾಯ್ಕರ ಕುಟುಂಬದ ಯಾರೂ ಅದನ್ನು ಮುಟ್ಟಿ ಪೂಜೆ ಮಾಡುತ್ತಿರಲಿಲ್ಲ. ಸನಿಹದಲ್ಲಿದ್ದ ದುಗ್ಗಜ್ಜ ಎಂಬ ಬ್ರಾಹ್ಮಣರೊಬ್ಬರು ಪೂಜೆ ಮಾಡಿ ಹಣ್ಣುಕಾಯಿ ಒಡೆದುಕೊಡುತ್ತಿದ್ದರು. ಚೌಡಿಗೆ ರಕ್ತಾಹಾರದ ಹರಕೆಯಿದ್ದರೂ ದುಗ್ಗಜ್ಜನಿಂದ ಸಿಂಗಾರದ ಪ್ರಸಾದ ಪಡೆದು, ಸ್ವಲ್ಪದೂರದಲ್ಲಿದ್ದ ಭೂತನಕಟ್ಟೆಯಲ್ಲಿ ಪ್ರಾಣಿಬಲಿ ನೀಡುತ್ತಿದ್ದರು.

ಡಾ. ಎಸ್‌.ರಾಮಪ್ಪ

ಊರು ಬದಲಾದರೇನು ಚೌಡಮ್ಮನ ಸೆಳೆತ ಶೇಷನಾಯ್ಕರ ಕುಟುಂಬದವರನ್ನು ಬಿಡಲೇ ಇಲ್ಲ. ಶೇಷನಾಯ್ಕರ ನಿಧನಾನಂತರ ಅವರ ಪುತ್ರ ಡಾ. ಎಸ್‌.ರಾಮಪ್ಪ ಅವರು ಸಿಗಂದೂರಿಗೆ ಬಂದು ಹೊಳೆಯ ದಡದಲ್ಲಿ ಕೂತು ಮನೆದೇವರ ಬನ ನೀರು ಪಾಲಾಗಿದ್ದಕ್ಕೆ ಕೊರಗುತ್ತಿದ್ದರು. ಕುಟುಂಬದ ಸಂರಕ್ಷಣೆಯ ಬಗ್ಗೆ ಏನೂ ಮಾಡಲಾಗದ ಅಸಹಾಯಕತೆಯಿಂದ ವಿನೀತರಾಗುತ್ತಿದ್ದರು, ನೀನೇ ದಾರಿ ತೋರಿಸು ಎಂದು ಪ್ರಾರ್ಥಿಸುತ್ತಿದ್ದರು. ಹೊಳೆಕೊಪ್ಪದಿಂದ ಬಂದು ದೋಣಿಯ ಮೂಲಕ ಹಿನ್ನೀರು ದಾಟಿ ಪೂಜೆ ಸಲ್ಲಿಸುತ್ತಿದ್ದುದಲ್ಲದೆ, ಅಡಕೆ ಹಾಳೆ ಮೇಲೆ ಮಲಗಿ ರಾತ್ರಿ ಕಳೆದು ಊರಿಗೆ ಹೋಗುತ್ತಿದ್ದರು. ರಾಮಪ್ಪ ಅವರು ಸಿಗಂದೂರು ದೇವಸ್ಥಾನದ ಅಭಿವೃದ್ಧಿಗೆ ಅಹರ್ನಿಶಿ ದುಡಿದಿದ್ದರಿಂದ ಇಂದು ನಾಡಿನ ಆರಾಧ್ಯದೇವಿ ಹಾಗೂ ಭಕ್ತರ ಕಾಯುವ ಆದಿಶಕ್ತಿಯ ಧಾರ್ಮಿಕ ಶ್ರದ್ಧಾಕೇಂದ್ರ ರೂಪುಗೊಂಡಿದೆ.

ಹೊಲ ಮನೆ ಕಾಯುವ ದೇವಿ
ಸಿಗಂದೂರು ರಾಮಪ್ಪ ಅವರಿಗೆ ದೇವಿಯ ಮೇಲಿನ ಭಕ್ತಿ ಮತ್ತು ಅವರ ಪರಿಶ್ರಮದಿಂದ ದೇವಾಲಯ ಇಂದು ನಾಡಿನ ಧಾರ್ಮಿಕ ಶ್ರದ್ಧಾಕೇಂದ್ರ ಮಾತ್ರವಲ್ಲದೆ, ಪ್ರಖ್ಯಾತ ಪ್ರವಾಸಿ ಕೇಂದ್ರವೂ ಆಗಿದೆ. ರಾಜ್ಯದ ಭಕ್ತರು ತಮ್ಮ ಮನೆ, ಮಕ್ಕಳು ಹಾಗೂ ಹೊಲ ಗದ್ದೆಯನ್ನು ತಾಯಿಯೇ ಪೊರೆಯುತ್ತಾಳೆ ಎಂಬ ನಂಬಿಕೆ ಹೊಂದಿದ್ದಾರೆ. ರಾಜ್ಯದ ಎಲ್ಲ ಸಮುದಾಯಗಳ ಭಕ್ತರು ದೇಗುಲಕ್ಕೆ ಆಗಮಿಸುತ್ತಾರೆ. ತಮ್ಮ ತೋಟ ಮತ್ತು ಆಸ್ತಿಗಳಲ್ಲಿ ತಾಯಿಯ ಹರಕೆ ಇದೆ ಎಂಬ ಫಲಕ ಹಾಕಿದರೆ ನಾವು ಸುರಕ್ಷಿತ ಎಂಬ ದೈವಿಕ ಭಾವನೆ ಜನರಲ್ಲಿದೆ.

ಸಾಮಾಜಿಕ ಸೇವಾ ಕಾರ್ಯ
ಸಿಗಂದೂರು ದೇಗುಲ ಭಕ್ತರ ಶ್ರದ್ಧಾಕೇಂದ್ರ ಮಾತ್ರವಲ್ಲದೆ, ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಕರೂರು ಬಾರಂಗಿ ಹೋಬಳಿಯ ಬಡ ಮಕ್ಕಳಿಗೆ ವಿದ್ಯಾಭ್ಯಾಸ, ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಲಕ್ಷಾಂತರ ರೂ. ಖರ್ಚು ಮಾಡಿ ಸುಣ್ಣಬಣ್ಣ ಬಳಿಯುವ ಸೇವಾ ಆಂದೋಲನವನ್ನೇ ಮಾಡುತ್ತಿದೆ. ಪಾರದರ್ಶಕ ಆಡಳಿತಕ್ಕೆ ದೇವಾಲಯದ ಎಲ್ಲ ವ್ಯವಹಾರವನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ರಾಜ್ಯದ ಅನೇಕ ದೇವಾಲಯ ಹಾಗೂ ಸಮುದಾಯ ಭವನಗಳಿಗೆ ಉದಾರ ನೆರವು ನೀಡಿದ್ದು, ಭಕ್ತರಿಂದ ಬಂದ ಹಣವನ್ನು ಸದ್ವಿನಿಯೋಗ ಮಾಡಲಾಗುತ್ತಿದೆ. ದೇಗುಲದಿಂದ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇದ್ದು, ಐವತ್ತಕ್ಕೂ ಹೆಚ್ಚು ಕಲಾವಿದರು ಪೂರ್ಣಾವಧಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ದೇವಾಲಯದ ಆಡಳಿತ ಮಂಡಳಿ ಕಲಾಸೇವೆ ಮಾಡುತ್ತಿದೆ.

ಆರೋಗ್ಯ ಸೇವೆ
ಹಿನ್ನೀರು ದ್ವೀಪ ಪ್ರದೇಶದ ತುರ್ತು ಆರೋಗ್ಯ ಸೇವೆಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ದೇಗುಲದಿಂದ ನೀಡಲಾಗುತ್ತಿದೆ. ಒಂದು ಧಾರ್ಮಿಕ ಸಂಸ್ಥೆಯಾಗಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಎಲ್ಲ ಸಂದರ್ಭದಲ್ಲಿಯೂ ನಿರ್ವಹಿಸುತ್ತದೆ. ದೇವಾಲಯದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ಈ ನೆಲೆಯಲ್ಲಿ ಸೇವಾ ಕೈಂಕರ್ಯ ಮಾಡುತ್ತಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ
ಮೊದಲು ನಾಡಿನ ಜನರು ಸಿಗಂದೂರು ದೇಗುಲಕ್ಕೆ ಬರಲು ಆರಂಭದಲ್ಲಿ ಯಾವುದೇ ಸಂಪರ್ಕ ಇರಲಿಲ್ಲ. ಎರಡು ದಶಕಗಳಿಂದ ದೇವಿಯ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದಕ್ಕೆ ಪೂರಕವಾಗಿ ಧರ್ಮದರ್ಶಿ ಡಾ. ಎಸ್.ರಾಮಪ್ಪ ಅವರ ನೇತೃತ್ವದ ಆಡಳಿತ ಮಂಡಳಿ ಮೂಲಸೌಕರ್ಯ ಒದಗಿಸಿದೆ. ಯಾತ್ರಿ ನಿವಾಸ, ತಂಗುದಾಣ, ಸ್ನಾನಗೃಹ, ಶೌಚಗೃಹ ಸೇರಿ ಅನೇಕ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಪಾಕಶಾಲೆ ನಿರ್ಮಾಣ ಮಾಡಿದ್ದು, ಏಕ ಕಾಲಕ್ಕೆ ಐದು ಸಾವಿರ ಜನರಿಗೆ ಅಡುಗೆ ಮಾಡಬಹುದಾಗಿದೆ. ಪ್ರತಿದಿನ ಅನ್ನದಾಸೋಹ ಇರುತ್ತದೆ.

ಜ‌ನವರಿ 14, 15ರಂದು ಜಾತ್ರಾ ಮಹೋತ್ಸವ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಕ್ರಾಂತಿ ಅಂಗವಾಗಿ ಜನವರಿ 14 ಮತ್ತು 15ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಜ.14ರಂದು ಬೆಳಗಿನ ಜಾವ 2 ಗಂಟೆಗೆ ಆಲಯ ಶುದ್ಧಿ ನಡೆಯಲಿದೆ. ಬೆಳಗ್ಗೆ 7ಕ್ಕೆ ಚೌಡೇಶ್ವರಿ ದೇವಿಯ ಮೂಲ ಸ್ಥಳವಾದ ಸೀಗೆ ಕಣವೆಯಲ್ಲಿ ಪ್ರಥಮ ಪೂಜೆ ನೆರವೇರಲಿದೆ. ಬಳಿಕ ಧರ್ಮಾಧಿಕಾರಿ ನೇತೃತ್ವದಲ್ಲಿ ಪೂರ್ಣ ಕುಂಭ ಕಳಶದೊಂದಿಗೆ ಜ್ಯೋತಿ ರೂಪದ ದೇವಿಯನ್ನು ಈಗಿನ ಸಿಗಂದೂರು ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತರಲಾಗುತ್ತದೆ.

ಜ.14 ರಂದು ದೇವಿಗೆ ಹೂವಿನ ಅಲಂಕಾರ, ಪೂಜೆ, ಮಹಾಭಿಷೇಕ, ಆಭರಣ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 5.30ಕ್ಕೆ ಗಂಗಾರತಿ, ಸಿಡಿಮದ್ದು ಪ್ರದರ್ಶನವಿರಲಿದೆ. ರಾತ್ರಿ 10.30ರಿಂದ ಯಕ್ಷಗಾನ ಪ್ರದರ್ಶನವಿರಲಿದೆ.

ಜ.15ರಂದು ಮುಂಜಾನೆ 4 ಗಂಟೆಯಿಂದಲೇ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8ಕ್ಕೆ ಗಾನ ವೈಭವ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ | Makar Sankranti 2023 | ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ: ಹಬ್ಬ ಒಂದೇ ನಾಮ ಹಲವು!

Exit mobile version