Site icon Vistara News

Sirsi News: ಉಡಳ್ಳಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿಕೊಂಡ್ರು ಅಂಗನವಾಡಿ ಕೇಂದ್ರ!

Anganwadi center built by the villagers in Udalli

ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ(ಸಿದ್ದಾಪುರ): ಬಾಲ್ಯ ಶಿಕ್ಷಣದಿಂದ ವಂಚಿತವಾಗುವುದನ್ನು ತಪ್ಪಿಸಲು ಸರ್ಕಾರ ಅಂಗನವಾಡಿಗಳನ್ನು ತೆರೆದಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ನಾನಾ ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇದ್ದ ಕೆಲ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದರೂ ಕೆಲ ತಿಂಗಳಿಂದ ಬಾಡಿಗೆ ಕೂಡ ಕಟ್ಟಿಲ್ಲ. ಸರ್ಕಾರದ ಈ ವಿಳಂಬ ನೀತಿಗೆ ರೋಸಿ ಹೋದ ಬಿಳೆಗೋಡ ಭಾಗದ ಉಡಳ್ಳಿ ಗ್ರಾಮದ ಜನರು ತಾವೇ ತಾತ್ಕಾಲಿಕ ಅಂಗನವಾಡಿ ಕೇಂದ್ರವನ್ನು (Anganwadi center) ನಿರ್ಮಿಸಿಕೊಂಡಿದ್ದಾರೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳೆಗೋಡ ಭಾಗದ ಉಡಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ಕಳೆದ ವರ್ಷ ಅಂಗನವಾಡಿಯಲ್ಲಿ ಮಕ್ಕಳನ್ನು ಕೂರಿಸಲು ಶಿಥಿಲಾವಸ್ಥೆಯಾಗಿದ್ದರಿಂದ ಅಧಿಕಾರಿಗಳು ಬಾಡಿಗೆ ಕಟ್ಟಡ ನೋಡಲು ಸೂಚಿಸಿದ್ದರು. ಆದರೆ ಗ್ರಾಮದಲ್ಲಿ ಬಾಡಿಗೆ ಕಟ್ಟಡ ಸಿಗದ ಕಾರಣ ಗ್ರಾಮದಲ್ಲಿಯೇ ಓರ್ವರು ತಮ್ಮ ಮನೆಯ ಒಂದು ಕೋಣೆಯನ್ನೇ ಮೂರು ತಿಂಗಳ ಅವಧಿಗೆ ಮಕ್ಕಳ ವಿದ್ಯಾರ್ಜನೆಗೆ ನೀಡಿದ್ದರು. ಇತ್ತ ಕಟ್ಟಡ ಮಂಜೂರಾತಿಗಾಗಿ ಕಾದು ಕುಳಿತ್ತಿದ್ದ ಗ್ರಾಮಸ್ಥರು ಇಲಾಖೆಗಳಿಗೆ, ಅಧಿಕಾರಿಗಳಿಗೆ ಅದೆಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: Year Ender 2023: ಈ ವರ್ಷ ಹೆಚ್ಚು ಜನಪ್ರಿಯವಾದ ಸಿರಿಧಾನ್ಯಗಳಿವು

ಇತ್ತ ಮನೆಯವರು ಕೊಟ್ಟ ಅವಧಿ ಕೂಡ ಮುಕ್ತಾಯಗೊಂಡ ಕಾರಣ ಇದೀಗ ಉಡಳ್ಳಿ, ಬಿಳೆಗೋಡ ಗ್ರಾಮಸ್ಥರು ಸೇರಿ ಹಳೇ ಅಂಗನವಾಡಿ ಕಟ್ಟಡದ ಬಳಿಯೇ ತಗಡಿನ ಶೀಟ್ ಬಳಸಿ ತಾತ್ಕಾಲಿಕ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಪೂಜೆ ಸಲ್ಲಿಸಿ ಅಂಗನವಾಡಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಆರಂಭ ಮಾಡಿದ್ದಾರೆ. ಗ್ರಾಮದಲ್ಲಿರುವ ಅಂಗನವಾಡಿ ಶಿಥಿಲಗೊಂಡು ಹಲವು ವರ್ಷ ಕಳೆದಿದ್ದು, ಈವರೆಗೂ ಕಟ್ಟಡ ಮಂಜೂರಾಗಿಲ್ಲ.‌

ಇನ್ನು ಜಿಲ್ಲೆಯಲ್ಲಿ 2782 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 322 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಂಗನವಾಡಿಗಳಿಗೆ ಕಳೆದ ಏಪ್ರಿಲ್ ತಿಂಗಳಿನಿಂದ ಇದುವರೆಗೆ ಸುಮಾರು 8 ತಿಂಗಳ ಬಾಡಿಗೆ ಹಣ ಸರ್ಕಾರದಿಂದ ಪಾವತಿಯಾಗಿಲ್ಲ. ಹೀಗಾಗಿ ಅಂಗನವಾಡಿ ಸಿಬ್ಬಂದಿಯೇ ತಮ್ಮ ವೇತನದಲ್ಲಿಯೇ ಪ್ರತಿ ತಿಂಗಳ ಬಾಡಿಗೆಯನ್ನು ಪಾವತಿಸಬೇಕಾಗಿದೆ.

ಒಟ್ಟಿನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಸರ್ಕಾರ, ಅಂಗನವಾಡಿಗಳ ಬಾಡಿಗೆ ಹಾಗೂ ಕಟ್ಟಡ ಮಂಜೂರಿಗೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನಿಜಕ್ಕೂ ದುರಂತದ ಸಂಗತಿ. ಇನ್ನಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತು ಅಂಗನವಾಡಿಗಳ ಬಾಡಿಗೆ ಹಾಗೂ ಕಟ್ಟಡ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಇದನ್ನೂ ಓದಿ: Vistar Explainer: 125 ವರ್ಷ ಹಳೆಯ ಅಂಚೆ ಕಚೇರಿ ಕಾಯ್ದೆ ಬದಲಿಗ ಹೊಸ ವಿಧೇಯಕ! ಯಾಕೆ ವಿರೋಧ?

ಅಂಗನವಾಡಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ಅಂಗನವಾಡಿ ಬಿಟ್ಟರೆ ನಾಲ್ಕೈದು ಕಿ.ಮೀ ದೂರ ಹೋಗಬೇಕಿದೆ. ಆದ್ದರಿಂದ ಕೂಡಲೇ ಸರ್ಕಾರ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ತುರ್ತಾಗಿ ನಿರ್ಮಾಣ ಮಾಡಬೇಕು.
ತಿಲಕ್ ಕೃಷ್ಣಾ ಗೌಡ, ಗ್ರಾಮಸ್ಥರು.

ಅಂಗನವಾಡಿಗಳ ಬಾಡಿಗೆ ಪಾವತಿ ವಿಳಂಬವಾಗಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಇದೀಗ ಮತ್ತೊಮ್ಮೆ ಖುದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
| ಈಶ್ವರ ಕಾಂದೂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉತ್ತರಕನ್ನಡ.

Exit mobile version