Site icon Vistara News

Sirsi News: ದಾಂಡೇಲಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ; ಓರ್ವನ ಬಂಧನ

Attack on duty police in Dandeli Arrest of a person

ದಾಂಡೇಲಿ: ಕರ್ತವ್ಯ ನಿರತ ಪೊಲೀಸ್ (Police) ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ (Attack) ಮಾಡಿದ ಘಟನೆ ಮಂಗಳವಾರ ರಾತ್ರಿ ಉ.ಕ ಜಿಲ್ಲೆ ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿ ನಡೆದಿದೆ.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಮಂಗಳವಾರ ಸಂಜೆ ಸಂಗೊಳ್ಳಿ ರಾಯಣ್ಣ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ನಗರದ ಕೆ.ಸಿ.ವೃತ್ತದಿಂದ ಲಿಂಕ್ ರಸ್ತೆಗೆ ಬರುತ್ತಿದ್ದಂತೆಯೆ ಲಿಂಕ್ ರಸ್ತೆಯಲ್ಲಿ ಮೆರವಣಿಗೆಗೆ ಭದ್ರತೆಯನ್ನು ಒದಗಿಸುತ್ತಿದ್ದ ಪೊಲೀಸ್ ಸಿಬ್ಬಂದಿ ದೇವಪ್ಪ ಹೊಸಮನಿ ಎಂಬವರ ಮೇಲೆ ಯುವಕನೋರ್ವ ಏಕಾಏಕಿ ಕೈಯಲ್ಲಿ ಹಿಡಿದಿದ್ದ ಖಡ್ಗದಿಂದ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ದೇವಪ್ಪ ಹೊಸಮನಿಯವರ ತಲೆಗೆ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೆ ಗಾಯಗೊಂಡಿರುವ ದೇವಪ್ಪ ಹೊಸಮನಿಯವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದ್ದು, ತಲೆಗೆ ಗಾಯವಾಗಿರುವ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಇದೀಗ ಧಾರವಾಡಕ್ಕೆ ಕೊಂಡೊಯ್ಯಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.

ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಹಲ್ಲೆ ಮಾಡಿದ ಯುವಕನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹಲ್ಲೆ ಮಾಡಿದ ಯುವಕ ಸ್ಥಳೀಯ ಸಾಯಿನಗರದ ನಿವಾಸಿ ಅಭಿಷೇಕ್ ಎಂದು ತಿಳಿದು ಬಂದಿದ್ದು, ಇದೀಗ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ

ಸಾರ್ವಜನಿಕ ಆಸ್ಪತ್ರೆಗೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸೈಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ.ಎಸ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version