Site icon Vistara News

30 ವರ್ಷದಿಂದ ಮುಖ್ಯಮಂತ್ರಿ ಕೈಯಲ್ಲೂ ಆಗಲಿಲ್ಲ; ನಿರ್ಮಾಣವಾಯಿತು ಜನತಾ ಸೇತುವೆ

ಜನತಾ ಸೇತುವೆ

ರಾಜೇಶ್‌ ಪುತ್ತೂರು, ಮಂಗಳೂರು
ಪ್ರತಿ ಮಳೆಗಾಲ ಬಂತೆಂದರೆ ಸಾಕು ಈ ಗ್ರಾಮದ ಜನರು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆ “ನಮಗೊಂದು ಸೇತುವೆ” ಎಂದು ಮನವಿ ಪತ್ರ, ಅರ್ಜಿಗಳನ್ನು ಹಿಡಿದು ನಿಂತುಬಿಟ್ಟಿರುತ್ತಿದ್ದರು. ಇದು ನಿರಂತರ ೩೦ ವರ್ಷಗಳು ನಡೆದರೂ ಮನವಿ ಮನವಿಯಾಗಿಯೇ ಉಳಿಯಿತು. ಬೇಸತ್ತು ಚುನಾವಣೆಗಳನ್ನು ಬಹಿಷ್ಕರಿಸಿದರು. ಆದರೆ, ಮನಕರಗಲಿಲ್ಲ, ಸೇತುವೆ ಏಳಲಿಲ್ಲ. ಕೊನೆಗೆ ನಿರ್ಮಾಣವಾಗಿದ್ದೇ ಜನತಾ ಸೇತುವೆ.

ಹೌದು. ಇದೊಂದು ಧನಾತ್ಮಕ ಚಿಂತನೆಯನ್ನು ಹುಟ್ಟುಹಾಕುವ ಯಶೋಗಾಥೆ. ಮಳೆಗಾಲ ಬಂತೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಜನರು ಎದುರಿಸುವ ದೊಡ್ಡ ಸಮಸ್ಯೆ ತುಂಬಿ ಹರಿಯುವ ಹಳ್ಳ ಮತ್ತು ನದಿಗಳು. ಮಳೆಗಾಲದ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತವಾಗಲಿ , ಸರ್ಕಾರವಾಗಲಿ ಅಷ್ಟೊಂದು ಮಹತ್ವ ನೀಡುತ್ತಿಲ್ಲ. ಕನಿಷ್ಠ ಇಂತಹ ಪ್ರದೇಶದ ಜನರು ಜೀವನ ಹೇಗೆ ಸಾಗಿಸುತ್ತಾರೆ ಎನ್ನುವ ಬಗ್ಗೆಯೂ ಚಿಂತನೆ ಮಾಡುವುದಿಲ್ಲ. ಜನಪ್ರತಿನಿಧಿಗಳಿಗೆ ಎಡತಾಕಿ ಸುಸ್ತಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಮೊಗ್ರ ಎನ್ನುವ ಪುಟ್ಟ ಗ್ರಾಮದ ಜನರು ತಾವೇ ಸೇತುವೆ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಮೂಲಕ ಜನರಿಂದಲೇ ಜನತಾ ಸೇತುವೆಯೊಂದು ನಿರ್ಮಾಣವಾದಂತಾಗಿದೆ.

ಹಲವು ಮನವಿ ನೀಡಿದರೂ ಸ್ಪಂದಿಸದ ಶಾಸಕರು
ಮೊಗ್ರ ಗ್ರಾಮದ ಜನಸಂಖ್ಯೆ ಕೇವಲ 1000 ಮಾತ್ರ. ಗ್ರಾಮದ ದೇವಸ್ಥಾನ, ಶಾಲೆಗೆ ಹೋಗಬೇಕು ಎಂದರೆ ಗ್ರಾಮವನ್ನು ಬೇರ್ಪಡಿಸುವ ನದಿಯೊಂದು ಅಡ್ಡಲಾಗಿತ್ತು. ಶಾಲೆಗೆ ಹೋಗುವ ಮಕ್ಕಳಿಗೆ ಮಳೆಗಾಲದಲ್ಲಿ ತೆರಳುವುದು ಒಂದು ಸಾಹಸದ ಕೆಲಸವಾಗಿತ್ತು. ಹಲವು ವರ್ಷಗಳಿಂದ ಅಡಕೆ ಮರವನ್ನು ಕಡಿದು ಕಟ್ಟುಹಾಕಿ ನಿರ್ಮಾಣ ಮಾಡಿದ್ದ ಕಾಲು ಸೇತುವೆಯೇ ಮಕ್ಕಳು ಹಾಗೂ ಗ್ರಾಮದ ಜನರಿಗೆ ನದಿ ದಾಟಲು ಆಸರೆಯಾಗಿತ್ತು. ಆದರೆ, ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಪ್ರಾಣಕ್ಕೆ ಅಪಾಯ ಎಂಬಂತೆ ಆಗಿತ್ತು. ಈ ಕಾರಣದಿಂದಾಗಿ ಹಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದರು. ಇದರಿಂದಾಗಿ ಗ್ರಾಮದಲ್ಲಿದ್ದ ಏಕೈಕ ಶಾಲೆಯೂ ಮುಚ್ಚುವ ಹಂತಕ್ಕೆ ತಲುಪಿತ್ತು. ಹೀಗಾಗಿ ಗ್ರಾಮದ ಸಮಸ್ಯೆಗೆ ಸ್ಪಂದಿಸಿ ಇಲ್ಲೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಗ್ರಾಮದ ಜನರು ಗ್ರಾಮ ಪಂಚಾಯತ್‌ನಿಂದ ಹಿಡಿದು ಮುಖ್ಯಮಂತ್ರಿವರೆಗೂ ಹಲವು ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಆದರೆ ಕಳೆದ ಮೂವತ್ತು ವರ್ಷಗಳಿಂದ ಇವರು ಸಲ್ಲಿಸುತ್ತಾ ಬಂದಿರುವ ಮನವಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿರಿಲಿಲ್ಲ.

ಇದನ್ನೂ ಓದಿ | International Tiger Day | 10 ವರ್ಷದಲ್ಲಿ ಹೆಚ್ಚಿದ 100 ಹುಲಿಗಳು; ಚಾಮರಾಜನಗರವೀಗ ಹುಲಿಗಳ ಬೀಡು!

ಪ್ರಧಾನ ಮಂತ್ರಿಗೆ ಪತ್ರ ಬರೆದು ಗ್ರಾಮದ ಸಮಸ್ಯೆಯ ಗಮನ ಸೆಳೆದ ಗ್ರಾಮದ ಜನ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದ ಸಮೀಪದಲ್ಲೇ ಇರುವ ಗ್ರಾಮದ ಜನರು ಸರಿಯಾದ ರಸ್ತೆ ಇಲ್ಲದೆ ಇದ್ದರೂ ಸಹಿಸಿಕೊಂಡಿದ್ದರು. ಆದರೆ, ಗ್ರಾಮದ ಮಕ್ಕಳ ಶಿಕ್ಷಣಕ್ಕೆ ನದಿಯೊಂದು ಅಡ್ಡಿಯಾಗಿ ಶಾಲೆ ಮುಚ್ಚುವ ಹಂತ ತಲುಪಿದಾಗ ಪ್ರಧಾನ ಮಂತ್ರಿಗೆ ಸಹ ಪತ್ರ ಬರೆದಿದ್ದಾರೆ. ತಮ್ಮ ಗ್ರಾಮಕ್ಕೆ ಸೇತುವೆಯ ಅಗತ್ಯ ಇದ್ದು, ಇಲ್ಲಿರುವ ಸಮಸ್ಯೆಯನ್ನು ಎಳೆಎಳೆಯಾಗಿ ವಿವರಿಸಿದ್ದರು.

ಪತ್ರ ತಲುಪಿದ ಬಳಿಕ ಪ್ರಧಾನ ಮಂತ್ರಿ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಈ ಗ್ರಾಮದ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಗ್ರಾಮದ ಸಮಸ್ಯೆ ಹಾಗೂ ಅಲ್ಲಿನ ಸೇತುವೆಯ ಅಗತ್ಯತೆಯ ಬಗ್ಗೆ ವರದಿ ಕೇಳಲಾಗಿತ್ತು. ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಗಂಭೀರ ಸಮಸ್ಯೆ ಇರುವುದು ನಿಜವಾಗಿದ್ದು, ಇಲ್ಲಿ ಸೇತುವೆ ನಿರ್ಮಾಣ ಮಾಡಲು ಸುಮಾರು 1.5 ಕೋಟಿ ರೂ. ಅಗತ್ಯ ಇದೆ ಎಂದು ಉತ್ತರ ನೀಡಿದ್ದರು. ಆದರೆ, ಸೇತುವೆಗೆ ಕಳುಹಿಸಿದ್ದ ಪ್ರಸ್ತಾವನೆಯು ಪ್ರಸ್ತಾವನೆಯಾಗೇ ಉಳಿಯಿತೇ ಹೊರತು ಇಲ್ಲಿಗೆ ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ಕ್ರಮ ಜರುಗಲಿಲ್ಲ.

ಹೋರಾಟಗಾರರೇ ಚುನಾವಣೆಯಲ್ಲಿ ನಿಂತರು

ಗ್ರಾಮದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಚುನಾವಣೆ ಬಹಿಷ್ಕರಿಸುವ ಬದಲು ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗ್ರಾಮದ ಅಭಿವೃದ್ಧಿಯ ಕಾಳಜಿ ಹಾಗೂ ಸೇತುವೆ ನಿರ್ಮಾಣದ ಹೋರಾಟದಲ್ಲಿದ್ದ ನಾಲ್ವರನ್ನು ಅಭ್ಯರ್ಥಿಗಳನ್ನಾಗಿ ಮಾಡಿಸಿ ಗೆಲ್ಲಿಸುವ ಮೂಲಕ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನೇ ಸೋಲಿಸಿದ್ದರು. ಹೀಗೆ ಪಂಚಾಯತ್‌ ಸದಸ್ಯರಾಗಿ ಆಯ್ಕೆಯಾದವರು ಸಣ್ಣದೊಂದು ಕಿರುಸೇತುವೆ ನಿರ್ಮಾಣಕ್ಕೆ ಕೈ ಹಾಕಿ ಯಶಸ್ವಿಯಾದರು. ಅಂದರೆ, ಅವರು ಪಂಚಾಯತ್‌ನಲ್ಲಿ ಸಿಗುವ ಸಣ್ಣ ಅನುದಾನ ಬಳಸಿ, ಬಳಿಕ ಊರು, ಪರವೂರಿನ ದಾನಿಗಳ ಸಹಕಾರ ಪಡೆದು 1.25 ಲಕ್ಷ ರೂಪಾಯಿ ವೆಚ್ಚದಲ್ಲಿ ಇಲ್ಲೊಂದು ಸಣ್ಣ ಸೇತುವೆ ನಿರ್ಮಾಣ ಮಾಡಿದ್ದಾರೆ. ಸುಳ್ಯದ ತೂಗು ಸೇತುವೆಗಳ ನಿರ್ಮಾತೃ, ಪದ್ಮಭೂಷಣ ಗಿರೀಶ್‌ ಭಾರದ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್‌‌ ಅವರ ಮಾರ್ಗದರ್ಶನದಲ್ಲಿ ದ್ವಿಚಕ್ರ ವಾಹನ ಓಡಾಡುವ ಸೇತುವೆಯನ್ನು ಗ್ರಾಮದ ಜನರೇ ಶ್ರಮಾದಾನದ ಮೂಲಕ ನಿರ್ಮಿಸಿದ್ದಾರೆ.

ಇದನ್ನೂ ಓದಿ | ಮಾದರಿ ಕುಟುಂಬ | ಏಳೇಳು ಜನ್ಮಕ್ಕೂ ಒಂದೇ ಅಂದರು 8 ಸಹೋದರರು; ಒಂದೇ ವಿನ್ಯಾಸದ 7 ಮನೆ ಕಟ್ಟಿದರು!

ಸೇತುವೆ ಬೇಡಿಕೆ ಕೈ ಬಿಟ್ಟಿಲ್ಲ

ʻʻನಾವು ಗ್ರಾಮದ ಸಮಸ್ಯೆಗೆ ಸ್ಪಂದಿಸಿ ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ನಮಗೆ ಅಗತ್ಯವಾಗಿ ಬೇಕಾಗಿರುವುದು ಇಲ್ಲಿಗೆ ಒಂದು ಸೇತುವೆ. ಗ್ರಾಮದಲ್ಲಿ ಒಂದು ಸಾವಿರ ಜನರಿಗೆ ಇಲ್ಲಿನ ನದಿಯೇ ದೊಡ್ಡ ಸಮಸ್ಯೆ. ಶಾಲೆಗೆ ಮಕ್ಕಳು ಬಾರದೆ ಶಾಲೆ ಬಂದ್‌ ಮಾಡುವ ಹಂತಕ್ಕೆ ತಲುಪಿತ್ತು. ಹೀಗಾಗಿ ನಮ್ಮವರನ್ನೇ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದೆವು. ಅವರು ಗ್ರಾಪಂ ಅನುದಾನ ಹಾಗೂ ನಾವೆಲ್ಲ ಸೇರಿ ಅಕ್ಕಪಕ್ಕದವರಿಂದ ಸಂಗ್ರಹಿಸಿದ ದೇಣಿಗೆಯಿಂದ ಬೈಕ್‌ ಓಡಾಡಲು ಅನುಕೂಲವಾಗುವಂತಹ ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ, ನಮ್ಮ ಸೇತುವೆಯ ಬೇಡಿಕೆಯನ್ನು ಕೈ ಬಿಟ್ಟಿಲ್ಲ. ನಮಗೆ ದೊಡ್ಡ ವಾಹನಗಳು ಸಂಚರಿಸುವಂತೆ ರಾಜ್ಯ ಸರ್ಕಾರ ಸೇತುವೆಯನ್ನು ಮಂಜೂರು ಮಾಡಬೇಕು ಎಂದು ಸೇತುವೆ ಹೋರಾಟದ ನಾಯಕತ್ವ ವಹಿಸಿರುವ ಮಹೇಶ್‌ ಪುಚ್ಚೆಪಾಡಿ ತಿಳಿಸಿದರು.

ಇನ್ನೂ ಮುಗಿಯದ ಸುಸಜ್ಜಿತ ಸೇತುವೆಯ ಬೇಡಿಕೆ
ಶಾಲಾ ಮಕ್ಕಳಿಗೆ ಹಾಗೂ ಗ್ರಾಮದ ಜನರಿಗೆ ದ್ವಿಚಕ್ರದಲ್ಲಿ ಓಡಾಡಬಹುದಾದ ಸೇತುವೆ ನಿರ್ಮಾಣ ಮಾಡಿದರೂ ಸಮಸ್ಯೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಮಳೆಗಾಲದಲ್ಲಿ ವಯಸ್ಸಾದವರಿಗೆ ಅನಾರೋಗ್ಯ ಕಾಡಿದರೆ ಅವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಪರದಾಡಬೇಕಿದೆ. ಮಳೆಯಿಂದ ನದಿಯಲ್ಲಿ ನೀರು ಹೆಚ್ಚಾಗಿ ಹರಿದರೆ ಜೀಪು ಕಾರುಗಳು ಮೂಲಕ ನದಿ ದಾಟುವುದು ಅಷ್ಟು ಸುಲಭದ ಕೆಲಸವಲ್ಲ. ನೀರು ಕಡಿಮೆ ಇರುವ ಸಮಯದಲ್ಲಿ ಜೀಪುಗಳ ಮೂಲಕ ನದಿ ದಾಟಬಹುದಾದರೂ ಅದೊಂದು ದೊಡ್ಡ ಅಪಾಯಕಾರಿ ಸಾಹಸ ಎಂಬಂತಾಗಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸವನ್ನು ಸರ್ಕಾರವೇ ಮಾಡಬೇಕಾಗಿದ್ದು, ಸರ್ಕಾರಕ್ಕೆ ಸಲ್ಲಿಸಿರುವ 1.5 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಆದರೆ ಮಾತ್ರ ಇಲ್ಲಿನ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಸ್ವಾತಂತ್ರ್ಯ ಸಂಭ್ರಮದ 75 ವರ್ಷದ ಹೊಸ್ತಿಲಲ್ಲಿ ನಾವಿದ್ದರೂ ಗ್ರಾಮೀಣ ಪ್ರದೇಶದ ಅದೆಷ್ಟೋ ಜನರು ಇನ್ನೂ ಸಂಕಷ್ಟದಲ್ಲೇ ಇದ್ದಾರೆ ಎನ್ನುವುದಕ್ಕೆ ಮೊಗ್ರ ಗ್ರಾಮ ಒಂದು ಉದಾಹರಣೆ. ಮೊದಲೇ ಹಿಂದುಳಿದ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಅನೇಕ ಗ್ರಾಮಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದೆ. ಇನ್ನಾದರೂ ಸರ್ಕಾರ ಸ್ಪಂದಿಸಲಿ ಎನ್ನುವ ಕೂಗು ಕೇಳಿಬರುತ್ತಿದೆ.

ಇದನ್ನೂ ಓದಿ | Viral Video: ಕೊಳಕು ನೀರು ಮೆಟ್ಟಲು ಒಪ್ಪದ ಶಿಕ್ಷಕಿಗೆ ಸೇತುವೆ ನಿರ್ಮಿಸಿಕೊಟ್ಟ ಮಕ್ಕಳು !


Exit mobile version