Site icon Vistara News

Single Window Scheme: ಚಾರಣಕ್ಕೆ ಏಕ ಗವಾಕ್ಷಿ ಯೋಜನೆ; ಕಡಲಾಮೆ ಮೊಟ್ಟೆ ಪತ್ತೆ ಮಾಡಿದವರಿಗೆ ಬಹುಮಾನ

Prizes distributed to those who found sea turtle eggs

ಮಂಗಳೂರು: ಕರಾವಳಿ ನಿಯಂತ್ರಣ ವಲಯ ಉಲ್ಲಂಘನೆ ಕುರಿತಂತೆ ವರದಿ ಸಿದ್ಧಪಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ (Ishwar Khandre) ಮಂಗಳೂರು ವಲಯದ ಅರಣ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಏಕ ಗವಾಕ್ಷಿ ಯೋಜನೆಯಡಿ (Single Window Scheme) ಎಲ್ಲ ಚಾರಣ ಪಥಗಳನ್ನೂ ಅಭಿವೃದ್ಧಿಪಡಿಸುವುದು, ಚಾರಣಿಗರಿಗೆ (Single Window Scheme for trekking) ಅಗತ್ಯ ಮೂಲಸೌಕರ್ಯ ಮತ್ತು ಸುರಕ್ಷತೆ ಒದಗಿಸಬೇಕು ಎಂದು ತಿಳಿಸಿದ್ದಾರೆ.

ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಮಂಗಳವಾರ (ಫೆ. 6) ಪರಿಸರ ಮತ್ತು ಅರಣ್ಯ ಇಲಾಖೆಯ ಪರಾಮರ್ಶೆ ಸಭೆ ನಡೆಸಿದ ಈಶ್ವರ ಖಂಡ್ರೆ, ಕರ್ನಾಟಕದ ಕರಾವಳಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಇವುಗಳಲ್ಲಿ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದ್ದಾರೆ.

ಮಂಗಳೂರು ವೃತ್ತದಲ್ಲಿ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವ ಈಶ್ವರ ಖಂಡ್ರೆ, ಒಂದೇ ಸರ್ವೆ ನಂಬರ್‌ನಲ್ಲಿ ಸಾವಿರಾರು ಎಕರೆ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಪ್ರದೇಶಗಳಲ್ಲಿ ತ್ವರಿತವಾಗಿ ಜಂಟಿ ಸರ್ವೆ ನಡೆಸಿ ಸಮಸ್ಯೆ ಪರಿಹರಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ಮಂಗಳೂರು ವೃತ್ತದಲ್ಲಿ ಕಡಲ್ಕೊರೆತ ತಡೆಯಲು ಕಾಂಡ್ಲಾ ವನ (ಮ್ಯಾಂಗ್ರೋ) ಬೆಳೆಸುವಂತೆ ಮತ್ತು ಕಡಲ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆ ಆಗದಂತೆ ಕ್ರಮ ವಹಿಸಲು ಈಶ್ವರ ಖಂಡ್ರೆ ಸೂಚನೆ ನೀಡಿದರು.‌

ಚಾರಣಕ್ಕೆ ಏಕ ಗವಾಕ್ಷಿ ಯೋಜನೆ

ರಾಜ್ಯದಲ್ಲಿ ಚಾರಣಕ್ಕೆ ವಿಫುಲ ಅವಕಾಶವಿದ್ದು, ಪ್ರಕೃತಿ ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ಆನ್‌ಲೈನ್ ಮೂಲಕ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿ, ಏಕ ಗವಾಕ್ಷಿ ಯೋಜನೆಯಡಿ ಎಲ್ಲ ಚಾರಣ ಪಥಗಳನ್ನೂ ಅಭಿವೃದ್ಧಿಪಡಿಸುವಂತೆ ಮತ್ತು ಚಾರಣಿಗರಿಗೆ ಅಗತ್ಯ ಮೂಲಸೌಕರ್ಯ ಮತ್ತು ಸುರಕ್ಷತೆ ಒದಗಿಸುವಂತೆ ಸೂಚಿಸಿದರು.

ಇದೇ ವೇಳೆ ಚಾರಣಕ್ಕೆ ಬರುವವರಿಂದ ಪರಿಸರಕ್ಕಾಗಲೀ, ಹುಲ್ಲುಗಾವಲಿನ ಗಿರಿಶಿಖರಗಳಿಗಾಗಲೀ ಅಥವಾ ಸಸ್ಯ ಪ್ರಭೇದ ಹಾಗೂ ಪ್ರಾಣಿ ಸಂಕುಲಕ್ಕೆ ತೊಂದರೆ ಆಗದ ರೀತಿಯಲ್ಲಿ ನಿಯಮ ರೂಪಿಸುವಂತೆ ಉನ್ನತಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಕಡಲಾಮೆ ಮೊಟ್ಟೆ ಪತ್ತೆಹಚ್ಚಿದ ಮೀನುಗಾರರಿಗೆ ಬಹುಮಾನ

ತಣ್ಣೀರು ಬಾವಿಯ ಕಡಲ ತೀರದಲ್ಲಿ ಅಪರೂಪದ ಆಲಿವ್ ರೆಡ್ಲಿ ಕಡಲಾಮೆ ಮೊಟ್ಟೆ ಇಟ್ಟಿರುವುದನ್ನು ಪತ್ತೆ ಮಾಡಿ ಸಂರಕ್ಷಣೆಗೆ ನೆರವಾದ ಸಸಿ ಹಿತ್ಲು ಗ್ರಾಮದ ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೋಟ್ಯಾನ್ ಅವರಿಗೆ ಸಚಿವರು 5 ಸಾವಿರ ರೂಪಾಯಿಗಳ ಬಹುಮಾನ ಮತ್ತು ಪ್ರಶಂಸಾ ಪತ್ರ ಪ್ರದಾನ ಮಾಡಿದರು.
ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಬೈಕಂಪಾಡಿಯ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ಮತ್ತು ರಾಸಾಯನಿಕ ತ್ಯಾಜ್ಯ ಸಂಸ್ಕರಣೆ ಆಗದೆ ಫಲ್ಗುಣಿ ನದಿಯನ್ನು ಸೇರುತ್ತಿದೆ ಎಂಬ ಬಗ್ಗೆ ದೂರುಗಳಿದ್ದು, ಈ ಬಗ್ಗೆ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಿ ನಿಯಮ ಪಾಲಿಸದ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮತ್ಸ್ಯ ಸಂಸ್ಕರಣಾ ಘಟಕಗಳಿಂದ ದುರ್ನಾತ ಬರುತ್ತಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂಬ ದೂರುಗಳ ಬಗ್ಗೆಯೂ ಪರಾಮರ್ಶೆ ನಡೆಸಿದ ಸಚಿವರು, ಈ ಘಟಕಗಳಿಗೆ ಭೇಟಿ ನೀಡಿ, ಎಲ್ಲ ಘಟಕಗಳೂ ಪ್ರಮಾಣಿತ ಮಾನದಂಡಗಳನ್ನು ಪಾಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.

ಅರಣ್ಯನಾಶವಾಗಿದ್ದರೆ ನಿರ್ದಾಕ್ಷಿಣ್ಯವಾಗಿ

ಅರಣ್ಯ ಒತ್ತುವರಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವರು ಶುಂಠಿ ಬೆಳೆಯುವ ಹೆಸರಲ್ಲಿ 3 ಎಕರೆ 5 ಎಕರೆ ಭೂಮಿ ಗುತ್ತಿಗೆ ಪಡೆದು ಅಥವಾ ಖರೀದಿಸಿ ಸುತ್ತಮುತ್ತಲಿನ ಅರಣ್ಯ ನಾಶ ಮಾಡುತ್ತಿದ್ದಾರೆ ಎಂಬ ದೂರಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಲ ಕಾಲಕ್ಕೆ ಸ್ಯಾಟಲೈಟ್ ಚಿತ್ರಗಳ ಮೂಲಕ ಪರಿಶೀಲನೆ ನಡೆಸಿ, ಅರಣ್ಯನಾಶವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಸೂಚಿಸಿದರು.

ಇದನ್ನೂ ಓದಿ: Congress Protest : ಪ್ರೊಟೆಸ್ಟ್‌ ವಾರ್!‌ ಕೇಂದ್ರದಿಂದ ಅನ್ಯಾಯ ಎಂದ ಕಾಂಗ್ರೆಸ್‌ಗೆ ʼಚಾನ್ಸೇ ಇಲ್ಲʼ ಎಂದ ಬಿಜೆಪಿ!

ಸ್ವಾರ್ಥಕ್ಕಾಗಿ ಒತ್ತುವರಿ; ಕಠಿಣ ಕ್ರಮ

ಅದೇ ರೀತಿ 1978ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು 3 ಎಕರೆಗಿಂತ ಕಡಿಮೆ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ಮತ್ತು ಸಣ್ಣ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಜನರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸದಂತೆ ಮತ್ತು ಹತ್ತಾರು ಎಕರೆ ಭೂಮಿಯನ್ನು ಸ್ವಾರ್ಥಕ್ಕಾಗಿ ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

Exit mobile version