Site icon Vistara News

ಸಾಮಾಜಿಕ ಬದ್ಧತೆಯ ಸಂಸ್ಥೆಯಂತಿದ್ದ ಸರ್‌ ಎಂ. ವಿಶ್ವೇಶ್ವರಯ್ಯ : ತಿಮ್ಮಪ್ಪ ಭಟ್ ವ್ಯಾಖ್ಯಾನ

KaSaPa

ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ ಅವರು ಕೇವಲ ವ್ಯಕ್ತಿಯಲ್ಲ, ಸಾಮಾಜಿಕ ಬದ್ಧತೆಯ ಸಂಸ್ಥೆಯಂತೆ ಇದ್ದವರು. ಶಿಸ್ತು ಮತ್ತು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಂಡಿದ್ದರು. ಸಮಾಜಕ್ಕಾಗಿ ಜೀವನ ನಡೆಸುವ ಮೂಲಕ ಸಾರ್ವಕಾಲಿಕ ಪ್ರಸ್ತುತತೆ ಪಡೆದವರು ಎಂದು ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿಯನ್ನು ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಿಮ್ಮಪ್ಪ ಭಟ್‌ ಅವರು ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ‌

ಚೌಕಟ್ಟಿಗೆ ಸಿಲುಕದ ಸರ್‌ ಎಂ.ವಿ

ಹಳೆ ಮೈಸೂರು ಭಾಗದ ಪ್ರತಿಯೊಬ್ಬರ ಮನೆಯಲ್ಲೂ ಸರ್ ಎಂ.ವಿ. ಅವರನ್ನು ಇಂದಿಗೂ ಪೂಜಿಸುತ್ತಾರೆ. ಒಂದು ರೀತಿಯಲ್ಲಿ ದಂತ ಕಥೆಯಾಗಿದ್ದ ಅವರು ಮಹಾನ್ ಚೇತನವಾಗಿದ್ದರು. ಸರ್ ಎಂ.ವಿ. ಅವರು ಮೌಲ್ಯಯುತ ಜೀವನ ನಡೆಸಿದ್ದರಿಂದ ಎಂದೂ ಒಂದು ಚೌಕಟ್ಟಿಗೆ ಸಿಲುಕಿದವರಲ್ಲ. ಹೊರನೋಟಕ್ಕೆ ಠಾಕುಠೀಕಿನ ಜೀವನ ಪದ್ಧತಿ ಅಳವಡಿಸಿಕೊಂಡಂತೆ ಕಂಡರೂ ವಾಸ್ತವದಲ್ಲಿ ಅವರು ಸಂತನಂತೆ ಜೀವನ ನಡೆಸಿದ್ದರು. ಉಡುಪಿನಲ್ಲಿ ಪೇಟ, ಟೈ, ಸೂಟು, ಬೂಟು ಇಲ್ಲದೇ ಯಾವತ್ತೂ ಅವರು ಹೊರಗೆ ಬಂದವರಲ್ಲ. ಇಂತಹ ಶಿಸ್ತಿನಲ್ಲಿಯೇ ಜೀವನದ ಮೌಲ್ಯವನ್ನು ಕಂಡುಕೊಂಡಿದ್ದರು ಎಂದು ಸ್ಮರಿಸಿದರು.

ಸಮಾಜದ ಬಗ್ಗೆ ತುಂಬ ಕಳಕಳಿ ಇದ್ದಿದ್ದರಿಂದ ಅವರು ಕಂಡ ಪ್ರತಿಯೊಂದು ಕನಸುಗಳು ನಾಡಿನ ಕನಸಾಗಿದ್ದವು. ಆ ಕನಸುಗಳನ್ನು ನನಸು ಮಾಡುವುದಕ್ಕೆ ಅವಿರತವಾಗಿ ಪ್ರಯತ್ನಿಸಿದರು. ಅವರ ಸಾಧನೆಯ ವ್ಯಾಪ್ತಿಯನ್ನು ನೋಡಿದರೆ ಅವರನ್ನು ಕೇವಲ ಎಂಜಿನಿಯರ್ ಎಂದು ಕರೆಯುವುದು ತಪ್ಪಾಗುತ್ತದೆ. ಅವರೊಬ್ಬ ಮುತ್ಸದ್ದಿಯಾಗಿದ್ದರು. ಹಾಗಾಗಿಯೇ, ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ನೀರಾವರಿ, ಕಲೆ, ಸಾಹಿತ್ಯ, ನಾಡು-ನುಡಿಯ ಏಳಿಗೆ ಸಾಧ್ಯವಾಯಿತು ಎಂದು ತಿಳಿಸಿದರು.

ಅವರ ಬದುಕೇ ನಮಗೆ ಮಾರ್ಗದರ್ಶಿ

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕನ್ನಡದ ಕಟ್ಟಾಳು, ಶಿಸ್ತುಬದ್ಧ ಜೀವನ ಹಾಗೂ ಸಮಯ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಬದುಕು ನಮಗೆಲ್ಲ ಮಾರ್ಗದರ್ಶಿ. ಅವರ ೧೦೨ ವರ್ಷದ ತುಂಬು ಜೀವನದಲ್ಲಿ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವ ಮೂಲಕ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.

ನಿಷ್ಠುರ ವ್ಯಕ್ತಿತ್ವದ ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ ಇತ್ತು. ಗಟ್ಟಿತನದಿಂದ ವಿಷಯಗಳನ್ನು ಮಂಡಿಸುತ್ತಿದ್ದರು. ನಾಡಿನ ಬಗೆಗಿನ ಕಾಳಜಿ ಮತ್ತು ದೂರದೃಷ್ಟಿತ್ವವನ್ನು ಅವರು ಹೊಂದಿದ್ದರಿಂದ ಎಲ್ಲರೂ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣವನ್ನು ನಿರ್ಮಾಣ ಮಾಡಿದ್ದರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿ ಸಂಸ್ಥಾಪಕರಲ್ಲಿ ಒಬ್ಬರಾದ ಸರ್ ಎಂ.ವಿ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳಲ್ಲಿ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಘಟಕಗಳಲ್ಲಿ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆಯನ್ನು ನಾಡಿನಾದ್ಯಂತ ಇರುವ ಎಲ್ಲ ಘಟಕಗಳಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದರು.

ಕಸಾಪ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಸ್ವಾಗತಿಸಿದರು. ಕೆ. ಮಹಾಲಿಂಗಯ್ಯ ವಂದಿಸಿದರು. ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ ಪಾಂಡು ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ | Engineers Day | ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಶ್ವೇಶ್ವರಯ್ಯರ ಹತ್ತು ಹೇಳಿಕೆಗಳು ಇವು

Exit mobile version