ಬೆಂಗಳೂರು: ನಗರದ ಬೈಯ್ಯಪ್ಪನಹಳ್ಳಿ ಬಳಿಯ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಜೂ.6ರಂದು ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ಹಸಿರು ನಿಶಾನೆ ತೋರಲಿದೆ.
ಕಾಮಗಾರಿ ಮುಗಿದು 14 ತಿಂಗಳ ನಂತರ ಟರ್ಮಿನಲ್ ಲೋಕಾರ್ಪಣೆಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಮೂರು ದಿನ ಬೆಂಗಳೂರಿನಿಂದ ಹೊರಡುವ ಬಾಣಸವಾಡಿ-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು (ರೈಲು ಗಾಡಿ ಸಂಖ್ಯೆ 12684), ಬಾಣಸವಾಡಿ-ತಿರುವನಂತಪುರಂ (16320), ಬಾಣಸವಾಡಿ-ಪಾಟ್ನಾ(22354) ರೈಲುಗಳ ಸಂಚಾರ ಈ ಟರ್ಮಿನಲ್‌ನಿಂದ ಆರಂಭವಾಗಲಿದೆ.
ಇದನ್ನೂ ಓದಿ | ರೈಲಿನಲ್ಲಿ ಹಸುಳೆಗಳಿಗಾಗಿ ʼಬೇಬಿ ಬರ್ತ್ ́, ತಾಯಿ-ಮಕ್ಕಳಿಗೆ ಇನ್ನು ಆರಾಮ ಪಯಣ
ಬೈಯಪ್ಪನಹಳ್ಳಿ ಹಾಗೂ ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ನಿರ್ಮಾಣವಾಗಿರುವ ಸರ್ ಎಂ.ವಿ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡು 14 ತಿಂಗಳುಗಳೇ ಕಳೆದರೂ ಕಾರ್ಯಾಚರಣೆ ಆರಂಭವಾಗಿರಲಿಲ್ಲ. ಪ್ರಧಾನಮಂತ್ರಿ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು, ಆದರೆ ಇದನ್ನು ನೈರುತ್ಯ ರೈಲ್ವೆ ಅಲ್ಲಗಳೆದಿದೆ.
ಯಶವಂತಪುರ ಮತ್ತು ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ನಿಲ್ದಾಣ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ₹300 ಕೋಟಿ ವೆಚ್ಚದಲ್ಲಿ 4,200 ಚದರ ಮೀಟರ್ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣ ರೀತಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಟರ್ಮಿನಲ್ ಅನ್ನು ನಿರ್ಮಿಸಲಾಗಿದೆ. ಇದು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ(ಎಸಿ) ಟರ್ಮಿನಲ್ ಆಗಿದ್ದು, ಏಳು ಸ್ಟಬ್ಲಿಂಗ್ ಲೈನ್ ಹಾಗೂ ಮೂರು ಪಿಟ್ ಲೈನ್ ಹೊಂದಿದೆ.
ಇದನ್ನೂ ಓದಿ | ರೈಲಿನಲ್ಲಿ ಹಸುಳೆಗಳಿಗಾಗಿ ʼಬೇಬಿ ಬರ್ತ್ ́, ತಾಯಿ-ಮಕ್ಕಳಿಗೆ ಇನ್ನು ಆರಾಮ ಪಯಣ