-ಭಾಸ್ಕರ್ ಆರ್ ಗೆಂಡ್ಲ, ವಿಸ್ತಾರ ನ್ಯೂಸ್
ಶಿರಸಿ: ಹೆಸರಿಗೆ ಮಾತ್ರ ಇದು ರಾಷ್ಟ್ರೀಯ ಹೆದ್ದಾರಿ (National Highway) . ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಹೆದ್ದಾರಿ ಸಂಪೂರ್ಣ ಹದೆಗೆಟ್ಟಿದೆ. ಗುಂಡಿ ಬಿದ್ದ ರಸ್ತೆಗೆ ಮರು ಡಾಂಬರೀಕರಣ ಮಾಡದೇ ಕ್ರಷರ್ ಪುಡಿ ಹಾಕಲಾಗಿದ್ದು, ಇದರಿಂದ ಉಂಟಾಗುತ್ತಿರುವ ಧೂಳಿನಿಂದಾಗಿ (Dust) ದಿನನಿತ್ಯ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.
ಹೌದು, ಹುಬ್ಬಳ್ಳಿ-ಶಿರಸಿ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಇದು. ಸಾಗರಮಾಲ ಯೋಜನೆಯಲ್ಲಿ ಕುಮಟಾ-ತಡಸ್ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಅನುದಾನ ನೀಡಿದ್ದು, ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆ ಕಂಪನಿ ಹಾಗೂ ಇಲಾಖೆ ಮೌನವಹಿಸಿದ್ದು, ಹೊಂಡ-ಗುಂಡಿಗಳಿಗೆ ಮರು ಡಾಂಬರೀಕರಣ ಮಾಡದೇ ಕ್ರಷರ್ ಪುಡಿಯನ್ನು ಹಾಕಿದೆ. ಇದರಿಂದ ವಾಹನ ಸವಾರರಿಗೆ ನರಕದರ್ಶನವಾಗುವುದರ ಜತೆ ಧೂಳಿನ ಸ್ನಾನ, ಧೂಳು ಸೇವಿಸುವ ಸ್ಥಿತಿಯನ್ನು ಎದುರಿಸುವಂತಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.
ಇದನ್ನೂ ಓದಿ: Financial Resolutions : 2024ರಲ್ಲಿ ಶ್ರೀಮಂತರಾಗಲು 9 ಸೂತ್ರಗಳು
ರಸ್ತೆಯ ದುಸ್ಥಿತಿಯಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು, ಬೈಕ್ ಸವಾರರು ದಿನನಿತ್ಯ ನಿಯಂತ್ರಣ ತಪ್ಪಿ ಉರುಳಿ ಬೀಳುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕೆಮ್ಮು, ನೆಗಡಿ, ಕಫ ಸೇರಿದಂತೆ ಹಲವು ಅನಾರೋಗ್ಯ ಉಂಟಾಗುತ್ತಿದೆ. ಜನಪ್ರತಿನಿಧಿಗಳು ಹುಬ್ಬಳ್ಳಿ-ಶಿರಸಿ ರಸ್ತೆ ಸರಿಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.
ಮಕ್ಕಳಲ್ಲಿ ಆರೋಗ್ಯ ಸಮಸ್ಯೆ
ನಗರದ ಕೆಲ ಖಾಸಗಿ ಶಾಲೆಗಳ ಮಕ್ಕಳು ಇದೇ ರಸ್ತೆಯ ಮೂಲಕ ತೆರಳುತ್ತಾರೆ. ಧೂಳು ಬಿಟ್ಟರೆ ಈ ರಸ್ತೆಯಲ್ಲಿಯೇ ಮತ್ತೇನೂ ಇಲ್ಲ. ದಿನ ನಿತ್ಯ ಮಕ್ಕಳು ಈ ರಸ್ತೆ ದಾಟಿಯೇ ಶಾಲೆಗೆ ತೆರಳಬೇಕು. ಈ ರಸ್ತೆಯಲ್ಲಿ ಒಂದು ವಾಹನ ಹೋದರೆ ಹಿಂಬದಿ ಧೂಳು ಆವರಿಸುತ್ತದೆ. ಶಾಲಾ ಮಕ್ಕಳು ಈ ವೇಳೆ ತೆರಳುವಾಗ ಧೂಳನ್ನೇ ಸೇವಿಸಿ ಶಾಲೆಗೆ ಹೋಗಬೇಕಿದೆ. ಇದರಿಂದ ಕೆಮ್ಮು ಹಾಗೂ ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: Belagavi Winter Session: ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಮಂಡನೆ; ಏರಲಿದೆಯೇ ದರ?
ಶಿರಸಿ-ಹುಬ್ಬಳ್ಳಿ, ಶಿರಸಿ-ಹಾವೇರಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಹೊಂಡಗಳನ್ನು ತಪ್ಪಿಸುವ ವೇಳೆ ಅಪಘಾತ ಉಂಟಾಗುತ್ತಿದೆ. ಹೆದ್ದಾರಿಯ ಹೊಂಡಗಳಿಗೆ ಕ್ರಷರ್ ಫೌಡರ್ ತುಂಬಿರುವುದರಿಂದ ಧೂಳು ಎದ್ದು ಹಾರುತ್ತಿದೆ. ಬಸ್ ಹಾಗೂ ಲಾರಿಗಳು ಸಂಚಾರ ಮಾಡಿದರೆ, ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಕಾಣದ ಸ್ಥಿತಿ ನಿರ್ಮಾಣವಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾಕಷ್ಟು ದೂರು ನೀಡಿದರೂ, ಸ್ಪಂದಿಸುತ್ತಿಲ್ಲ. ಈ ರಸ್ತೆಯಲ್ಲಿ ದಿನನಿತ್ಯ ಸಂಚಾರ ಮಾಡುವ ವಾಹನ ಸವಾರರಿಗೆ ಅಸ್ತಮಾ ರೋಗದ ಭೀತಿ ಎದುರಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.
ಶಿರಸಿ-ಹುಬ್ಬಳ್ಳಿಯ ರಸ್ತೆಯ ಗೌಡಳ್ಳಿಯಿಂದ ಮಳಲಗಾಂವರೆಗಿನ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ತಿರುಗಾಡುವ ಪರಿಸ್ಥಿತಿಯಿಲ್ಲ. ಬೃಹತ್ ವಾಹನಗಳು ಸಂಚಾರ ಮಾಡಿದರೆ ಬೈಕ್ ಸವಾರರಿಗೆ ರಸ್ತೆ ಕಾಣುವುದಿಲ್ಲ. ಅಷ್ಟೊಂದು ಧೂಳಿನಿಂದ ಕೂಡಿದೆ. ದುರಸ್ತಿ ಮಾಡಿ, ಅನುಕೂಲ ಕಲ್ಪಿಸಬೇಕು.
-ಇಬ್ರಾಹಿಂ ಸಾಬ್ ಗೌಡಳ್ಳಿ
ಈ ರಸ್ತೆಯ ಧೂಳಿನಿಂದಾಗಿ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ನೋಡಿದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕೂಡಲೇ ಈ ರಸ್ತೆ ಸರಿಪಡಿಸಬೇಕು.
-ಜಗ್ಗು ಜಿಪಗಿ, ಆಟೊ ಚಾಲಕ