ಶಿವಮೊಗ್ಗ: ಸೊರಬದಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಅನಗತ್ಯ ವರ್ಗಾವಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ (ಜ.೨೪) ಮೌನ ಪ್ರತಿಭಟನೆ (Silent Protest) ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೌಕರರು, ಮುಂಬರುವ ಆಯವ್ಯಯ ಅಧಿವೇಶನ, ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ವರ್ಗಾವಣೆ ಮಾಡದಂತೆ ಸಿಎಂ ಆದೇಶ ಹೊರಡಿಸಿದ್ದಾರೆ. ಆದಾಗ್ಯೂ, ಸೊರಬದಲ್ಲಿ ಕಂದಾಯ ಇಲಾಖೆಯ ನೌಕರರ ವರ್ಗಾವಣೆಗೆ ಪ್ರಾದೇಶಿಕ ಆಯುಕ್ತರು ನೀಡಿರುವ ಸೂಚನೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ | Sagara News: ಎಸಿ ಪಲ್ಲವಿ ಸಾತೇನಹಳ್ಳಿ ರಾಜ್ಯ ಮಟ್ಟದ ಬೆಸ್ಟ್ ಎಲೆಕ್ಟೋರಲ್ ರಿಜಿಸ್ಟ್ರೇಶನ್ ಆಫೀಸರ್
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಂದಾಯ ನೌಕರರು, ವರ್ಗಾವಣೆ ಪ್ರಕ್ರಿಯೆ ಹೀಗೆಯೇ ಮುಂದುವರಿದರೆ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು. ಸೊರಬ ತಾಲೂಕಿನ ಕಂದಾಯ ಇಲಾಖೆಯ ಇತರೆ ನೌಕರರ ವರ್ಗಾವಣೆ, ನಿಯೋಜನೆಗೆ ಸರಣಿ ಮಾದರಿಯಲ್ಲಿ ಆದೇಶ ಹೊರಡಿಸುತ್ತಿರುವುದರಿಂದ ಅಧಿಕಾರಿ ಮತ್ತು ನೌಕರರ ಆತ್ಮಸ್ಥೈರ್ಯವನ್ನು ಕುಂದಿಸುತ್ತಿರುವುದಲ್ಲದೆ ಆಡಳಿತಾತ್ಮಕವಾಗಿ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಸಮರ್ಪಕವಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿರುವುದಿಲ್ಲ. ಇದಕ್ಕೆ ಸೊರಬ ತಹಸೀಲ್ದಾರರ ವರ್ಗಾವಣೆ ಸಹ ಸಾಕ್ಷಿಯಾಗಿರುತ್ತದೆ. ಈ ರೀತಿಯ ಅಕಾಲಿಕ ಜನಸ್ನೇಹಿ ವರ್ಗಾವಣೆ, ನಿಯೋಜನೆಯಿಂದ ಅಧಿಕಾರಿ, ನೌಕರರ ಕುಟುಂಬದ ಸದಸ್ಯರ ಮೇಲೆ ಹಾಗೂ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿರುವುದರಿಂದ ಸಮರ್ಪಕವಾದ ಸೇವೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇಲಾಖೆಯ ಮೇಲೆ ಹಾಗೂ ಅಧಿಕಾರಿ, ನೌಕರರ ಮೇಲೆ ಸಾರ್ವಜನಿಕರ ಅಭಿಪ್ರಾಯ ಅವಹೇಳನಕಾರಿಯಾಗುತ್ತಿದೆ.
ಅಧಿಕಾರಿ, ನೌಕರರಿಗೆ ಯಾವುದೇ ರೀತಿಯ ಕೇಳದೆ ಮನಬಂದಂತೆ ವರ್ಗಾವಣೆ, ನಿಯೋಜನೆ ಮಾಡುತ್ತಿರುವುದು ನೌಕರರ ಸಮೂಹಕ್ಕೆ ಕಂಟಕಪ್ರಾಯವಾಗಿರುತ್ತದೆ. ಈ ರೀತಿಯ ಸರ್ಕಾರದ ಧೋರಣೆಯಿಂದ ಅಧಿಕಾರಿ, ನೌಕರರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ನಿಯೋಜನೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಕೆ., ಕಾರ್ಯದರ್ಶಿ ಉಮೇಶ್ ಕುಮಾರ್ ಬಿ., ಖಜಾಂಚಿ ಮಹಾರುದ್ರಪ್ಪ ಎ.ಬಿ. ಮತ್ತಿತರರು ಇದ್ದರು.
ಇದನ್ನೂ ಓದಿ | Araga Jnanendra : ಸ್ಯಾಂಟ್ರೊ ರವಿಯನ್ನು ಹುಟ್ಟುಹಾಕಿದ್ದು ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನವರು: ಆರಗ ಜ್ಞಾನೇಂದ್ರ