Site icon Vistara News

Sirsi News: ಮುಂಬರುವ ಚುನಾವಣೆಯಲ್ಲಿ ನಾನೇ ಗೆದ್ದು ಬಂದು ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ: ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

Vishweshwar Hegde Kageri CM Basavaraj Bommai sirsi

#image_title

ಶಿರಸಿ: ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ಅದನ್ನು ಮಾಡೇ ಮಾಡುತ್ತೇನೆ, ಈ ಬಗ್ಗೆ ಸಂಶಯ ಬೇಡ. ಮುಂದಿನ ಬಾರಿ ನಾನೇ ಗೆದ್ದು ಬರೋದು, ಈಗ ಆಗದ ಅಭಿವೃದ್ಧಿ ಕೆಲಸಗಳನ್ನು (development work) ನಾನೇ ಮಾಡೋದು ಎಂದು ವಿಧಾನ ಸಭಾಧ್ಯಕ್ಷ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿಗಳ ಎದುರೇ ಘೋಷಿಸಿದ್ದಾರೆ.

ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ನಮ್ಮ ಕ್ಷೇತ್ರಕ್ಕೆ ಐದು ಸಾವಿರ ಹೆಚ್ಚುವರಿ ಮನೆಗಳನ್ನು ಮಂಜೂರಿ ಮಾಡಿಸಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗ್ರಾಮ ಪಂಚಾಯಿತಿಗಳಿಗೆ ಮನೆ ಹಂಚಿಕೆಗೆ ಟಾರ್ಗೆಟ್ ನೀಡಲಾಗಿದ್ದು, ಈಗಾಗಲೇ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುವ ಕಾರ್ಯ ನಡೆದು ಇಂದು ಮಂಜೂರಿ ಪತ್ರ ಕೊಡಲು ಸಿದ್ಧರಾಗಿದ್ದೇವೆ. ಆದರೆ, ಬಡವರ ಪರ, ವಸತಿರಹಿತರಿಗೆ ಮನೆ ಕೊಡುತ್ತಿರುವುದನ್ನು ಸಹಿಸಿಕೊಳ್ಳದ ಕೆಲವು ಶಕ್ತಿಗಳು ಅದಕ್ಕೆ ಅಡೆತಡೆ ಉಂಟು ಮಾಡಿ, ಬಡವರಿಗೆ ಮನೆ ಸಿಗದಂತಾಗಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಗೇರಿ ಹರಿಹಾಯ್ದರು.

ಇದನ್ನೂ ಓದಿ: Technology : ತಂತ್ರಜ್ಞಾನದ ಬಳಕೆಯಿಂದ ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ದೇಶ: ಪ್ರಧಾನಿ ಮೋದಿ

“ಮನೆ ನಂಬರ್ ಇದ್ದ ವಸತಿರಹಿತರಿಗೆ ಮನೆ ಕಟ್ಟಿಕೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಟ್ಟಿದ್ದೇನೆ. ಆ ಸಂದರ್ಭದಲ್ಲೂ ಕಾನೂನಿನ ತೊಡಕುಗಳನ್ನು ತೆಗೆದು ತೊಂದರೆ ನೀಡಿದರು. ಈಗ ಎರಡು ಸಾವಿರ ಮನೆಗಳನ್ನು ಸಿದ್ದಾಪುರಕ್ಕೆ ಕೊಡಲು ಮುಂದಾದರೆ ಅದಕ್ಕೂ ಅಡ್ಡಿಪಡಿಸುತ್ತಿದ್ದಾರೆ. ನಾನು ಮನೆ ಕೊಡಲು ಬದ್ಧನಾಗಿದ್ದೇನೆ, ಕೊಟ್ಟೇ ಕೊಡುತ್ತೇನೆ. ಮೊಸರಿನಲ್ಲಿ ಕಲ್ಲು ಹುಡುಕುವಂತಹ ಮತ್ತು ಹಾಲಿನಲ್ಲಿ ಹುಳಿ ಹಿಂಡುವಂಥ ಶಕ್ತಿಗಳು ಇಲ್ಲಿವೆ. ನಾನು ಇಂಥದಕ್ಕೆ ಹಿಂದೆ ಸರಿಯುವವನಲ್ಲ. ನಾನು ಜನಪರ, ಅಭಿವೃದ್ಧಿ ಪರವಾಗಿದ್ದವನು. ಯಾರೇ ಅಭಿವೃದ್ಧಿ ಪರ, ನಿಮ್ಮ ಪರವಾದ ಕೆಲಸಗಳಿಗೆ ಅಡ್ಡಿ ಆತಂಕ ಉಂಟು ಮಾಡಿದರೆ ಅವರನ್ನು ಧಿಕ್ಕರಿಸಿ ಆ ಕೆಲಸಗಳನ್ನು ಮಾಡಿಕೊಡುತ್ತೇನೆ. ಅಭಿವೃದ್ಧಿ ನಿಂತ ನೀರಲ್ಲ, ಅದು ನಿರಂತರವಾಗಿ ನಡೆಯುವಂಥದ್ದು. ಅದು ಯಾವತ್ತೂ ಮುಗಿಯಲ್ಲ. ಸಿದ್ದಾಪುರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ” ಎಂದರು.

ಇದನ್ನೂ ಓದಿ: Soldier’s Father Thrashed: ಗಲ್ವಾನ್‌ನಲ್ಲಿ ಹುತಾತ್ಮನಾದ ಯೋಧನ ತಂದೆ ಮೇಲೆ ಪೊಲೀಸರಿಂದ ಹಲ್ಲೆ, ಬಂಧನ

“ಸಚಿವ, ಶಾಸಕ, ಸಭಾಧ್ಯಕ್ಷನಾಗಿ ನಾನು ಮಾಡಿದ ಅಭಿವೃದ್ಧಿ ವೇಗ ನೋಡಿದ್ದೀರಿ. ಜನರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಸಹೋದರತ್ವದ ಮೂಲಕ ಜನಜೀವನ ನಿರ್ಮಾಣ ಮಾಡಬೇಕಾದದ್ದು ಜನಪ್ರತಿನಿಧಿಗಳ ಮೊದಲ ಜವಾಬ್ದಾರಿ. ನಮ್ಮ ಅಭಿವೃದ್ಧಿಗೆ ಬೇಕಾದ ವಾತಾವರಣ ಸೃಷ್ಟಿಸಿಕೊಂಡು, ಯಾವುದೇ ಭೇದಭಾವ ಮಾಡದೇ ಅಭಿವೃದ್ಧಿಗೆ ಮುಂದಾದವನು ನಾನು. ಆದರೆ ಇದನ್ನೇ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಕಾಗೇರಿಯವರಿಗೆ ಏನು ಮಾಡಬೇಕು ಎಂಬ ಪ್ರಶ್ನೆ ಅಂಥವರಿಗೆ ಕಾಡುತ್ತಿದೆ. ನನಗೆ ಏನೂ ಮಾಡಲು ಆಗಲ್ಲ‌‌. ಎಲ್ಲಿಯವರೆಗೆ ನೀವು ನನ್ನ ಜತೆ ಇರುತ್ತೀರೋ ನಾನು ನಿಮ್ಮ ಜತೆ ಇರುತ್ತೇನೆ” ಎಂದರು.

ಇದನ್ನೂ ಓದಿ: Lionel Messi: ಫಿಫಾ ವರ್ಷದ ಆಟಗಾರ ಪ್ರಶಸ್ತಿ ಪಡೆದ ಅರ್ಜೆಂಟೀನಾದ ಲಿಯೋನೆಲ್​ ಮೆಸ್ಸಿ

Exit mobile version