ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಕೆಲ ಹಿರಿಯ ಅಧಿಕಾರಿಗಳು ಕಳ್ಳಾಟಕ್ಕೆ ಇಳಿದಿದ್ದಾರೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ (MD) ಸಹಿಯನ್ನೇ ನಕಲು (Signature Forgery) ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಿಎಂಟಿಸಿ ಎಂಡಿಗೆ ವರ್ಷದವರೆಗೂ ಹಿರಿಯ ಅಧಿಕಾರಿಗಳು ಕಡತವನ್ನೇ ಕಳುಹಿಸಿಲ್ಲ. ಬದಲಾಗಿ ಎಂಡಿ ಸಿಗ್ನೇಚರ್ ಅನ್ನು ಫೋರ್ಜರಿ ಮಾಡಿ, ಅವರೇ ವಂಚನೆ ಎಸಗಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಭದ್ರತಾ ಜಾಗೃತ ಇಲಾಖೆಯಿಂದ ದೂರು ದಾಖಲಾಗಿದೆ.
ಪ್ರಸ್ತುತ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಅಧಿಕಾರಿಯಾಗಿರುವ ಶ್ರಿರಾಮ್ ಮುಲ್ಕಾವನ್ ಎಂಬುವವರು ಟೆಂಡರ್ ನವೀಕರಣದ ಕಡತವನ್ನು ನಿರ್ದೇಶಕರಿಗೆ ಕಳುಹಿಸದೆ ಫೋರ್ಜರಿ ಮಾಡಿರುವ ಆರೋಪ ಕೇಳಿ ಬಂದಿದೆ. ಶ್ರೀರಾಮ್ ಮುಲ್ಕಾವನ್ ಫೋರ್ಜರಿ ಮಾಡಿ ಇಲಾಖೆಗೆ ದೋಖಾ ಮಾಡಿದ್ದು, ಹಾಲಿ ಎಂಡಿ ಸೇರಿದಂತೆ ಹಿಂದಿನ ಎಂಡಿಗಳ ಸಹಿಯೂ ನಕಲಿ ಮಾಡಿರುವ ಆಪಾದನೆ ಇದೆ. ಹಿಂದಿನ ಎಂಡಿಗಳಾದ ಶಿಖಾ, ಅನ್ಬುಕುಮಾರ್, ರಾಧಿಕಾ, ಸೂರ್ಯಸೇನ ಅವರ ಸಹಿಗಳನ್ನೂ ನಕಲು ಮಾಡಲಾಗಿದೆ.
ಅಧಿಕಾರಿಗಳು ಶಾಮೀಲು ಶಂಕೆ
ಶ್ರೀರಾಮ್ ಜತೆ ಅನೇಕ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ, ಎಫ್ಐಆರ್‌ನಲ್ಲಿ ಶ್ರೀರಾಮ್ ಹೊರತುಪಡಿಸಿ ಉಳಿದ ಅಧಿಕಾರಿಗಳ ಹೆಸರನ್ನು ಕೈಬಿಡಲಾಗಿದೆ.
ಇದನ್ನೂ ಓದಿ:Ayush Doctors Demands: ಆಯುಷ್ ವೈದ್ಯರ ಕೆಲಸಕ್ಕೆ ಸಿಗದ ಸಮಾನ ವೇತನ; ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಪಟ್ಟು
ಸಹಿ ಫೋರ್ಜರಿ ಮಾಡಿ ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆದಿರುವ ಅನುಮಾನ ಇದೆ. ಆಡಿಟ್ ಪರಿಶೀಲನೆ ವೇಳೆ ಶ್ರೀರಾಮ್ ಅಕ್ರಮ ಬಯಲಾಗಿದ್ದು, ಶ್ರೀರಾಮ್ ವಿರುದ್ಧ ಎಂಡಿ ಸತ್ಯವತಿ ಕೆಂಡಾಮಂಡಲವಾಗಿದ್ದಾರೆ.