Site icon Vistara News

Sirsi News: ಅಂಗನವಾಡಿ ಮಕ್ಕಳ ನೀರಿನ ಕೊರತೆ ನೀಗಿಸಲು ಏಕಾಂಗಿಯಾಗಿ ಬಾವಿ ತೋಡುತ್ತಿರುವ ಮಹಿಳೆ!

A woman started digging a well to solve the lack of water for Anganwadi children

ಶಿರಸಿ: ತಮ್ಮ ಇಳಿ ವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ಎರಡು ಬಾವಿ (Well) ತೋಡಿ ಸುದ್ದಿಯಾಗಿದ್ದ ಮಹಿಳೆ ಇದೀಗ ಮತ್ತೊಂದು ಮಹತ್ತರ ಸಾಧನೆಗೆ ಮುಂದಾಗಿದ್ದು, (Sirsi News) ಅಂಗನವಾಡಿ ಮಕ್ಕಳಿಗೆ ನೀರಿನ ಕೊರತೆ ನೀಗಿಸುವುದಕ್ಕೆ ಮತ್ತೊಂದು ಬಾವಿ ತೋಡಲು ಆರಂಭಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಒಬ್ಬರೇ ಬಾವಿ ತೋಡುವ ಮೂಲಕ ಬೆರಗು ಮೂಡಿಸಿದ್ದ ಉ.ಕ ಜಿಲ್ಲೆ ಶಿರಸಿಯ ಗಣೇಶ ನಗರದ ಗೌರಿ ಸಿ. ನಾಯ್ಕ ಎಂಬ ಮಹಿಳೆ ಈ ಸಾಹಸಕ್ಕೆ ಮುಂದಾದವರು. 55 ವರ್ಷದ ಇವರ ಉತ್ಸಾಹ, ಸಾಹಸ ನಿಜಕ್ಕೂ ಮೆಚ್ಚುವಂತದ್ದು, ಗಣೇಶ ನಗರದ ಅಂಗನವಾಡಿ ಕೇಂದ್ರ-6ರ ಆವಾರದ ಹಿಂಬದಿಯಲ್ಲಿ ಏಕಾಂಗಿಯಾಗಿ ಬಾವಿ ತೋಡುವ ಕೆಲಸದಲ್ಲಿ ಇವರೀಗ ನಿರತರಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಕೆಲಸ ನಡೆಸುತ್ತಿದ್ದು ಸುಮಾರು ಆರೆಂಟು ಅಡಿ ತೋಡಿದ್ದಾರೆ.

ನಗರದ ಸಮೀಪವಿದ್ದರೂ ಗಣೇಶನಗರ ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶ. ಇಲ್ಲಿ ಬೇಸಿಗೆಯಲ್ಲಿ ನೀರಿನ ಬವಣೆ ತೀರಾ ಎದುರಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆಯಾದರೂ ಸ್ಥಳೀಯವಾಗಿ ನೀರಿನ ಮೂಲ ಸಿಗುತ್ತಿಲ್ಲ. ಹೀಗಾಗಿ ಬೇಸಿಗೆ ಬಂತೆಂದರೆ ನೀರಿನ ಬವಣೆ ಶುರುವಾಗುತ್ತದೆ. ಸಾಕಷ್ಟು ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆಯಿಲ್ಲದೇ ತೊಂದರೆಯಾಗಿದೆ. ಇಂತಹ ಪ್ರದೇಶದಲ್ಲಿ ಮಣ್ಣನ್ನು ಅಗೆದು ಸುಮಾರು 4 ಅಡಿ ಸುತ್ತಳತೆಯ ಬಾವಿ ತೋಡಿ ನೀರು ಉಕ್ಕಿಸುವ ಪ್ರಯತ್ನಕ್ಕೆ ಮಹಿಳೆ ಮುಂದಾಗಿರುವುದು ಜನರ ಗಮನ ಸೆಳೆಯುತ್ತಿದೆ. ಮಹಿಳೆಯ ಈ ಕಾರ್ಯವು ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಇದನ್ನೂ ಓದಿ: Hotels in Bangalore : ಇನ್ನು ಮುಂದೆ ಬೆಂಗಳೂರಿನಲ್ಲಿ ಹೋಟೆಲ್‌ಗಳು 24X7 ಓಪನ್‌

ಮಹಿಳೆಯ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಈ ಮಹಿಳೆಯ ಸಾಧನೆಯನ್ನು ಗಮನಿಸಿದ ರಾಜ್ಯ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವರ್ಣವಲ್ಲಿ ಮಠ, ಮುರುಘಾ ಮಠ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದ್ದವು.

ಗಂಗೆ ತರಿಸಿದ ಗೌರಿ‌

ನೀರಿನ ಕೊರತೆ ನೀಗಿಸಬೇಕು ಎಂಬ ಕಾರಣಕ್ಕೆ ಗೌರಿ ಸಿ. ನಾಯ್ಕ ಅವರು ತಮ್ಮ ಮನೆಯ ಹಿಂಬದಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ಒಬ್ಬರೇ ಸುಮಾರು 65 ಅಡಿ ಆಳದ ಬಾವಿ ತೋಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮನೆಯ ಹಿಂಬದಿಯಲ್ಲಿ ಸುಮಾರು 45 ಅಡಿ ಆಳದ ಇನ್ನೊಂದು ಬಾವಿ ತೋಡಿದ್ದರು. ಈಗ ಇಲ್ಲಿಯ ಅಂಗನವಾಡಿಯ ನೀರಿನ ತೊಂದರೆ ನೀಗಿಸಿಲು ಸ್ವ ಆಸಕ್ತಿಯಿಂದ ಇನ್ನೊಂದು ಬಾವಿ ತೆಗೆಯುವ ಸಾಹಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: Job Alert: ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಲ್ಲಿದೆ 1,025 ಹುದ್ದೆ; ಇಂದಿನಿಂದಲೇ ಅರ್ಜಿ ಸಲ್ಲಿಸಿ

ಗಣೇಶ ನಗರದ ಅಂಗನವಾಡಿ ಕೇಂದ್ರ-6ರಲ್ಲಿ ಸುಮಾರು 15 ಮಕ್ಕಳು ಇದ್ದಾರೆ. ಹುತ್ಗಾರ ಗ್ರಾಮ ಪಂಚಾಯಿತಿಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಆದರೆ ಕುಡಿಯುವುದಕ್ಕೆ ಹತ್ತಿರದ ಬಾವಿಯಿಂದ ನಿತ್ಯ ನೀರು ಹೊತ್ತು ತರಬೇಕಾಗುತ್ತದೆ. ಇದನ್ನು ಗಮನಿಸಿದ್ದ ಗೌರಿ ನಾಯ್ಕ ಅವರು ಇದೀಗ ಅವರೇ ಸ್ವಯಂ ಆಗಿ ಬಾವಿ ತೋಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

– ಜ್ಯೋತಿ ನಾಯ್ಕ. ಅಂಗನವಾಡಿ ಶಿಕ್ಷಕಿ

ಇದು ನಾನು ತೋಡುತ್ತಿರುವ ಮೂರನೇ ಬಾವಿ. ಇದರಿಂದ ಅಂಗನವಾಡಿ ಮಕ್ಕಳಿಗಷ್ಟೇ ಅಲ್ಲದೇ ಸುತ್ತಮುತ್ತಲಿನ ಜನರಿಗೂ ನೀರಿನ ಉಪಯೋಗ ಆಗಬೇಕು ಎಂಬುದು ನನ್ನ ಅಪೇಕ್ಷೆ.

-ಗೌರಿ ನಾಯ್ಕ, ಬಾವಿ ತೋಡುತ್ತಿರುವ ಮಹಿಳೆ

Exit mobile version