ಶಿರಸಿ: ಇಲ್ಲಿನ ವಿಶೇಷ ಚೇತನ ಯುವತಿಯೊಬ್ಬರು ಕಳೆದ 8 ವರ್ಷಗಳಿಂದ ನೋಟ್ ಬುಕ್ ಮೇಲೆ ಶ್ರೀ ರಾಮನ ನಾಮ (Shri Rama Nama) ಬರೆಯುತ್ತಲೇ ಇದ್ದಾರೆ. ಹಗಲಿಡೀ ಬರೆಯುವ ಅವರು ಇದುವರೆಗೂ ಸಾವಿರಾರು ನೋಟ್ ಬುಕ್‌ಗಳನ್ನು (Note Book) ರಾಮನ ನಾಮದಲ್ಲಿಯೇ ತುಂಬಿಸಿದ್ದಾರೆ.
ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ತುಡುಗುಣಿಯ ವಿಶೇಷ ಚೇತನ ಯುವತಿ ಸುವರ್ಣ ಸತ್ಯನಾರಾಯಣ ಭಟ್, ಹುಟ್ಟಿದ ನಾಲ್ಕೈದು ದಿನಗಳಲ್ಲಿಯೇ ಕಾಮಾಲೆ ರೋಗಕ್ಕೆ ಒಳಗಾಗಿ ದೇಹದ ಒಂದು ಭಾಗದ ಸ್ವಾಧೀನ ಕಳೆದುಕೊಂಡಿದ್ದಾರೆ. ಮಾತೂ ಸ್ಪಷ್ಟವಾಗಿ ಬಾರದಿದ್ದಾಗ ಶಾಲೆಗೆ ತೆರಳಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಬಾಲ್ಯದಿಂದಲೂ ಶ್ರೀ ರಾಮನ ಪರಮ ಭಕ್ತೆಯಾಗಿ ಬೆಳೆದಿದ್ದಾರೆ ಸುವರ್ಣಾ ಭಟ್. ಆಕೆಯ ಸಂಬಂಧಿಯೋರ್ವರು ಶ್ರೀ ರಾಮನ ನಾಮವನ್ನು ಹೇಗೆ ಬರೆಯುವುದು ಎಂದು ಅವರಿಗೆ ಕಲಿಸಿಕೊಟ್ಟಿದ್ದಾರೆ. ಆ ಬಳಿಕ ಸಿಕ್ಕ ಸಿಕ್ಕ ಪೇಪರ್, ಹಾಳೆಯ ಮೇಲೆ ಅವರು ರಾಮನ ನಾಮವನ್ನು ಬರೆಯುತ್ತ ಸಾಗಿದ್ದಾರೆ.
ಇದನ್ನೂ ಓದಿ: Ayodhya Rama Mandir : ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ; 22ರಂದೇ ಭೂಮಿ ಪೂಜೆ
ರಾಮ ನಾಮ ಬರೆಯುವ ಅವರ ಆಸಕ್ತಿಯನ್ನು ಗಮನಿಸಿದ ಸ್ಥಳೀಯ ಶಾರದಾ ಎನ್ನುವವರು ಆಕೆಗೆ ಒಂದಿಷ್ಟು ನೋಟ್ ಬುಕ್, ಪೆನ್ನು, ಪೆನ್ಸಿಲ್‌ಗಳನ್ನು ಪೂರೈಸಿದ್ದಾರೆ. ಆದರೆ, ಅದೂ ಕೆಲ ದಿನಗಳಲ್ಲಿಯೇ ಖಾಲಿಯಾಗಿತ್ತು. ಆದರೆ, ಶಾರದಾ ಸುವರ್ಣಾಳ ಆಸಕ್ತಿಯನ್ನು ಗಮನಿಸಿ ಆಕೆ ರಾಮ ನಾಮ ಬರೆದಷ್ಟೂ ನೋಟ್ ಬುಕ್‌ಗಳನ್ನು, ಪೆನ್ನುಗಳನ್ನೂ ಪೂರೈಸಿದ್ದಾರೆ.
ಮನೆಯಲ್ಲಿ ರಾಮ ನಾಮ ಹೊಂದಿದ ಪಟ್ಟಿಗಳ ರಾಶಿಯೇ ಆದಾಗ ಅವುಗಳನ್ನು ಏನು ಮಾಡಬೇಕು ಎಂಬುದೂ ಕುಟುಂಬವನ್ನು ಕಾಡಿತು. ತಾಯಿ ಗಂಗಾ ಭಟ್ ರಾಮತಾರಕ ಜಪ ನಡೆಯುವ ಸ್ಥಳಗಳನ್ನು ಸಂಪರ್ಕಿಸಿ, ಆ ಪಟ್ಟಿಗಳನ್ನು ಸಮರ್ಪಿಸುತ್ತಿದ್ದಾರೆ. ತುಡುಗುಣಿ ನಿವಾಸ ತ್ಯಜಿಸಿ ಶಿರಸಿಯ ಕೆಎಚ್‌ಬಿ ಕಾಲೋನಿಗೆ ಅವರ ಕುಟುಂಬ ಬಂದಿದೆ. ಆದರೆ ಸುವರ್ಣಾಳ ರಾಮನಾಮ ಬರವಣಿಗೆಗೆ, ಧ್ಯಾನಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ.
ಇದನ್ನೂ ಓದಿ: India vs England, 1st Test: ಕೋಚ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಶ್ರೀ ರಾಮ ತನ್ನ ಜೀವನದಲ್ಲಿ ಬಂದೇ ಬರುತ್ತಾನೆ. ಶಕ್ತಿ ಇರದ ದೇಹಕ್ಕೆ ಮತ್ತೆ ಶಕ್ತಿ ತುಂಬುತ್ತಾನೆ. ರಾಮ ನಾಮವನ್ನು ಸ್ಪಷ್ಟವಾಗಿ ಉಚ್ಛರಿಸುವ ಶಕ್ತಿಯನ್ನು ತನಗೆ ನೀಡೇ ನೀಡುತ್ತಾನೆ ಎಂಬ ಅಚಲ ನಂಬಿಕೆ ಇಟ್ಟಿದ್ದಾರೆ ಶ್ರೀರಾಮ ಭಕ್ತೆ ಸುವರ್ಣಾ ಭಟ್.